More

    ಭೂ ಸ್ವಾಧೀನ ವ್ಯಾಪ್ತಿ ಕಡಿತ

    ರಟ್ಟಿಹಳ್ಳಿ: ಶಿಕಾರಿಪುರ ಏತ ನೀರಾವರಿ ಯೋಜನೆ ವಿರೋಧಿಸಿ ಕೈಗೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರು ಹೋರಾಟ ಕೈಬಿಡುವಂತೆ ಹಿರಿಯ ವಕೀಲ ಬಿ.ಡಿ. ಹಿರೇಮಠ ಅವರಿಗೆ ಮನವಿ ಮಾಡಿದರು.

    ಬಿ.ವೈ. ರಾಘವೇಂದ್ರ ಮಾತನಾಡಿ, ನೀರಾವರಿ ಯೋಜನೆಗಾಗಿ ಕಾಮಗಾರಿಗೆ ಈ ಮೊದಲು 10 ಮೀಟರ್ ಅಗಲ ಭೂಸ್ವಾಧೀನ ಪ್ರಕ್ರಿಯೆಗೆ ಯೋಜನೆ ಮಾಡಲಾಗಿತ್ತು. ಈಗ ಹೋರಾಟದ ಪ್ರತಿಫಲವಾಗಿ ಸರ್ಕಾರ ಕೇವಲ 4 ಮೀಟರ್ ಅಗಲಕ್ಕೆ ಕಡಿತಗೊಳಿಸಿದೆ. ಅಂದಾಜು 101 ಎಕರೆ ಭೂ ಸ್ವಾಧೀನಕ್ಕೆ ಮುಂದಾಗಿದ್ದ ಸರ್ಕಾರ ಈಗ, 44 ಎಕರೆ ಸ್ವಾಧೀನಕ್ಕೆ ಸೀಮಿತಗೊಳಿಸಿದೆ. 44 ಎಕರೆ ಸ್ವಾಧೀನಕ್ಕೆ ಸರ್ಕಾರ ವಿಳಂಬ ಮಾಡದೇ ತಕ್ಷಣವೇ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಮುಂದಾಗಿದೆ. ಅಲ್ಲದೆ, ತುಂಗಾ ಮೇಲ್ದಂಡೆ ಯೋಜನೆ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರವೇ ಪರಿಹಾರದ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

    ದೇಶಕ್ಕಾಗಿ ಮತ್ತು ರಾಜ್ಯಕ್ಕಾಗಿ ಅನೇಕ ನ್ಯಾಯಯುತ ಹೋರಾಟಗಳಿಗೆ, ಜನಸೇವೆಗೆ ನಿಮ್ಮ ಪ್ರಾಮಾಣಿಕ ಹೋರಾಟದ ಅವಶ್ಯಕತೆ ಇದೆ. ನೀವು ಕಳೆದ 13 ದಿವಸಗಳಿಂದ ಉಪವಾಸ ಕೈಗೊಂಡಿದ್ದೀರಿ. ಮನುಷ್ಯನಿಗೆ ಪ್ರತಿ ದಿವಸ, ಗಂಟೆ ಅತಿ ಅವಶ್ಯ. ತಾವು ದಯಮಾಡಿ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಹಿರೇಮಠ ಅವರಲ್ಲಿ ಮನವಿ ಮಾಡಿದರು.

    ಆದರೆ, ಹಿರೇಮಠ ಅವರು, ನೀರಾವರಿ ಯೋಜನೆ ಕಾಮಗಾರಿಗೆ ಬದಲಿ ವ್ಯವಸ್ಥೆ ಹಾಗೂ ಯುಟಿಪಿಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಹಣ ವಿತರಣೆ ಕುರಿತು ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ಲಭ್ಯವಾದ ತಕ್ಷಣವೇ ಸತ್ಯಾಗ್ರಹ ಅಂತ್ಯಗೊಳಿಸಲಾಗುವುದು’ ಎಂದು ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ರಾಘವೇಂದ್ರ, ‘ಡಿ. 16ಕ್ಕೆ ಜಿಲ್ಲಾ ಉಸ್ತುವರಿ ಸಚಿವ ಬಸವರಾಜ ಬೊಮ್ಮಾಯಿ ಈ ಸ್ಥಳಕ್ಕೆ ಬರಲಿದ್ದಾರೆ ಅವರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

    ಹೆಸ್ಕಾಂ ನಿರ್ದೇಶಕ ಮಹೇಶ ಗುಬ್ಬಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಷ ಹದಡೇರ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾ.ಪಂ. ಮಾಜಿ ಸದಸ್ಯ ಆರ್.ಎನ್. ಗಂಗೋಳ, ಎಸ್.ಎಸ್. ಪಾಟೀಲ, ವೀರನಗೌಡ ಮಕರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts