More

    ಹೆದ್ದಾರಿ ಪ್ರಾಧಿಕಾರ ನಿಲುವು ಪ್ರಶ್ನಿಸಿ ಹೈಕೋರ್ಟ್‌ಗೆ, ಕಾರ್ಕಳ ಹೆದ್ದಾರಿ 169 ಸಂತ್ರಸ್ತ ಭೂಮಾಲೀಕರ ನಿರ್ಧಾರ

    ಮಂಗಳೂರು: ಮಂಗಳೂರು-ಮೂಡುಬಿದಿರೆ, ಕಾರ್ಕಳ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಗೆ ವಿಶೇಷ ಭೂಸ್ವಾಧೀನಾಧಿಕಾರಿ ಸೂಕ್ತ ಪರಿಹಾರ ನಿರ್ಧರಿಸಿದ್ದರೂ ಅದನ್ನು ಪ್ರಶ್ನಿಸಿ, ಅದರ ಅರ್ಧಕ್ಕಿಂತಲೂ ಕಡಿಮೆ ಮೊತ್ತವನ್ನು ಅಂತಿಮಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಮೆಟ್ಟಲೇರಲು ಸಂತ್ರಸ್ತ ಭೂಮಾಲೀಕರು ತೀರ್ಮಾನಿಸಿದ್ದಾರೆ.

    ಜನಪ್ರತಿನಿಧಿಗಳು ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಮೊತ್ತ ತೆಗೆಸಿಕೊಡುವ ಭರವಸೆ ನೀಡಿದ್ದರೂ, ಮಾತನ್ನು ಉಳಿಸುವಲ್ಲಿ ವಿಫಲರಾಗಿದ್ದಾರೆ. ಈಗ 14 ಗ್ರಾಮಗಳ ಪರಿಹಾರದ ಮೊತ್ತವನ್ನು ಅಂತಿಮಗೊಳಿಸಿ ಅವಾರ್ಡ್ ಮಾಡಲಾಗಿದೆ. ಇನ್ನೀಗ ಹೈಕೋರ್ಟ್ ಮೆಟ್ಟಿಲೇರುವುದೊಂದೇ ಮಾರ್ಗ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಸಂಸದರು, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿಗೆ ಮತ್ತೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಕಾನೂನು ಹೋರಾಟಕ್ಕೆ ಬಹುತೇಕರಿಂದ ಅನುಮೋದನೆ ದೊರೆಯಿತು.

    ಭಾನುವಾರ ಕುಲಶೇಖರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ 169 ಭೂಮಾಲೀಕರ ವೇದಿಕೆಯ ಸಂಚಾಲಕ ಪ್ರಕಾಶ್ಚಂದ್ರ, ಕೆಲ ತಿಂಗಳ ಹಿಂದೆ ಹಿಂದಿನ ಭೂಸ್ವಾಧೀನಾಧಿಕಾರಿ ಇದ್ದಾಗ ಸಾಣೂರು ಗ್ರಾಮದಲ್ಲಿ ಒಟ್ಟು 58.34 ಕೋಟಿ ರೂ. ನಿಗದಿ ಪಡಿಸಿರುವುದನ್ನು ಈಗ 50.06 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ, ಪಡುಮಾರ್ನಾಡು ಗ್ರಾಮದಲ್ಲಿ 20.34 ಕೋಟಿ ರೂ.ನಷ್ಟು ಪ್ರಾರಂಭಿಕ ಪರಿಹಾರ ಪ್ರಸ್ತಾವಿಸಿ, ಅದನ್ನು 16.25 ಕೋಟಿ ರೂಗೆ ಹಾಗೂ ಪುತ್ತಿಗೆಯಲ್ಲಿ 19.49 ಕೋಟಿ ರೂ.ನಿಂದ 7.39ಕೋಟಿ ರೂ.ಗೆ ಇಳಿಸಲಾಗಿದೆ, ಇದು ಅನ್ಯಾಯ ಎಂದು ಪ್ರಕಾಶ್ಚಂದ್ರ ವಿವರಿಸಿದರು.

    ಬೆಳುವಾಯಿಯ ವಿಶ್ವನಾಥ ಶೆಟ್ಟಿ ಎಂಬವರು ಮಾತನಾಡಿ, ಕೃಷಿ ಜಮೀನೇ ಶೇ.70ರಷ್ಟಿದೆ, ಪ್ರಾಧಿಕಾರ ನ್ಯಾಯಯುತ ಮೌಲ್ಯಮಾಪನಕ್ಕೆ ಬದಲು ಭೂಮಿಯನ್ನು ಪರಿವರ್ತಿತ ಹಾಗೂ ಪರಿವರ್ತಿತವಲ್ಲದ ಎಂಬ ಆಧಾರದಲ್ಲಿ ಮೌಲ್ಯಮಾಪನ ಮಾಡಿದ್ದು ಸರಿಯಲ್ಲ, ಪರಿವರ್ತಿತವಲ್ಲದ ಜಮೀನಿಗೆ ಸೆಂಟ್ಸ್‌ಗೆ 30 ಸಾವಿರ ರೂ.ಮಾತ್ರವೇ ಇದ್ದರೆ ಪರಿವರ್ತಿತವಾದ ಜಮೀನಿಗೆ 3 ಲಕ್ಷ ರೂ. ಮೌಲ್ಯವಿದೆ. ಇದರಿಂದಾಗಿ ಕೃಷಿಕರಿಗೆ ಅನ್ಯಾಯವಾಗಿದೆ, ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದೇ ಸೂಕ್ತವೆಂದರು.

    ತೆಂಕಮಿಜಾರಿನ ಕೃಷಿಕ ಬೃಜೇಶ್ ಎಂಬವರು ಮಾತನಾಡಿ ತಮ್ಮ ಅನೇಕ ಅಡಿಕೆ, ತೆಂಗಿನ ಮರಗಳು ಹೋಗುತ್ತಿವೆ, ಜನಪ್ರತಿನಿಧಿಗಳಿಗೆ ಕೃಷಿಕರ ನೋವು ಅರ್ಥವಾಗುತ್ತಿಲ್ಲ, ಅವರ ಗಮನಕ್ಕೆ ಬರಬೇಕಾದರೆ ಪ್ರತಿಭಟನೆ ಮಾಡಲೇಬೇಕು ಎಂದರು.

    ವೇದಿಕೆಯ ಅಧ್ಯಕ್ಷೆ ಮರಿಯಮ್ಮ ಥಾಮಸ್ ಮಾತನಾಡಿ, ಪ್ರತೀ ಗ್ರಾಮದಲ್ಲೂ ಸಮಸ್ಯೆಗಳು ಬೇರೆ ಬೇರೆ ಇರುವುದರಿಂದ ಪ್ರತ್ಯೇಕವಾಗಿ ಕೋರ್ಟ್‌ಗೆ ಅರ್ಜಿ ಹಾಕಬಹುದು ಎಂದರು. ಕುಲಶೇಖರ ಸೇಕ್ರಡ್ ಹಾರ್ಟ್ ಶಾಲೆಯ ಮುಖ್ಯಸ್ಥೆ ಲವಿಟಾ ಹಾಜರಿದ್ದರು.

    ಶೇ.50ಕ್ಕಿಂತಲೂ ಕಡಿಮೆ ಮೊತ್ತದ ಪರಿಹಾರ!: ಬಹುತೇಕ ಗ್ರಾಮಗಳಲ್ಲಿ ಭೂಸ್ವಾಧೀನಾಧಿಕಾರಿ ನಿರ್ಧರಿಸಿರುವ ಮೌಲ್ಯದ ಶೇ.50ಕ್ಕಿಂತಲೂ ಕಡಿಮೆ ಮೊತ್ತವನ್ನು ಅಂತಿಮಗೊಳಿಸಲಾಗಿದೆ ಎಂದು ವೇದಿಕೆಯ ಸಂಚಾಲಕ ಪ್ರಕಾಶ್ಚಂದ್ರ ಆಕ್ಷೇಪಿಸಿದರು. ರಾ.ಹೆ ಪ್ರಾಧಿಕಾರದ ಪ್ರಾದೇಶಿಕ ಪ್ರಬಂಧಕ ಸೂರ್ಯವಂಶಿ ಎಂಬವರು ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ಭೂಸ್ವಾಧೀನಾಧಿಕಾರಿ ಮಾಡಿರುವ ಅವಾರ್ಡ್ ಒಪ್ಪಲು ಸಾಧ್ಯವಿಲ್ಲ, ಅದನ್ನು ಮತ್ತೆ ಸಮಗ್ರವಾಗಿ ಮರುಪರಿಶೀಲಿಸಬೇಕು ಎಂದಿದ್ದಾರೆ. ಆದರೆ ಕಾನೂನಿನ ಪ್ರಕಾರ ಈ ರೀತಿ ಆಕ್ಷೇಪಿಸಲು ಅವರಿಗೆ ಅವಕಾಶವೇ ಇಲ್ಲ. ಈ ವಿಚಾರದಲ್ಲಿ ಭೂಸ್ವಾಧೀನಾಧಿಕಾರಿಯೇ ಸಕ್ಷಮ ಪ್ರಾಧಿಕಾರಿ. ಇದೇ ಅಂಶವನ್ನು ಮುಂದಿಟ್ಟು ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts