More

    ಗೇಣಿ ಜಮೀನುದಾರರಿಗೆ ಸಿಎಂ ಹಕ್ಕುಪತ್ರ ಭರವಸೆ

    ಶಿವಮೊಗ್ಗ: ಶಾಲಾ ಭೂ ವಿದ್ಯಾದಾನದ ಗೇಣಿ ಜಮೀನುದಾರರಿಗೆ ಹಕ್ಕುಪತ್ರ ನೀಡುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಮಾಜಿ ಶಾಸಕ, ರಾಜ್ಯಭೂ ವಿದ್ಯಾದಾನದ ಶಾಲಾ ಜಮೀನು ಗೇಣಿದಾರರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಸ್ವಾಮಿರಾವ್ ತಿಳಿಸಿದರು.

    ಶಾಲಾ ಭೂ ವಿದ್ಯಾದಾನದ ಗೇಣಿ ಜಮೀನುದಾರರಿಗೆ ಹಕ್ಕುಪತ್ರ ನೀಡುವಂತೆ ಸಂಘಟನೆಯಿಂದ ಸಿಎಂಗೆ ಮನವಿ ಮಾಡಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಸಿಎಂ., ಶಿಕ್ಷಣ, ಕಂದಾಯ ಹಾಗೂ ಕಾನೂನು ಸಚಿವರ ಸಭೆ ಕರೆದು ರ್ಚಚಿಸುವ ಭರವಸೆ ನೀಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    1956ರಲ್ಲಿ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಲೆಗಳ ಅಭಿವೃದ್ದಿಗೆ ಭೂಮಿಯನ್ನು ದಾನವಾಗಿ ನೀಡುವಂತೆ ಕರೆ ನೀಡಿದ್ದರು. ಈ ಕರೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸುಮಾರು 10 ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಲಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ 1,570 ಎಕರೆ ಭೂಮಿ ನೀಡಲಾಗಿತ್ತು ಎಂದು ವಿವರಿಸಿದರು.

    ಶಾಲೆಗಳ ಅಭಿವೃದ್ದಿ ಸಮಿತಿ ಮತ್ತು ಆ ಊರಿನ ಮುಖಂಡರು, ಶಾಲೆಗಳಿಗೆ ದಾನವಾಗಿ ಬಂದ ಜಮೀನನ್ನು ಭೂ ರಹಿತರಿಗೆ ಗೇಣಿ ಆಧಾರದಲ್ಲಿ ನೀಡಿದ್ದರು. ಆ ಭೂಮಿಯಲ್ಲಿ ಬಂದ ಉತ್ಪನ್ನದ ಕೆಲ ಭಾಗವನ್ನು ಶಾಲೆಗಳಿಗೆ ನೀಡಬೇಕೆಂದು ಅಲಿಖಿತ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಾಲಾಂತರದಲ್ಲಿ ಈ ಜಮೀನುಗಳನ್ನು ರಾಜಪ್ರಮುಖರ ಹೆಸರಿಗೆ ಖಾತೆ ಮಾಡಲಾಗಿತ್ತು ಎಂದು ತಿಳಿಸಿದರು.

    ‘ಉಳುವವನೇ ಹೊಲದೊಡೆಯ’ ಸಿದ್ದಾಂತದ ಅನ್ವಯ ಶಾಲಾ ಜಮೀನಿನ ಗೇಣಿದಾರರಿಗೆ ಭೂಮಿಯ ಒಡೆತನ ನೀಡಲು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿತ್ತು. ಈಗ ಅದಕ್ಕೆ ತಾತ್ವಿಕ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.

    ರಾಜ್ಯಭೂ ವಿದ್ಯಾದಾನದ ಶಾಲಾ ಜಮೀನು ಗೇಣಿದಾರರ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕಲ್ಲೂರು ವೀರಪ್ಪ, ಉಪಾಧ್ಯಕ್ಷ ಪಿ.ಡಿ.ಮಂಜುನಾಥ್, ಪ್ರಮುಖರಾದ ಚಿಕ್ಕಮರಸ ಮಲ್ಲೇಶಪ್ಪ, ಸುವರ್ಣಾ ನಾಗರಾಜ್, ಎಚ್.ಎಂ.ಸಂಗಯ್ಯ, ಮಂಜಪ್ಪ, ಚಂದ್ರಶೇಖರ್, ರಾಮಕೃಷ್ಣ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts