More

    ಕಾರ್ಕಳ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ

    -ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಯಾವುದೇ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ವೇಗವಾಗಿ ನಡೆಯಬೇಕಾದರೆ ಸಾಕಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಆದರೆ ಕಾರ್ಕಳ ಪುರಸಭೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

    ಪುರಸಭೆ ಕಾರ್ಯಾಲಯಕ್ಕೆ ಮಂಜೂರಾಗಿರುವ ಹುದ್ದೆಗಳ ಪ್ರಮಾಣ ಹೆಚ್ಚಿದೆ. ಆದರೆ ಇವು ಭರ್ತಿಯಾಗದೆ ಪ್ರಮುಖ ವಿಭಾಗದ ಹುದ್ದೆಗಳು ಖಾಲಿಯಾಗಿವೆ. ಇನ್ನು ಕೆಲವು ಹುದ್ದೆಗಳಲ್ಲಿ ಹೊರಗುತ್ತಿಗೆ, ದಿನಗೂಲಿ ಸಹಿತ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕಚೇರಿಯಲ್ಲಿ 20ಕ್ಕೂ ಹೆಚ್ಚಿನ ಹುದ್ದೆ ಖಾಲಿ ಇವೆ.

    ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಕೆಲಸಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎನ್ನುವ ದೂರು ಹಲವು ವರ್ಷಗಳಿಂದ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇದಕ್ಕೆ ಸಿಬ್ಬಂದಿ ಕೊರತೆ ಮೂಲ ಕಾರಣವಾಗಿದ್ದು, ತೆರವಾದ ಸ್ಥಾನಗಳಿಗೆ ಮರು ನೇಮಕ ಆಗದಿರುವುದು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಮರು ನೇಮಕವಾಗಿಲ್ಲ

    ಸಾರ್ವಜನಿಕರು ವಿವಿಧ ಸೇವೆಗಳಿಗಾಗಿ ನಿತ್ಯ ಪುರಸಭೆ ಕಚೇರಿಗೆ ಆಗಮಿಸುತ್ತಿದ್ದು, ಸಿಬ್ಬಂದಿ ಕೊರತೆ ಕಾರಣ ಸಮಯಕ್ಕೆ ತಕ್ಕಂತೆ ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹಾಗೂ ವರ್ಗಾವಣೆಗೊಂಡು ಖಾಲಿಯಾದ ಹುದ್ದೆಗಳಿಗೆ ಮರು ನೇಮಕ ಪ್ರಕ್ರಿಯೆ ಈವರೆಗೂ ನಡೆದಿಲ್ಲ. ಇದರಿಂದ ಸಾರ್ವಜನಿಕ ಸೇವೆಗಳು ಮಂದಗತಿಯಲ್ಲಿ ನಡೆಯುತ್ತಿವೆ. ಸಾರ್ವಜನಿಕರ ಸೇವೆ ವ್ಯತ್ಯಯ ಉಂಟಾಗಿ ಸಮಯ ವ್ಯರ್ಥವಾಗುತ್ತಿದೆ. ಇದು ಆಡಳಿತಕ್ಕೂ ದೊಡ್ಡ ಸವಾಲಾಗಿದೆ.

    ಪೌರ ಕಾರ್ಮಿಕರ ಕೊರತೆ

    ನಗರ ಪ್ರದೇಶ, ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಅತಿ ಮುಖ್ಯ. ಆದರೆ ಕಾರ್ಕಳ ಪುರಸಭೆ ವ್ಯಾಪ್ತಿಯ ಸಿಬ್ಬಂದಿ ಕೊರತೆ ಪಟ್ಟಿಯಲ್ಲಿ ಪೌರ ಕಾರ್ಮಿಕರದು ಸಿಂಹ ಪಾಲು. ಇದರಿಂದ ಸ್ವಚ್ಛತೆಗೆ ಅಡ್ಡಿಯಾಗುತ್ತಿದೆ. ನಗರದಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಹೆಚ್ಚುತ್ತಿದ್ದು, ವಿಲೇವಾರಿ ಸಮಸ್ಯೆ ಆಡಳಿತಕ್ಕೆ ದೊಡ್ಡ ಸವಾಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ 38 ಪೌರ ಕಾರ್ಮಿಕರು ಇರಬೇಕಿದ್ದು, ಈ ಪೈಕಿ ಕೇವಲ 20 ಮಂದಿ ಮಾತ್ರ ಇದ್ದು ಸುಮಾರು 18 ಪೌರ ಕಾರ್ಮಿಕರ ಕೊರತೆಯಿದೆ. ಇರುವವರನ್ನು ಬಳಸಿ ಸಮರ್ಪಕ ತ್ಯಾಜ್ಯ ನಿರ್ವಹಣೆ ನಡೆಸುವುದು ಆಡಳಿತಕ್ಕೆ ಕಷ್ಟಕರ.

    ಈ ಕೊರತೆಯಿಂದ ಇರುವ ಸಿಬ್ಬಂದಿಗೂ ಹೊರೆ ಅಧಿಕವಾಗಿ ಉಸಿರುಗಟ್ಟುತ್ತಿದೆ. ಪುರಸಭೆ ಕಚೇರಿಯ ದೈನಂದಿನ ಕಾರ್ಯ ಕ್ಲಪ್ತ ಸಮಯದಲ್ಲಿ ನೆರವೇರುತ್ತಿಲ್ಲ. ಜತೆಗೆ ತೆರಿಗೆ ಮತ್ತಿತರ ಸಂಪನ್ಮೂಲ ಸಂಗ್ರಹಕ್ಕೂ ತೊಡಕಾಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಿ ಸರ್ಕಾರದ ಗಮನ ಸೆಳೆದು ಸಿಬ್ಬಂದಿ ನೇಮಕವಾಗುವಂತೆ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆ.

    ಖಾಲಿಯಿರುವ ಹುದ್ದೆಗಳು

    ಪುರಸಭೆಯಲ್ಲಿ 2 ಪ್ರಥಮ ದರ್ಜೆ ಸಹಾಯಕ ಹುದ್ದೆ, ಜೂನಿಯರ್ ಪ್ರೋಗ್ರಾಂ ಆಫೀಸರ್, ನೀರು ಸರಬರಾಜು ಅಪರೇಟರ್ 4 ಹುದ್ದೆ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ಸ್ಟೆನೋಗ್ರಾಫರ್ ಹುದ್ದೆ, ಕಂಪ್ಯೂಟರ್ ಡೇಟಾ ಎಂಟ್ರಿ, ದ್ವಿತೀಯ ದರ್ಜೆ ಸಹಾಯಕ 3, ಜೂನಿಯರ್ ಆರೋಗ್ಯ ಇನ್‌ಸ್ಪೆಕ್ಟರ್ 2 ಹುದ್ದೆ, ಬಿಲ್ ಕಲೆಕ್ಟರ್, ಸಹಾಯಕ ನೀರು ಸರಬರಾಜು ಅಪರೇಟರ್ 4 ಹುದ್ದೆ, ಚಾಲಕ 2 ಹುದ್ದೆ, ಸ್ಯಾನಿಟರಿ ಸೂಪರ್‌ವೈಸರ್ 2, ಸೀನಿಯರ್ ವ್ಯಾಲ್‌ಮೆನ್ 2 ಹುದ್ದೆಗಳು ಭರ್ತಿಯಾಗದೆ ಉಳಿದಿದ್ದು ಕೆಲಸಗಳಿಗೆ ಅಡಚಣೆ ಉಂಟಾಗಿದೆ.

    ಸಿಬ್ಬಂದಿ ಕೊರತೆಯಿಂದ ಪುರಸಭೆ ಕಚೇರಿಯಲ್ಲಿ ಸೇವೆ ವಿಳಂಬವಾಗುತ್ತಿದೆ. ಆಡಳಿತಕ್ಕೂ ಉತ್ತಮ ಸೇವೆ ನೀಡಲು ತೊಡಕಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು.
    -ರಾಮಕೃಷ್ಣ, ನಾಗರಿಕ

    ಸಾರ್ವಜನಿಕರಿಗೆ ಸೇವೆ ಒದಗಿಸುವ ವಿವಿಧ ಹುದ್ದೆ ಖಾಲಿಯಾಗಿವೆ. ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಡುತ್ತಿದೆ. ತೆರವಾದ, ನಿವೃತ್ತಿ ಹೊಂದಿದ ಹುದ್ದೆಗಳಿಗೆ ಮರು ನೇಮಕವಾಗಿಲ್ಲ.
    -ರೂಪಾ ಟಿ.ಶೆಟ್ಟಿ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts