More

    ‘ರೈತ ಸಂಪರ್ಕ’ಕ್ಕೆ ಸಿಬ್ಬಂದಿ ಕೊರತೆ!

    ಹಿರೇಕೆರೂರ: ಪಟ್ಟಣ ಸೇರಿ ತಾಲೂಕಿನಲ್ಲಿರುವ ಕೃಷಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಅಧಿಕಾರಿಗಳ ಹುದ್ದೆಗಳು ಖಾಲಿ ಇರುವುದರಿಂದ ಕಚೇರಿ ಕೆಲಸಗಳಿಗೆ ತೀವ್ರ ಹಿನ್ನಡೆಯಾಗುತ್ತಿದ್ದು, ಸರ್ಕಾರಿ ಸೇವೆ ಪಡೆಯಲು ರೈತರು ಪರದಾಡುವಂತಾಗಿದೆ!

    ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕುಗಳು ಕೃಷಿಗೆ ಹೆಸರುವಾಸಿ. ಮುಂಗಾರು, ಹಿಂಗಾರು ಸೇರಿ 59,448 ಹೆಕ್ಟೇರ್ ಪ್ರದೇಶ ಬೆಳೆಗಾಗಿ ಮೀಸಲಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 57,874 ಹೆಕ್ಟೇರ್ ಬಿತ್ತನೆ ಗುರಿ ನೀಡಲಾಗಿದೆ. ಈ ಪೈಕಿ 51,257 ಮೆಕ್ಕೆಜೋಳ, 2,823 ಹತ್ತಿ ಹಾಗೂ 3,794 ಹೆಕ್ಟೇರ್ ಪ್ರದೇಶ ಸೂರ್ಯಕಾಂತಿ, ಹೆಸರು, ಉದ್ದು, ಅಲಸಂದಿ, ಶೇಂಗಾ, ಭತ್ತ ಹಾಗೂ ಇತರೆ ಬೆಳೆ ಬೆಳೆಯಲು ಮೀಸಲಿರಿಸಲಾಗಿದೆ. ಈ ಕೃಷಿ ಚಟುವಟಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ರೈತರು ಸರ್ಕಾರಿ ಸೌಲಭ್ಯಕ್ಕಾಗಿ ಹೆಣಗಾಡುವಂತಾಗಿದೆ.

    ಮಂಜೂರಾತಿ- ಖಾಲಿ ಇರುವ ಹುದ್ದೆಗಳು: ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಸೇರಿ ವಿವಿಧ 28 ಹುದ್ದೆಗಳು ಮಂಜೂರಾತಿಯಾಗಿದ್ದು, ಇದರಲ್ಲಿ ಸಹಾಯಕ ಕೃಷಿ ನಿರ್ದೇಶಕ 1, ಅಧೀಕ್ಷಕರು 1, ಪ್ರಥಮ ದರ್ಜೆ ಸಹಾಯಕರು 1, ವೃಷಭ ಪಾಲಕ 1 ಸ್ಥಾನ ಮಂಜೂರಾತಿಗೆ ತಕ್ಕಂತೆ ಭರ್ತಿಯಾಗಿವೆ. ಇನ್ನುಳಿದಂತೆ ಕೃಷಿ ಅಧಿಕಾರಿ 5ರಲ್ಲಿ 1 ಖಾಲಿ, ಸಹಾಯಕ ಕೃಷಿ ಅಧಿಕಾರಿಗಳು 11ರಲ್ಲಿ 7 ಖಾಲಿ, ದ್ವಿತೀಯ ದರ್ಜೆ ಸಹಾಯಕರು 2ರಲ್ಲಿ 1 ಖಾಲಿ, ಗ್ರುಪ್ ಡಿ 3ರಲ್ಲಿ 2 ಖಾಲಿ, ರೇಖಾಗಾರರು 1, ಹಿರಿಯ ವಾಹನ ಚಾಲಕ 1, ಹಿರಿಯ ಬೆರಳುಚ್ಚುಗಾರರು 1 ಸೇರಿ ಒಟ್ಟು 14 ಹುದ್ದೆಗಳು ಖಾಲಿ ಉಳಿದಿವೆ.

    ಹೊರಗುತ್ತಿಗೆ ಅನಿವಾರ್ಯತೆ: ಕೆಲಸದ ಒತ್ತಡ ಹಾಗೂ ಮಂಜೂರಾತಿ ದೊರಕದ ಕಾರಣ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ 1, ಆರ್.ಎಸ್.ಕೆ. ಅಕೌಂಟೆಂಟ್ 3, ಗ್ರೂಪ್ ಡಿ 2, ಜಲಾನಯನ ಅಭಿವೃದ್ಧಿ ಸಹಾಯಕರು 2 ಸೇರಿ ಒಟ್ಟು 9 ನೌಕರರನ್ನು ನೇಮಿಸಿಕೊಳ್ಳಲಾಗಿದೆ.

    ವಿಲೇವಾರಿ ವಿಳಂಬ: ಕಿಸಾನ್ ಸಮ್ಮಾನ್, ರೈತ ಸಿರಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಕೃಷಿ ಯಾಂತ್ರೀಕರಣ, ತಾಡಪತ್ರಿ ಹೀಗೆ ಹಲವು ಯೋಜನೆಗಳು ಜಾರಿಯಲ್ಲಿದ್ದು, ಇದಕ್ಕಾಗಿ ವರ್ಷಕ್ಕೆ 15ರಿಂದ 16 ಸಾವಿರ ರೈತರು ಅರ್ಜಿ ಸಲ್ಲಿಸುತ್ತಾರೆ. ಅಧಿಕಾರಿಗಳ ಕೊರತೆ ಇರುವುದರಿಂದ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ಇನ್ನು ಅಧಿಕಾರಿಗಳು ವಿವಿಧ ಚುನಾವಣೆ, ಸಭೆ, ಸಮಾರಂಭ, ಕ್ಷೇತ್ರ ವೀಕ್ಷಣೆಯಂತಹ ಕೆಲಸಗಳಿಗೆ ತೆರಳಿದರೆ ಕಚೇರಿ ಕೆಲಸಗಳು ಮತ್ತಷ್ಟು ವಿಳಂಬವಾಗುತ್ತಿದ್ದು, ಅಧಿಕಾರಿಗಳು ರೈತರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ.

    ಬೇಕಿದೆ ಸ್ವಂತ ಕಟ್ಟಡ: ಪಟ್ಟಣ ಹಾಗೂ ರಟ್ಟಿಹಳ್ಳಿಯ ಕೃಷಿ ಮತ್ತು ರೈತ ಸಂಪರ್ಕ ಕೇಂದ್ರಗಳು ಸರ್ಕಾರಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಹಂಸಭಾವಿಯಲ್ಲಿನ ರೈತ ಸಂಪರ್ಕ ಕೇಂದ್ರ ಲೊಕೋಪಯೋಗಿ ಇಲಾಖೆಯ ವಸತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕೃಷಿ ಉಪಕರಣ, ಬಿತ್ತನೆ ಬೀಜ, ಗೊಬ್ಬರ, ಔಷಧಿ ಹಾಗೂ ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಸ್ಥಳದ ಕೊರತೆ ಕಾಡುತ್ತಿದೆ. ಸ್ವಂತ ಕಟ್ಟಡಕ್ಕಾಗಿ ಈ ಗ್ರಾಮದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಸ್ಥಳ ಗುರುತಿಸಲಾಗಿದ್ದು, ಸರ್ಕಾರದಿಂದ ಮಂಜೂರಾತಿ ಆದೇಶ ಬರಬೇಕಿದೆ. ಆಗ ಮಾತ್ರ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಹಾಗೂ ಸೂಕ್ತ ಕಟ್ಟಡದ ಭಾಗ್ಯ ದೊರೆಯಲಿದೆ.

    ಕೃಷಿ ಸಚಿವರ ಮುಂದಿದೆ ಸವಾಲು: ಸಿಬ್ಬಂದಿ ಕೊರತೆ ನೀಗಿಸಿ ಎಂದು ಈ ಹಿಂದೆ ಅವರಿವರ ಬಳಿ ಮನವಿ ಮಾಡಿಕೊಳ್ಳಬೇಕಿತ್ತು. ಆದರೆ, ಈಗ ಕ್ಷೇತ್ರ ಶಾಸಕರೇ ಕೃಷಿ ಸಚಿವರಾಗಿರುವುದರಿಂದ ಈ ಎಲ್ಲ ಸಮಸ್ಯೆಗಳು ಶೀಘ್ರ ನಿವಾರಣೆಯಾಗಲಿವೆ ಎಂಬ ನಿರೀಕ್ಷೆ ಜನರಲ್ಲಿದೆ. ಹೀಗಾಗಿ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕಾದ ಸವಾಲು ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಮುಂದಿದೆ. ಇನ್ನಾದರೂ ಈ ಸಮಸ್ಯೆಗಳು ನಿವಾರಣೆಯಾಗಿ ಅನ್ನದಾತನ ಪರದಾಟ ನಿಲ್ಲುವುದೇ ಎಂಬುದನ್ನು ಕಾದುನೋಡಬೇಕಿದೆ.

    ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯವಾದ ಸ್ವಂತ ಕಟ್ಟಡ ಹಾಗೂ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ಈಗಾಗಲೇ ಮೇಲಧಿಕಾರಿಗಳಿಗೆ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಗಮನಕ್ಕೆ ತರಲಾಗಿದ್ದು, ಶಾಶ್ವತ ಪರಿಹಾರ ದೊರಕಿಸುವುದಾಗಿ ಸಚಿವರು ತಿಳಿಸಿದ್ದಾರೆ. ಪಟ್ಟಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ 16 ಲಕ್ಷ ರೂ. ವೆಚ್ಚದಲ್ಲಿ ರೈತ ಸೇವಾ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ.

    | ಮಂಜುನಾಥ ಎಂ.ವಿ., ತಾಲೂಕು ಸಹಾಯಕ ಕೃಷಿ ನಿರ್ದೇಶಕ

    ತಾಲೂಕಿನ ಕೃಷಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವಂತೆ ಹಲವು ಬಾರಿ ಶಾಸಕರಿಗೆ, ಸಚಿವರಿಗೆ, ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಕೂಡಲೆ ಮಂಜೂರಾತಿಗೆ ತಕ್ಕಂತೆ ಹುದ್ದೆಗಳನ್ನು ಭರ್ತಿ ಮಾಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.

    | ಪ್ರಭುಗೌಡ ಪ್ಯಾಟಿ, ತಾಲೂಕಾಧ್ಯಕ್ಷ, ಹಸಿರು ಸೇನೆ ಮತ್ತು ರೈತ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts