More

    ಸುಸಜ್ಜಿತ ಸಾರ್ವಜನಿಕ ಶೌಚಗೃಹದ ಕೊರತೆ

    ಮಡಿಕೇರಿ:

    ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಮಡಿಕೇರಿಯಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಗೃಹಗಳೇ ಇಲ್ಲ. ಅಲ್ಲೊಂದು, ಇಲ್ಲೊಂದು ಇರುವ ಶೌಚಗೃಹಗಳ ಪೈಕಿ ಬಹುತೇಕ ಶೌಚಗೃಹಗಳು ನಿರ್ವಹಣೆಯ ಕೊರತೆಯಿಂದಾಗಿ ಉಪಯೋಗಕ್ಕೆ ಬಾರದಂತಾಗಿದೆ. ಹೊಸದಾಗಿ ಯಾವುದೇ ಶೌಚಗೃಹ ನಿರ್ಮಿಸುವ ಪ್ರಸ್ತಾಪ ನಗರಸಭೆ ಮುಂದೆ ಇಲ್ಲ. ಆದರೆ ಈಗ ಇರುವ ಶೌಚಗೃಹಗಳನ್ನು ನವೀಕರಣಗೊಳಿಸಲು ಮುಂದಾಗಿದ್ದರೂ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ.

    ಕೊಡಗಿನ ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ಪ್ರಮುಖ ಪ್ರವಾಸಿ ತಾಣವೂ ಹೌದು. ಇಲ್ಲಿರುವ ರಾಜಾಸೀಟ್, ಶ್ರೀ ಓಂಕಾರೇಶ್ವರ ದೇವಾಲಯ, ಕೋಟೆ, ಪ್ರಾಚ್ಯ ವಸ್ತು ಸಂಗ್ರಾಹಲಯ, ರಾಜರ ಗದ್ದುಗೆ, ಸಾಲುಮರದ ತಿಮ್ಮಕ್ಕ ಪಾರ್ಕ್, ಅಬ್ಬಿಫಾಲ್ಸ್… ಹೀಗೆ ಒಂದಕ್ಕಿಂತ ಒಂದು ಆಕರ್ಷಣೀಯವಾಗಿರುವ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ದಿನಂಪ್ರತಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರಾಂತ್ಯದ ದಿನಗಳಲ್ಲಿ ನಗರ ಗಿಜಿಗುಡುತ್ತಿರುತ್ತದೆ. ಇದರ ಜತೆಗೆ ಕಚೇರಿ ಕೆಲಸ, ಶಾಲಾ, ಕಾಲೇಜು, ವಾರದ ಸಂತೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಜಿಲ್ಲೆಯ ವಿವಿಧೆಡೆಗಳಿಂದಲೂ ಜನಸಾಮಾನ್ಯರು ಬರುತ್ತಲೇ ಇರುತ್ತಾರೆ. ಇಷ್ಟಾದರೂ ಸುಮಾರು ೪೦ ಸಾವಿರದಷ್ಟು ಜನಸಂಖ್ಯೆ ಇರುವ ಮಡಿಕೇರಿಯಲ್ಲಿ ಇರುವುದೇ ಕೇವಲ ೭ ಸಾರ್ವಜನಿಕ ಶೌಚಗೃಹಗಳು.

    ಪೃಕೃತಿಯ ಕರೆಗೆ ತುರ್ತಾಗಿ ಸ್ಪಂದಿಸಬೇಕಾದರೆ ಸದ್ಯದ ಮಟ್ಟಿಗೆ ಮಡಿಕೇರಿಯಲ್ಲಿ ಇದ್ದುದರಲ್ಲಿ ಉತ್ತಮವಾಗಿರುವುದು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಗೃಹ ಮಾತ್ರ. ಸಾವಿರಾರು ಮಂದಿ ಇಲ್ಲಿಗೆ ದಿನವೂ ಭೇಟಿ ನೀಡಿದರೂ ಪ್ರತಿದಿನ ಸ್ವಚ್ಛ ಮಾಡುವುದಲ್ಲದೆ, ನಿಯಮಿತವಾಗಿ ನಿರ್ವಹಣೆ ಮಾಡುವುದರಿಂದ ಈ ಶೌಚಾಲಯ ಉಪಯೋಗಿಸಬಹುದಾದ ಸ್ಥಿತಿಯಲ್ಲಿ ಇದೆ. ಇದನ್ನು ಹೊರತುಪಡಿಸಿದರೆ ನಗರಾದ್ಯಂತ ಇರುವ ಖಾಸಗಿ ಹೊಟೇಲ್‌ಗಳನ್ನು ಮಾಲೀಕರ ಮರ್ಜಿಯಲ್ಲಿ ಬಳಸಬೇಕಾದ ಅನಿವಾರ್ಯತೆ ಇದೆ. ಇಲ್ಲೆಲ್ಲಾ ಹೋಗಲು ಆಗದವರು ಕೊನೆಗೆ ರಸ್ತೆ ಬದಿಯ ಗೋಡೆಗಳು, ಹಳೆಯ ಕಟ್ಟಡಗಳ ಮರೆಯಲ್ಲೇ ತಮ್ಮ ಕೆಲಸ ಮುಗಿಸಿಕೊಂಡು ಬಿಡುತ್ತಾರೆ.

    ಮಡಿಕೇರಿಯಲ್ಲಿ ಶೌಚಗೃಹಗಳ ಕೊರತೆ ಇರುವುದರಿಂದ ಸ್ವಚ್ಛ ಭಾರತ್, ಸ್ವಚ್ಛ ಕೊಡಗು ಘೋಷಣೆಗಳು ಅರ್ಥ ಕಳೆದುಕೊಂಡಂತಾಗಿದೆ. ಹೊಸ ಖಾಸಗಿ ಬಸ್ ನಿಲ್ದಾಣದ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಶೌಚಾಲಯದ ನಿರ್ವಹಣೆಯೇ ಇಲ್ಲ ಎನ್ನುವುದು ಪ್ರಯಾಣಿಕರ ಆರೋಪವಾಗಿದೆ. ಖಾಸಗಿ ಬಸ್ ನಿಲ್ದಾಣದ ಶೌಚಗೃಹಕ್ಕೆ ಬಹಳಷ್ಟು ಪ್ರಯಾಣಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಬಸ್‌ಗಳ ಸಿಬ್ಬಂದಿ, ಸಾರ್ವಜನಿಕರು, ಸ್ಥಳೀಯ ವರ್ತಕರು ಬಂದು ಹೋಗುತ್ತಾರೆ. ಆದರೆ ಮೂಗು ಮುಚ್ಚಿಕೊಂಡೇ ಇಲ್ಲಿಗೆ ಬರವಂಥ ಸ್ಥಿತಿ ಇದೆ ಎನ್ನುತ್ತಾರೆ ಸಾರ್ವಜನಿಕರು. ಇಲ್ಲಿಗೆ ಬಂದರೆ ಕಾಯಿಲೆಗಳು ಹರಡುವ ಆತಂಕವೂ ಇದೆ.

    ನಗರಸಭೆ ಕಚೇರಿ ಸಂಕೀರ್ಣ ಒಳಗೆ ಪಾವತಿಸಿ ಉಪಯೋಗಿಸುವ ಶೌಚಾಲಯ ನಗರಸಭೆಯಿಂದ ನಿರ್ವಹಿಸಲ್ಪಡುತ್ತಿದೆ. ಇಲ್ಲಿ ಬರುವ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆಗೆ ನಿಗದಿತ ಶುಲ್ಕ ಕೊಡಬೇಕಿದೆ. ಆದರೆ ಇಲ್ಲೂ ನಿರ್ವಹಣೆಯ ಕೊರತೆ ಕಂಡುಬರುತ್ತದೆ. ಅಶುಚಿತ್ವದ ವಾತಾವರಣ ಅಸಹ್ಯವನ್ನು ಮೂಡಿಸುತ್ತಿದೆ. ನಗರಸಭೆ ಕಚೇರಿ ಸಂಕೀರ್ಣದ ಒಳಗೇ ಇರುವ ಶೌಚಗೃಹದ ಸ್ಥಿತಿ ಹೀಗಾದರೆ ಬೇರೆ ಕಡೆಯ ಸ್ಥಿತಿ ಊಹಿಸಿಕೊಳ್ಳಬಹುದು.
    ಗೌಳಿಬೀದಿಯಲ್ಲೂ ಒಂದು ಶೌಚಗೃಹ ಇದ್ದು, ಅಕ್ಷರಶಃ ಇದು ಕಾಡು ಸೇರಿದೆ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಆರೋಪವೂ ಇದೆ. ಹಾಗಾಗಿ ಇಲ್ಲಿ ಶೌಚಗೃಹ ಇದ್ದರೂ ಇದರ ಬಳಕೆಗೆ ಹಿಂಜರಿಯುವಂತಾಗಿದೆ. ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವೂ ಉಪಯೋಗಕ್ಕೆ ಬಾರದಂತಾಗಿದೆ. ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಮುಂಭಾಗದಲ್ಲಿನ ಶೌಚಗೃಹ ಕೂಡ ಸರಿಯಾದ ನಿರ್ವಹಣೆಯಿಲ್ಲದೆ ಉಪಯೋಗ ಇಲ್ಲದಂತಾಗಿದೆ.
    ಮಡಿಕೇರಿಯಿಂದ ಮೂರ್ನಾಡಿಗೆ ತೆರಳುವ ರಸ್ತೆಯಲ್ಲಿ ಶೌಚಗೃಹದ ಅಗತ್ಯ ಹೆಚ್ಚಿದೆ. ಕುಶಾಲನಗರ, ಮೈಸೂರು ಕಡೆಗೆ, ಭಾಗಮಂಡಲ ಕಡೆಗೆ, ಮಂಗಳೂರು ಕಡೆಗೆ ತೆರಳುವವರೂ ಇದೇ ಜಾಗದಲ್ಲಿ ಬಸ್‌ಗಾಗಿ ಕಾಯುತ್ತಿರುತ್ತಾರೆ. ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹೊರತುಪಡಿಸಿದರೆ ಇಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ದಿನದ ಎಲ್ಲಾ ಅವಧಿಯಲ್ಲಿ ಕಂಡುಬರುತ್ತಾರೆ. ಆದರೆ ಇಲ್ಲಿಯೂ ಒಂದು ಸುಸಜ್ಜಿತ ಶೌಚಗೃಹ ಇಲ್ಲ. ಇರುವ ಶೌಚಗೃಹದ ಹತ್ತಿರ ಹೋಗಲೂ ಅಸಹ್ಯವಾಗುತ್ತದೆ. ಕಳೆದ ಒಂದು ವರ್ಷದಿಂದಲೂ ಇಲ್ಲಿ ಇದೇ ಸ್ಥಿತಿ ಇದೆ. ಅಶುಚಿತ್ವದ ಬಗ್ಗೆ ಸಾರ್ವಜನಿಕರು ದೂರು ನೀಡಿದ ಸಂದರ್ಭ ಕಳೆದ ವರ್ಷ ಈ ಶೌಚಗೃಹಕ್ಕೆ ನಗರಸಭೆ ಬೀಗಹಾಕಿ ಕೈ ತೊಳೆದುಕೊಂಡಿತ್ತು. ನಂತರ ಸಾರ್ವಜನಿಕರ ಬಳಕೆಗೆಂದು ತೆರೆದಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

    ಕನಿಷ್ಠ ಹೆಚ್ಚು ಜನಸಂದಣಿ ಕಂಡು ಬರುವ ಮಾರುಕಟ್ಟೆ, ಮಹದೇವಪೇಟೆ, ಇಂದಿರಾಗಾಂಧಿ ವೃತ್ತ, ಹಳೆಯ ಮತ್ತು ಹೊಸ ಖಾಸಗಿ ಬಸ್ ನಿಲ್ದಾಣ, ಜ. ತಿಮ್ಮಯ್ಯ ವೃತ್ತ, ಪ್ರವಾಸಿ ತಾಣಗಳಾದ ರಾಜಾಸೀಟ್, ಶ್ರೀ ಓಂಕಾರೇಶ್ವರ ದೇವಾಲಯ, ಕೋಟೆ, ಪ್ರಾಚ್ಯ ವಸ್ತು ಸಂಗ್ರಾಹಲಯ, ರಾಜರ ಗದ್ದುಗೆ, ಸಾಲು ಮರದ ತಿಮ್ಮಕ್ಕ ಪಾರ್ಕ್, ಅಬ್ಬಿಫಾಲ್ಸ್ ಮತ್ತಿತರ ಕಡೆಗಳಲ್ಲಿ ಶೌಚಗೃಹ ನಿರ್ಮಿಸಬೇಕಿದೆ ಅಥವಾ ಹಾಲಿ ಇರುವ ಶೌಚಗೃಹಗಳನ್ನು ನವೀಕರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ. ಇದರಿಂದ ತಕ್ಕಮಟ್ಟಿಗೆ ನಗರದ ಶೌಚಗೃಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

    ಮಡಿಕೇರಿ ನಗರಕ್ಕೆ ಈಗಿರುವ ೭ ಸಾರ್ವಜನಿಕ ಶೌಚಗೃಹಗಳು ಏನೇನೂ ಸಾಲದು. ಆದರೆ ಈ ಬಗ್ಗೆ ನಗರಸಭೆ ತಲೆ ಕೆಡಿಸಿಕೊಂಡಿರುವಂತೆ ಕಂಡು ಬರುತ್ತಿಲ್ಲ. ಹಾಲಿ ಇರುವ ಶೌಚಗೃಹಗಳನ್ನು ನವೀಕರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ೭ ಲಕ್ಷ ರೂ. ವೆಚ್ಚ ಮಾಡಲು ಕೂಡ ನಿರ್ಧರಿಸಿದೆ. ಆದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಇನ್ನು ಕೂಡ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಜೂ. ೧೨ರ ನಂತರ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಿ ಕಾಮಗಾರಿ ಶುರು ಮಾಡಲಾಗುತ್ತದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. ಆದರೆ ಅಷ್ಟರಲ್ಲಾಗಲೇ ಮಳೆಗಾಲ ಆರಂಭವಾಗುವುದರಿಂದ ಗುಣಮಟ್ಟದ ಕಾಮಗಾರಿ ನಡೆಯುವ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದೆ.

    ಮಡಿಕೇರಿಗೆ ಅದರದ್ದೇ ಆದ ಹಿರಿಮೆ ಇದೆ. ಜ. ಕಾರ್ಯಪ್ಪ, ಜ. ತಿಮ್ಮಯ್ಯರಂಥ ಶಿಸ್ತಿನ ಸಿಪಾಯಿಗಳು ಓಡಾಡಿದ ಸ್ಥಳವಿದು. ಆದರೆ ಇಲ್ಲಿನ ಶೌಚಗೃಹಗಳ ಸ್ಥಿತಿ ನೋಡಿದರೆ ಕೊಡಗಿನವರಿಗೇ ಅವಮಾನ ಆಗುವಂತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರ ಮುಂದೆ ಕೊಡಗಿವರು ತಲೆ ತಗ್ಗಿಸಬೇಕಾದಂಥ ವಾತಾವರಣವನ್ನು ನಗರಸಭೆ ಮಾಡಿಟ್ಟಿದೆ. ನಗರದ ಹೃದಯ ಭಾಗವಾದ ಜ. ತಿಮ್ಮಯ್ಯ ವೃತ್ತದ ಬಳಿ ಮೂರ್ನಾಡು ರಸ್ತೆಯಲ್ಲಿ ಇರುವ ಶೌಚಗೃಹವೇ ನಗರದ ಶುಚಿತ್ವದ ಹಣೆಬರಹವನ್ನು ಹೇಳುತ್ತದೆ. ಕಳೆದ ಒಂದು ವರ್ಷದಿಂದ ಇದು ಹೀಗೆಯೇ ಇದೆ ಎಂದರೆ ನಗರಸಭೆ ಕಾರ್ಯವೈಖರಿಯನ್ನೇ ಪ್ರಶ್ನಿಸಬೇಕಾಗುತ್ತದೆ.
    ಜೀವ್ ಮಂಞಂಡ್ರ, ಯವಕಪಾಡಿ

    ಮಡಿಕೇರಿಯ ಶೌಚಗೃಹಗಳನ್ನು ನವೀಕರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ೭ ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಕಾಮಗಾರಿಯ ಟೆಂಡರ್ ಆಗಿರಲಿಲ್ಲ. ಜೂ. ೧೨ರ ನಂತರ ಟೆಂಡರ್ ಕರೆದು ಕಾಮಗಾರಿ ಶುರು ಮಾಡಲಾಗುವುದು. ಹೊಸದಾಗಿ ಶೌಚಗೃಹ ನಿರ್ಮಾಣದ ಪ್ರಸ್ತಾಪ ಇಲ್ಲ. ಹಾಲಿ ಇರುವ ಶೌಚಗೃಹಗಳನ್ನು ಉತ್ತಮಪಡಸಿ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
    ವಿಜಯ್, ಪೌರಾಯುಕ್ತ, ನಗರಸಭೆ ಮಡಿಕೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts