More

    ಭೂನ್ಯಾಯಾಧಿಕರಣದ ಆದೇಶ ರದ್ದುಗೊಳಿಸಿದ ಹೈಕೋರ್ಟ್..

    ಬೆಂಗಳೂರು: ಆನೇಕಲ್ ತಾಲೂಕಿನ ನೆಕ್ಕುಂದಿ ದೊಮ್ಮಸಂದ್ರ ಗ್ರಾಮದಲ್ಲಿ ಕೆರೆ ಏರಿಗೆ ಸೇರಿದ 14 ಎಕರೆ ಜಮೀನಿನ ಸ್ವಾಧೀನಾನುಭವ ಹಕ್ಕುಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿ ಭೂನ್ಯಾಯಾಧಿಕರಣ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

    ಆನೇಕಲ್ ಭೂನ್ಯಾಯಾಧಿಕರಣದ ಆದೇಶ ರದ್ದುಕೋರಿ ಸರ್ಕಾರ ಹಾಗೂ ಆನೇಕಲ್ ತಾಲೂಕಿನ 6 ನಿವಾಸಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಮಾನ್ಯ ಮಾಡಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ನ್ಯಾಯಾಲಯದ ಆದೇಶದಿಂದ ಕೋಟ್ಯಂತರ ರೂ. ಬೆಲೆಬಾಳುವ ಜಮೀನು ಸರ್ಕಾರದ ಬಳಿಯೇ ಉಳಿದುಕೊಂಡಂತಾಗಿದ್ದು, ಅದನ್ನು ಮತ್ತೆ ಕೆರೆ ಅಥವಾ ಕೆರೆ ಏರಿ ಪ್ರದೇಶವಾಗಿ ಸ್ಥಾಪಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ.

    ಹೈಕೋರ್ಟ್ ಆದೇಶದಲ್ಲೇನಿದೆ?: ಕೆರೆ ಪ್ರದೇಶ ತನ್ನ ಗುಣಲಕ್ಷಣ ಕಳೆದುಕೊಂಡಿದ್ದು, ಈಗಾಗಲೆ ಅಭಿವೃದ್ಧಿಗೊಂಡಿದೆ ಎಂಬ ಕಾರಣಕ್ಕೆ ಜಮೀನಿನ ಹಕ್ಕುಗಳನ್ನು ಖಾಸಗಿಯವರಿಗೆ ನೀಡಿ ಭೂನ್ಯಾಯಾಧಿಕರಣ ಆದೇಶಿಸಿದೆ. ಆದರೆ, ವಿವಾದಿತ ಜಾಗವನ್ನು ಕಂದಾಯ ದಾಖಲೆಗಳಲ್ಲಿ ಈಗಲೂ ಕೆರೆ ಪ್ರದೇಶೆವೆಂದೇ ನಮೂದಿಸಲಾಗಿದೆ. ಕಂದಾಯ ವರ್ಗೀಕರಣದಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ, ಈ ಜಾಗ ಕೆರೆಗೆ ಸೇರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕೆರೆ ಪ್ರದೇಶದ ಗುಣಲಕ್ಷಣ ಕಳೆದುಕೊಂಡಿದೆ ಎಂಬ ಮಾತ್ರಕ್ಕೆ ಅದನ್ನು ಬೇರೆಯವರಿಗೆ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 2009ರ ಜೂ.7ರಂದು ಆನೇಕಲ್ ಭೂನ್ಯಾಯಾಧಿಕರಣ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.

    ಪ್ರಕರಣವೇನು?: ನೆಕ್ಕುಂದಿ ದೊಮ್ಮಸಂದ್ರ ಗ್ರಾಮದ ಸರ್ವೇ ಸಂಖ್ಯೆ 49 ಹಾಗೂ 50ರಲ್ಲಿ ಕ್ರಮವಾಗಿ 11 ಹಾಗೂ 3 ಎಕರೆ 20 ಗುಂಟೆ ಜಾಗದಲ್ಲಿ ತಲೆ ತಲಾಂತರದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಅದನ್ನು ಮರು ಮಂಜೂರಾತಿ ಮಾಡಬೇಕೆಂದು ಕೋರಿ ಚೌಡರೆಡ್ಡಿ ಎಂಬುವರು ವಿಶೇಷ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಜಾಗ ಕೆರೆ ಏರಿ ಪ್ರದೇಶವೆಂಬ ಕಾರಣ ನೀಡಿ 1977ರ ಅ.14ರಂದು ವಿಶೇಷ ಜಿಲ್ಲಾಧಿಕಾರಿ ಅರ್ಜಿ ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಚೌಡರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಭೂನ್ಯಾಯಾಧಿಕರಣ ಸಹ ವಜಾಗೊಳಿಸಿತ್ತು.

    ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಚೌಡರೆಡ್ಡಿ, ಜಮೀನನ್ನು ತಮ್ಮ ಹೆಸರಿಗೆ ನೋಂದಣಿ ಮಾಡಲು ಮತ್ತು ಸ್ವಾಧೀನಾನುಭವ ಹಕ್ಕುಗಳನ್ನು ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು. 1986ರಲ್ಲಿ ಹೈಕೋರ್ಟ್ ಈ ಅರ್ಜಿಯನ್ನು ಮೇಲ್ಮನವಿ ಪ್ರಾಧಿಕಾರದ (ಜಿಲ್ಲಾಧಿಕಾರಿ) ವಿಚಾರಣೆಗೆ ಶಿಫಾರಸು ಮಾಡಿತ್ತು. ಮೇಲ್ಮನವಿ ಪ್ರಾಧಿಕಾರದ ಮುಂದಿದ್ದ ಮೇಲ್ಮನವಿಗಳನ್ನು ಭೂನ್ಯಾಯಾಧಿಕರಣಕ್ಕೆ ವರ್ಗಾಯಿಸಿ ಸರ್ಕಾರ 2006ರ ಜ.3ರಂದು ಆದೇಶಿಸಿತ್ತು.

    ಪ್ರಕರಣದ ವಿಚಾರಣೆ ನಡೆಸಿದ್ದ ಆನೇಕಲ್ ಭೂನ್ಯಾಯಾಧಿಕರಣ, 2009ರಲ್ಲಿ ವಿವಾದಿತ 14 ಎಕರೆ 20 ಗುಂಟೆ ಜಮೀನಿನ ಸ್ವಾಧೀನಾನುಭವ ಹಕ್ಕುಗಳನ್ನು ಚೌಡರೆಡ್ಡಿಗೆ (ಚೌಡರೆಡ್ಡಿ ಮೃತಪಟ್ಟ ಹಿನ್ನೆಲೆ ಅವರ ವಾರಸುದಾರರು ಪ್ರಕರಣ ಮುಂದುವರಿಸಿದ್ದರು) ನೀಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

    ಕ್ಲಾಸಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ: ಮುಸ್ಲಿಂ ಸಂಘಟನೆ ಮುಖ್ಯಸ್ಥನ ಹೇಳಿಕೆ..

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts