More

    ಲೇಡಿಗೋಷನ್ ಹಂತ ಹಂತ ಅಭಿವೃದ್ಧಿ, ‘ವಿಜಯವಾಣಿ’ಗೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಮಾಹಿತಿ

    ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಜನರ ಬೇಡಿಕೆಗಳ ಕುರಿತು ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಲಾಗುವುದು. ಗರಿಷ್ಠ ಮಟ್ಟದಲ್ಲಿ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ತಿಳಿಸಿದ್ದಾರೆ.

    ‘ವಿಜಯವಾಣಿ’ಯಲ್ಲಿ ಭಾನುವಾರ ಪ್ರಕಟವಾದ‘ಲೇಡಿಗೋಷನ್‌ನಲ್ಲಿಲ್ಲ ಮೂಲಸೌಲಭ್ಯ’ ವರದಿಗೆ ಸ್ಪಂದಿಸಿರುವ ಅವರು, ಆಸ್ಪತ್ರೆಯ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.

    ಆಸ್ಪತ್ರೆಯಲ್ಲಿ ಈಗಾಗಲೇ 100 ಫೈಬರ್ ಕುರ್ಚಿಗಳನ್ನು ಖರೀದಿಸಲಾಗಿದ್ದು, ಹೊರರೋಗಿಗಳು ಹಾಗೂ ಅವರ ಜತೆಗೆ ಬರುವವರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ಒಳಗೆ ಬಿಡುವುದೂ ಕಷ್ಟ. ಆದ್ದರಿಂದ ಕೆಲವರು ಹೊರಗೆ ನಿಲ್ಲುವುದು ಅನಿವಾರ್ಯವಾಗುತ್ತದೆ. ಇದನ್ನು ತಪ್ಪಿಸಲು ಜೆನರಿಕ್ ಔಷಧ ಕೇಂದ್ರ ಮತ್ತು ಕ್ಯಾಂಟೀನ್ ನಡುವಿನ ಪ್ರಸ್ತುತ ಪಾರ್ಕಿಂಗ್‌ಗೆ ಉಪಯೋಗಿಸಲಾಗುತ್ತಿರುವ ಜಾಗವನ್ನು ಸರ್ವೇ ಮಾಡಲಾಗಿದ್ದು, ಹಗಲು ಹೊತ್ತಿನಲ್ಲಿ ಬರುವ ರೋಗಿಗಳ ಅಡೆಂಟೆಂಡ್‌ಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಶಾಸಕರೂ ಈ ಕುರಿತು ಮುತುವರ್ಜಿ ವಹಿಸಿದ್ದು, ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಪಾರ್ಕಿಂಗ್‌ಗೆ ನೂತನ ಎಂಸಿಎಚ್ ಕಟ್ಟಡದ ಎದುರಿನ ಜಾಗವನ್ನು ಬಳಕೆ ಮಾಡಲು ಉದ್ದೇಶಿಸಲಾಗಿದೆ. ಆಸ್ಪತ್ರೆಯ ಪ್ರವೇಶ ದ್ವಾರ ಸುಂದರಗೊಳಿಸಲೂ ಯೋಜನೆ ರೂಪಿಸಲಾಗಿದೆ. ಎಂಸಿಎಚ್ ಎದುರು, ನೆರಳು ನೀಡುವ ಬಾದಾಮ್‌ನಂತಹ ಗಿಡ ನೆಡಲು ಉದ್ದೇಶಿಸಲಾಗಿದೆ ಎಂದರು.

    ಅನೌನ್ಸ್‌ಮೆಂಟ್ ವ್ಯವಸ್ಥೆ: ರೋಗಿಗಳಿಗೆ ಹಾಗೂ ಅವರೊಂದಿಗೆ ಬಂದಿರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೈಕ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ. ಮುಖವಾಗಿ ಒಪಿಡಿಗೆ ಸಂಬಂಧಿಸಿ ಜನರು ಕುಳಿತುಕೊಳ್ಳುವ ಜಾಗ, ಲ್ಯಾಬ್, ಸ್ಕಾೃನಿಂಗ್, ಸೆಕ್ಯುರಿಟಿ ಇರುವ ಜಾಗದಲ್ಲಿ ಜನರಿಗೆ ಮಾಹಿತಿ ನೀಡಲು, ಟೋಕನ್ ನಂಬರ್ ಕರೆಯಲು ಇದರಿಂದ ಅನುಕೂಲವಾಗಲಿದೆ ಎಂದರು.

    ರಾತ್ರಿ ತಂಗಲು ವ್ಯವಸ್ಥೆ: ಗರ್ಭಿಣಿ ಜತೆ ಬರುವ ಒಬ್ಬ ವ್ಯಕ್ತಿಗೆ ಪಾಸ್ ನೀಡಿ, ಬ್ಲಡ್ ಬ್ಯಾಂಕ್ ಬಳಿಯಿರುವ ಛತ್ರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯಿದೆ. ಧರ್ಮಸ್ಥಳ ಸಂಸ್ಥೆಯಿಂದ ನಿರ್ವಹಿಲ್ಪಡುತ್ತಿರುವ ಕಟ್ಟಡದಲ್ಲಿ ರಾತ್ರಿ ಮಲಗಲು, ಹಗಲು ವೇಳೆ ಸ್ನಾನ, ಶೌಚಕ್ಕೂ ವ್ಯವಸ್ಥೆಯಿದೆ. ಸ್ಮಾರ್ಟ್ ಸಿಟಿ ಮೂಲಕ ಏನೆಲ್ಲ ಮೂಲ ಸೌಕರ್ಯ ಕಲ್ಪಿಸಬಹುದು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಕೆಲವರು ಮಾತು ಕೇಳದೆ, ಅಲ್ಲಲ್ಲಿ ಓಡಾಡುವುದು, ಕುಳಿತುಕೊಳ್ಳುವುದು ಮೊದಲಾದವುಗಳನ್ನು ಮಾಡುತ್ತಾರೆ. ಆಸ್ಪತ್ರೆಯಲ್ಲಿರುವ ಯಾವುದೇ ಮಗು, ಗರ್ಭಿಣಿಗೂ ಸಮಸ್ಯೆಯಾಗಬಾರದು ಎನ್ನುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಡಾ.ದುರ್ಗಾ ಪ್ರಸಾದ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts