More

    ಬಯಲಾಟಕ್ಕೆ ಕಳೆ ತಂದ ಶಂಕ್ರಪ್ಪ ಹೊರಪೇಟಿ: ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ

    ಅಳವಂಡಿ: ರಾಜ್ಯೋತ್ಸವ ಪ್ರಶಸ್ತಿಗೆ ಮೋರನಹಳ್ಳಿಯ ಬಯಲಾಟ (ದೊಡ್ಡಾಟ) ಕಲಾವಿದ ಹಾರ‌್ಮೋನಿಯಂ ಮಾಸ್ತರ್ ಶಂಕ್ರಪ್ಪ ಮಲ್ಲಪ್ಪ ಹೊರಪೇಟಿ ಭಾಜನರಾಗಿದ್ದು, ಅವರ ಶ್ರಮ ಮತ್ತು ಕಲೆಗೆ ಗೌರವ ಸಿಕ್ಕಿದೆ.

    ಬಡ ಕುಟುಂಬದ ಮಲ್ಲಪ್ಪ-ಮರಿಯಮ್ಮ ಅವರ ಹಿರಿಯ ಮಗನಾಗಿ 1952ರಲ್ಲಿ ಜನಿಸಿದ ಶಂಕ್ರಪ್ಪ, ಓದಿದ್ದು ಕೇವಲ ನಾಲ್ಕನೇ ತರಗತಿ. ಬಾಲ್ಯದಿಂದಲೂ ಇವರಿಗೆ ಭಜನೆ ಹಾಗೂ ಬಯಲಾಟದ ಕಡೆ ಒಲವು ಹೆಚ್ಚು. ಹೀಗಾಗಿ ಬಯಲಾಟ ಅವರನ್ನು ಕೈಬೀಸಿ ಕರೆಯಿತು. ವಿವಿಧ ಪಾತ್ರಗಳಾದ ಭೀಮ, ಆಂಜನೇಯ, ಲವಕುಶ, ಐರಾವಣ, ಸೀತಾದೇವಿ ಮುಂತಾದ ಪಾತ್ರಗಳಿಗೆ ಜೀವ ತುಂಬಿ ಮಿಂಚಿದರು. ಬಯಲಾಟದ ಕಲೆಗೆ ಜೀವನ ಸಮರ್ಪಿಸಿದ್ದಾರೆ.

    180ಕ್ಕೂ ಹೆಚ್ಚು ಬಯಲಾಟ ಪ್ರದರ್ಶನ ನೀಡಿದ್ದಾರೆ. ವಿರಾಟಪರ್ವ, ಲವಕುಶ ಕಾಳಗ, ಐರಾವಣ ಮೈರಾವಣ, ಶ್ರೀದೇವಿ ಮಹಾತ್ಮೆ, ರಾಮಾಂಜನೇಯ ಯುದ್ಧ, ದ್ರೋಣ ಕರ್ಣಾರ್ಜುನರ ಕಾಳಗ, ಪಾಂಡು ವಿಜಯ ಸೇರಿದಂತೆ ಅನೇಕ ಬಯಲಾಟಗಳಿಗೆ ಮಾರ್ಗದರ್ಶನದ ಜತೆಗೆ ಸಂಗೀತ ಸಂಯೋಜನೆ ಮಾಡಿ ಜನಮನ ಗಳಿಸಿದ್ದಾರೆ. ಕಲೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಸಲುವಾಗಿ ಶಂಕ್ರಪ್ಪ ಅವರು ಇತರರಿಗೆ ಬಯಲಾಟದ ಮಾರ್ಗದರ್ಶನ ಮಾಡುತ್ತಲೇ ಇದ್ದಾರೆ. ಇವರ ಕಲೆಗೆ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಅನೇಕ ಸಂಘ-ಸಂಸ್ಥೆಗಳು ಇವರರನ್ನು ಸನ್ಮಾನಿಸಿ ಗೌರವಿಸಿವೆ. 2018ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ದೊರೆತಿದೆ.

    ಬಯಲಾಟಕ್ಕೆ ಕಳೆ ತಂದ ಶಂಕ್ರಪ್ಪ ಹೊರಪೇಟಿ: ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
    ಬಯಲಾಟ ಪ್ರದರ್ಶನದಲ್ಲಿ ಶಂಕ್ರಪ್ಪ ಮಾಸ್ತರ.

    ಗ್ರಾಮೀಣ ಬಡ ಕುಟುಂಬದ ಕಲಾವಿದನನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ. ಈ ಪ್ರಶಸ್ತಿ ಕಲಾ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ. 42 ವರ್ಷಗಳ ಕಲಾ ಸೇವೆಗೆ ಗೌರವ ಸಿಕ್ಕಿದ್ದು ಸಾರ್ಥಕ ಎನಿಸಿದೆ. ಪ್ರತಿಯೊಬ್ಬರೂ ಬಯಲಾಟ ಕಲೆ ಉಳಿಸಬೇಕು ಹಾಗೂ ಬೆಳೆಸಬೇಕು.
    | ಶಂಕ್ರಪ್ಪ ಹೊರಪೇಟಿ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts