More

    ನಿರ್ವಸಿತರಿಗೆ ನಿವೇಶನವಿನ್ನೂ ಮರೀಚಿಕೆ: ಮಠದಗುಡ್ಡೆ ಕುಸಿತ, ಮಕ್ಕಳಿಬ್ಬರ ಸಾವು ಘಟನೆಗೆ ವರ್ಷ

    ಗುರುಪುರ: ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆಗೆ ಜುಲೈ 5ಕ್ಕೆ ಒಂದು ವರ್ಷ ತುಂಬಿದರೂ, ಘಟನೆಯಲ್ಲಿ ನಿರ್ವಸಿತರಾದವರಿಗೆ ಇನ್ನೂ ಸರಿಯಾದ ನೆಲೆ ಸಿಕ್ಕಿಲ್ಲ. ಇತ್ತೀಚೆಗಷ್ಟೇ 48 ಕುಟುಂಬಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ಹಕ್ಕುಪತ್ರ ವಿತರಿಸಿರುವುದು ಬಿಟ್ಟರೆ ನಿರ್ವಸಿತರು ಸೂಕ್ತ ನೆಲೆಗಾಗಿ ಈಗಲೂ ಜಿಲ್ಲಾಡಳಿತ, ಪಂಚಾಯಿತಿ ಇಲಾಖೆ ಅಲೆದಾಡುತ್ತಿದ್ದಾರೆ.

    ಜುಲೈ 5ರಂದು ಸುರಿದ ಧಾರಾಕಾರ ಮಳೆಗೆ ಮಠದಗುಡ್ಡೆಯಲ್ಲಿ ನೀರಿನ ಒರತೆ ಹೆಚ್ಚಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದರೆ, ಒಂದು ಕಡೆ ನಾಲ್ಕೈದು ಮನೆಗಳು ಧರಾಶಾಹಿಯಾಗಿ, ಮುಹಮ್ಮದ್ ಯಾನೆ ಮೋನು ಎಂಬುವರ ಮನೆಯಲ್ಲಿ ಮಲಗಿದ್ದ ಅವರ ಸಂಬಂಧಿಕರ ಮಕ್ಕಳಾದ ಸಫ್ವಾನ್(16) ಮತ್ತು ಸಹಲಾ(10) ಎಂಬುವರು ಮಣ್ಣಿನಡಿ ಬಿದ್ದು ಮೃತಪಟ್ಟಿದ್ದರು. ಸುಮಾರು ಐದು ತಾಸು ಕಾರ್ಯಾಚರಣೆ ನಡೆಸಿ ಮೃತದೇಹ ಹೊರಕ್ಕೆ ತೆಗೆಯಲಾಗಿತ್ತು. ಆ ವೇಳೆ ಸುಮಾರು 100 ಕುಟುಂಬಗಳು ಈ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ ಹೂಡಿದ್ದು, 70 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ಸಿಕ್ಕಿದೆ. ಉಳಿದಂತೆ ಈಗ ಸಿಕ್ಕಿರುವ ಹಕ್ಕುಪತ್ರವೇ ಹೆಚ್ಚು!

    ತಜ್ಞರ ತಂಡದಿಂದ ಸಮೀಕ್ಷೆ: ಗುಡ್ಡ ಕುಸಿತದ ಬಳಿಕ ಸುರತ್ಕಲ್ ಎನ್‌ಐಟಿಕೆ ಭೂವಿಜ್ಞಾನ ವಿಭಾಗದ ತಜ್ಞರ ತಂಡ ಸಮೀಕ್ಷೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ನೀಡಿದ ವರದಿಯಲ್ಲಿ ರೆಡ್ ಜೋನ್ ಮತ್ತು ಯೆಲ್ಲೋ ಜೋನ್ ಗುರುತಿಸಿ, ಇದು ವಾಸ್ತವ್ಯಕ್ಕೆ ಯೋಗ್ಯವಲ್ಲದ ಪ್ರದೇಶ ಎಂದಿತ್ತು. ಆದರೆ ಕಳೆದ ಮಳೆಗಾಲ ಕೊನೆಗೊಳ್ಳುತ್ತಲೇ ಹೆಚ್ಚಿನ ಕುಟುಂಬಗಳು ಬಾಡಿಗೆ ಮನೆಯಿಂದ ಮತ್ತೆ ‘ಅಪಾಯಕಾರಿ ವಲಯ’ಕ್ಕೆ ಮರಳಿ ತಮ್ಮ ಮನೆಗಳಲ್ಲಿ ವಾಸಿಸಲಾರಂಭಿಸಿವೆ ಎಂಬುದು ಮತ್ತೊಂದು ದುರಂತಮಯ ಸಂಗತಿ.

    ಜಾಗ ಅಂತಿಮಗೊಂಡಿಲ್ಲ: ಕಂದಾಯ ಇಲಾಖೆ ಮತ್ತು ಗುರುಪುರ ಪಂಚಾಯಿತಿ ಮಠದಗುಡ್ಡೆ ನಿರ್ವಸತಿಗರಿಗೆ ಮೊದಲಿಗೆ ಬೊಂಡಂತಿಲ ಗ್ರಾಮದಲ್ಲಿ ಗೋಮಾಳ ಜಾಗವೊಂದು ಗುರುತಿಸಿದ್ದು, ನಿರ್ವಸಿತರ ನಿರಾಕರಣೆಯಿಂದ ಆ ಜಾಗ ಕೈಜಾರಿತ್ತು. ಬಳಿಕ ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ನಾರ್ಲಪದವಿನಲ್ಲಿ 1.5 ಎಕರೆ ಜಾಗ ಗುರುತಿಸಲಾಗಿದ್ದು, ಅದಿನ್ನೂ ಅಂತಿಮಗೊಂಡಿಲ್ಲ. ಏನೇ ಇದ್ದರೂ, ಈ ವರ್ಷ ಮತ್ತೆ ಮಳೆ ಬಿರುಸುಗೊಂಡರೆ ಮಠದಗುಡ್ಡೆಯಲ್ಲಿ ಮರು ವಾಸ್ತವ್ಯ ಹೂಡಿರುವ ಕುಟುಂಬಗಳಿಗೆ ಅಪಾಯವಿದೆ ಎಂಬುದರಲ್ಲಿ ಸಂದೇಹವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts