More

    ಲಕ್ಷ್ಮೀ ತಾಯಿ ಸೊಸೈಟಿಯಿಂದ ಜನರಿಗೆ ಅನುಕೂಲ

    ಸವದತ್ತಿ: ತಾಲೂಕಿನಲ್ಲಿ ಲಕ್ಷ್ಮೀತಾಯಿ ಸೌಹಾರ್ದ ಸೊಸೈಟಿ ಆರಂಭಿಸಿರುವುದು ಖುಷಿ ತಂದಿದೆ. ಇಲ್ಲಿನ ಜನರಿಗೆ ಇದರಿಂದ ಉದ್ಯೋಗಾವಕಾಶ ಹಾಗೂ ಆರ್ಥಿಕ ಅನುಕೂಲವಾಗಲಿದೆ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

    ಭಾನುವಾರ ಪಟ್ಟಣದ ಲಕ್ಷ್ಮೀತಾಯಿ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿಯ ಮೊದಲ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸೂಕ್ತ ಸಮಯದಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲ. ಆದರೆ, ಸಹಕಾರಿ ಸಂಘಗಳಿಂದ ಬಡವರಿಗೆ ಅನುಕೂಲವಾಗುತ್ತಿದೆ. ಇಂತಹ ಸಂಘಗಳು ಹೆಚ್ಚಾದಷ್ಟು ಅನುಕೂಲ. ಸಾಲ ಪಡೆದುಕೊಂಡವರು ಸೂಕ್ತ ಸಮಯದಲ್ಲಿ ಮರುಪಾವತಿಸಿದ್ದಲ್ಲಿ ಬೇರೆಯವರಿಗೂ ಅನುಕೂಲವಾಗಲಿದೆ ಎಂದರು.

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಲಕ್ಷ್ಮೀ ತಾಯಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮೂಲಕ ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಲಾಗುವುದು. ಕಬ್ಬು ಬೆಳೆಗಾರರು ಸೇರಿದಂತೆ ರೈತರಿಗೆ ಅನುಕೂಲವಾಗಲೆನ್ನುವ ಉದ್ದೇಶದಿಂದ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು ಇಡುವ ಠೇವಣಿಗೆ ಹೆಚ್ಚಿನ ಬಡ್ಡಿ ನೀಡಲಾಗುವುದು ಎಂದು ಭರವಸೆ ನೀಡಿದರು.

    ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಹಕಾರಿ ಸಂಘ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಬೈಲಹೊಂಗಲದಲ್ಲೂ ಶಾಖೆಯನ್ನು ಆರಂಭಿಸಿದರೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

    ಹೂಲಿ ಸಾಂಬಯ್ಯನವರ ಮಠದ ಉಮೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಹಾಗೂ ಲಕ್ಷ್ಮೀ ತಾಯಿ ಸೊಸೈಟಿಯ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts