More

    ಕ್ವಾರಂಟೈನ್ ತಪ್ಪಿಸಿ ಮನೆ ಸೇರಿದ ಯುವತಿ

    ಪಡುಬಿದ್ರಿ: ಕೇರಳದಿಂದ ರೈಲಿನಲ್ಲಿ ಮಂಗಳೂರಿಗೆ ಬಂದು ತಂದೆಯೊಂದಿಗೆ ಬೈಕ್‌ನಲ್ಲಿ ಶನಿವಾರ ಉಡುಪಿ ಜಿಲ್ಲೆ ಪ್ರವೇಶಿಸಿದ ಯುವತಿಯೊಬ್ಬಳು ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ಕ್ವಾರೆಂಟೈನ್‌ಗೊಳಪಡುವ ಅರ್ಜಿ ಭರ್ತಿ ಮಾಡಿ ನೇರವಾಗಿ ಕುಂದಾಪುರದ ಮನೆಗೆ ತೆರಳಿದ್ದು, ಗೊಂದಲಕ್ಕೆ ಕಾರಣವಾಯಿತು.

    ಅನ್ಯ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್‌ಗೊಳಪಡಿಸಿದ ಬಳಿಕ ಪೊಲೀಸ್ ಬೆಂಗಾವಲು ವಾಹನ ಮೂಲಕ ಅವರ ಕ್ವಾರಂಟೈನ್ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಆದರೆ ತಪಾಸಣಾ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷೃದಿಂದ ಯುವತಿ ನೇರ ಮನೆ ಕಡೆ ತೆರಳಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ಆಕೆಯ ಪತ್ತೆಗೆ ಶ್ರಮಿಸಿದಾಗ ಮೊಬೈಲ್ ನಾಟ್ ರೀಚೆಬಲ್ ಆಗಿರುವುದು ಗಲಿಬಿಲಿಗೆ ಕಾರಣವಾಯಿತು.

    ಮಧ್ಯಾಹ್ನದ ವೇಳೆ ಯುವತಿ ಮನೆ ಸೇರಿದ ಬಗ್ಗೆ ಮಾಹಿತಿ ಲಭ್ಯವಾಯಿತು. ಆ ವೇಳೆಗಾಗಲೇ ಕುಂದಾಪುರ ತಹಸೀಲ್ದಾರ್ ಯುವತಿಗೆ ಕರೆ ಮಾಡಿ ಕ್ವಾರೆಂಟೈನ್ ತಪ್ಪಿಸಿ ಬಂದಿರುವ ಬಗ್ಗೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದರು. ಇತ್ತ ತಪಾಸಣಾ ಕೇಂದ್ರದ ಸಿಬ್ಬಂದಿ ಇಲ್ಲಿ ನಡೆದಿರುವ ಗೊಂದಲದ ಬಗ್ಗೆ ತಹಸೀಲ್ದಾರ್‌ಗೆ ವಿವರಿಸಿದರು. ಬಳಿಕ ತಹಸೀಲ್ದಾರ್ ಯುವತಿಯನ್ನು ಕೋಟೇಶ್ವರದ ಕ್ವಾರೆಂಟೈನ್ ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ. ಅದೇ ಸಮಯಕ್ಕೆ ಯುವತಿ ಮನೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರು ಮನೆಯಲ್ಲಿಯೇ ಇರುವಂತೆ ತಾಕೀತು ಮಾಡಿದ್ದಲ್ಲದೆ, ಭಾನುವಾರ ಮನೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ದ.ಕ. ಜಿಲ್ಲಾ ಚೆಕ್‌ಪೋಸ್ಟ್‌ನಲ್ಲಿ ಚಪ್ಪರ: ಹೆಜಮಾಡಿಯಲ್ಲಿರುವ ದ.ಕ. ಜಿಲ್ಲಾ ಚೆಕ್‌ಪೋಸ್ಟ್‌ನಲ್ಲಿ ಹೊರ ರಾಜ್ಯಗಳಿಂದ ಬರುವವರಿಗೆ ದೈಹಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮನಗಂಡ ಜಿಲ್ಲಾಡಳಿತ ಶಾಮಿಯಾನ, ತಗಡು ಚಪ್ಪರಗಳನ್ನು ಅಳವಡಿಸಿ ಶನಿವಾರ ಮತ್ತಷ್ಟು ಸ್ಥಳಾವಕಾಶ ಕಲ್ಪಿಸಿದೆ. ದಕ್ಷಿಣಕನ್ನಡ ಗಡಿ ಚೆಕ್‌ಪೋಸ್ಟ್‌ಗೆ ಮಂಗಳೂರು ಡಿಸಿಪಿ ಅರುಣಾಂಶು ಗಿರಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಮೂಲ್ಕಿ ತಹಸೀಲ್ದಾರ್ ಮಾಣಿಕ್ಯಂ, ವೃತ್ತ ನಿರೀಕ್ಷಕ ಜಯರಾಮಗೌಡ, ಎಸ್‌ಐ ಶೀತಲ್ ಅಲಗೂರು, ಕಂದಾಯ ನಿರೀಕ್ಷಕ ಪ್ರದೀಪ್‌ರೋಡ್ಕರ್, ಗ್ರಾಮಕರಣಿಕ ಪ್ರದೀಪ್ ಶೆಣೈ, ಆರೋಗ್ಯ ನಿರೀಕ್ಷಕ ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.

    ದಾದಿಯರಿಬ್ಬರಿಗೆ ಹೋಂ ಕ್ವಾರೆಂಟೈನ್: ಸುರತ್ಕಲ್ ಗುಡ್ಡೆಕೊಪ್ಲ ಕರೊನಾ ಸೋಂಕಿತ ಮಹಿಳೆ ತಪಾಸಣೆಗೊಳಪಟ್ಟ ಸುರತ್ಕಲ್‌ನ ಖಾಸಗಿ ನರ್ಸಿಂಗ್ ಹೋಂನಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಡುಬಿದ್ರಿ ಮೂಲದ ದಾದಿಯರಿಬ್ಬರಿಗೆ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಹೋಂ ಕ್ವಾರೆಂಟೈನ್‌ಗೆ ನಿರ್ದೇಶಿಸಿದೆ. ಇಬ್ಬರೂ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕರೊನಾ ಪಾಸಿಟಿವ್ ಆಗಿರುವ ಸುರತ್ಕಲ್ ಮೂಲದ ಮಹಿಳೆಯ ಪ್ರಾಥಮಿಕ ಸಂಪರ್ಕವನ್ನು ಇವರು ಹೊಂದಿಲ್ಲ. ಹಾಗಾಗಿ ಇವರನ್ನು ಮನೆಯಲ್ಲೇ ಕ್ವಾರಂಟೈನ್ ಅವಧಿ ಪೂರೈಸುವಂತೆ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts