More

    ಮುಳುಗಡೆ ನೋವಿಗೆ ಅಕೇಶಿಯಾ ಬರೆ

    ಹೊಸನಗರ: ತಾಲೂಕಿನ ಬಹುಪಾಲು ಭೂಪ್ರದೇಶ ಆವರಿಸಿ ನಿಂತ ನೀರು… ನೀರಲ್ಲ, ಇದು ಸಕಲ ಜೀವರಾಶಿಗಳನ್ನು ಉಸಿರುಗಟ್ಟಿಸಿದ ಕಣ್ಣೀರು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸೊನಲೆ ಶ್ರೀನಿವಾಸ್ ಕಿಡಿಕಾರಿದರು.

    ತಾಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಹ್ಮಮಿೊಂಡಿದ್ದ 8ನೇ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಹೊಸ ಕಣ್ಣುಗಳಿಗೆ ನಿಲುಕುವಷ್ಟು ಕಾಣುವ ಜಲರಾಶಿ, ನಮ್ಮ ಸರ್ವಸ್ವವನ್ನು ಮುಳುಗಿಸಿ ಸಮಾಧಿ ಮಾಡಿದ ಮೇಲೆ ಇಟ್ಟ ಹೂವಿನಂತೆ ಎಂಬ ಅರಿವಿಗೆ ಇನ್ನು ಬಂದಿಲ್ಲ ಎಂದರು.

    ಹೊಸನಗರ ತಾಲೂಕು ಪುರಾಣ, ಐತಿಹಾಸಿಕ ಮತ್ತು ಪ್ರಾಕೃತಿಕವಾಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮಹತ್ವ ಹೊಂದಿದೆ. ಆದರೆ ಮುಳುಗಡೆ ಸೇರಿ ಹತ್ತಾರು ಸಮಸ್ಯೆಗಳು ಕೇವಲ ಮನೆ, ಜಮೀನನ್ನು ಮುಳುಗಿಸಿಲ್ಲ. ಬದಲಿಗೆ ತಲೆತಲಾಂತರದ ಬದುಕು, ಸಂಸ್ಕೃತಿಯನ್ನೇ ನಾಶ ಮಾಡಿವೆ. ಆದರೆ ಪರಿಹಾರ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪ್ರಳಯದ ನಂತರ ಹೇಗೋ ಬೆಳೆದ ಮೋಟು ಮರವೊಂದರ ಮೇಲೆ ಕುಳಿತ ಪಕ್ಷಿ ಕುಟುಂಬ ನೆಮ್ಮದಿ ಪಡೆಯುವ ಮೊದಲೇ ಆ ಮರವನ್ನು ಬೋಳಿಸಿದಂತೆ, ಅಳಿದುಳಿದ ಮುಳುಗಡೆ ಆಗದ ತಾಲೂಕಿನ ಬೆಟ್ಟ, ಗುಡ್ಡದ ಮೇಲೆ ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಅಕೇಶಿಯಾ ಮಾರಿ ಮತ್ತೆ ನಮ್ಮನ್ನು ಬೆತ್ತಲು ಮಾಡಿದೆ. ನಾಡಿಗೆ ಬೆಳಕು ಕೊಟ್ಟು ಬೆತ್ತಲಾದ ತಾಲೂಕನ್ನು ಒಂದಿಲ್ಲೊಂದು ಯೋಜನೆಯನ್ನು ತಂದು ಮತ್ತೆ ಮತ್ತೆ ಬೆತ್ತಲುಗೊಳಿಸಲಾಗುತ್ತಿದೆ. ಸಕಲ ಜೀವರಾಶಿಗೂ ಕಂಟಕವಾಗಿರುವ ಅಕೇಶಿಯಾಗೆ ರತ್ನಗಂಬಳಿ ಹಾಸುತ್ತಿರುವುದು ದುರಂತ ಎಂದು ವಿಷಾದಿಸಿದರು.

    ಯುವಪೀಳಿಗೆಗೆ ಚಾಟಿ: ನಮ್ಮ ಯುವ ಪೀಳಿಗೆಯಂತೂ ಜಿಎಸ್​ಎಸ್ ಹೇಳುವಂತೆ ರಕ್ತಗತವಾದ ಚೈತನ್ಯಶೀಲತೆ ಕಳೆದುಕೊಂಡು ನಿಸ್ತೇಜವಾಗಿದೆ. ಮೆಕಾಲೆ ಶಿಕ್ಷಣದ ಬಾಣಲೆಯಲ್ಲಿ ಬೆಂದು ಎಡಬಿಡಂಗಿಯಾಗಿದೆ. ಪರಭಾಷೆಯ ಪಾರಮ್ಯದಲ್ಲಿ ನಮ್ಮ ನುಡಿ ಉಸಿರುಗಟ್ಟಿದೆ. ಡಾ. ಲೋಹಿಯಾ ಹೇಳಿದಂತೆ ಪರಭಾಷೆಯಲ್ಲಿ ಶಿಕ್ಷಣ ನೀಡುವ ಮತ್ತು ಆಡಳಿತ ಮಾಡುವ ಏಕೈಕ ವಿಶ್ವದ ಲಜ್ಜೆಗೆಟ್ಟ ದೇಶವೆಂದರೆ ಅದು ಭಾರತ’ ಎಂಬ ಕಹಿಸತ್ಯವನ್ನು ಯಾರು ಕೇಳಿಸಿಕೊಳ್ಳುತ್ತಲೇ ಇಲ್ಲ ಎಂದು ವಿಷಾದಿಸಿದರು.

    ಸಮ್ಮೇಳನ ಉದ್ಘಾಟಿಸಿದ ತಹಸೀಲ್ದಾರ್ ವಿ.ಎಸ್.ರಾಜೀವ್ ಮಾತನಾಡಿ, ಹೊಸನಗರ ಪ್ರಾಕೃತಿಕ ಮೈಸಿರಿಯನ್ನು ಹೊದ್ದುಕೊಂಡಿದೆ. ಅಲ್ಲದೆ ಇಲ್ಲಿಯ ಜನರಲ್ಲಿ ಕಂಡು ಬರುವ ನಾಡುನುಡಿ ಅಭಿಮಾನ ಮಾದರಿಯಾಗುವಂತಿದೆ ಎಂದು ಹೇಳಿದರು.

    ತಾಲೂಕಿನ ಎಲ್ಲ ಆಚರಣೆಯಲ್ಲೂ ಭಾಷೆಯ ವೈವಿಧ್ಯತೆ ಹೆಚ್ಚು ಮೇಳೈಸುತ್ತದೆ. ಇಲ್ಲಿಯ ಕೊಡಚಾದ್ರಿ, ಕೆಳದಿ ಸಾಮ್ರಾಜ್ಯದ ಬಿದನೂರು ಕೋಟೆ, ಹಿಡ್ಲುಮನೆ ಫಾಲ್ಸ್, ಬಾಳೆಬರೆ ಫಾಲ್ಸ್, ದೇವಗಂಗೆ ಕೊಳ, ಅಬ್ಬಿಫಾಲ್ಸ್, ಹುಂಚ, ರಾಮಚಂದ್ರಾಪುರ ಸೇರಿ ಸಾಲು ಸಾಲು ಪ್ರವಾಸಿತಾಣಗಳಿದ್ದು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ ಎಂದರು.

    ಪಪಂ ಅಧ್ಯಕ್ಷ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷ ಕೃಷ್ಣವೇಣಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠ, ತಾಪಂ ಸದಸ್ಯ ಕೋಡೂರು ಚಂದ್ರಮೌಳಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಅ.ಸುಂದರ್ ಇತರರಿದ್ದರು. ಎಚ್.ಎಸ್.ಅಹಲ್ಯಾ, ಮಾಧುರಿ ದೇವಾನಂದ್ ತಂಡದಿಂದ ರಾಷ್ಟ್ರಗೀತೆ, ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಂದ ನಾಡಗೀತೆ, ಹೊಸನಗರ ಕ್ಲಸ್ಟರ್ ಬಳಗದಿಂದ ರೈತಗೀತೆ ನಡೆಸಿಕೊಡಲಾಯಿತು. ಕಾರ್ಯದರ್ಶಿ ಹ.ರು.ಗಂಗಾಧರಯ್ಯ ಸ್ವಾಗತಿಸಿದರು. ಬಾಲಚಂದ್ರರಾವ್ ವಂದಿಸಿದರು. ಲೀಲಾವತಿ ಗಣಪತಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts