More

    ಭತ್ತದ ಬೆಳೆಗೆ ಮಳೆ ಕೊರತೆ

    ಸಿದ್ದಾಪುರ: ತಾಲೂಕಿನ ಕೃಷಿಕರ ಪ್ರಮುಖ ಬೆಳೆಯಾದ ಭತ್ತಕ್ಕೆ ಮಳೆ ಕೊರತೆ ಎದುರಾಗಿದ್ದು, ಭತ್ತದ ಸಸಿ ನಾಟಿ ಮಾಡಿದ ಗದ್ದೆಗಳಲ್ಲಿ ನೀರಿಲ್ಲದೆ ಭೂಮಿ ಬಿರುಕು ಬಿಡುತ್ತಿದೆ.

    ಸಿದ್ದಾಪುರ ತಾಲೂಕಿನಲ್ಲಿ ಸುಮಾರು 5300 ಹೆಕ್ಟೇರ್‌ನಷ್ಟು ಭತ್ತದ ಕ್ಷೇತ್ರ ಇದ್ದು, ಅದರಲ್ಲಿ ಈಗಾಗಲೇ ಶೇ. 90ರಷ್ಟು ಪ್ರದೇಶದಲ್ಲಿ ಭತ್ತದ ಸಸಿ ನಾಟಿ ಕಾರ್ಯ ಹಾಗೂ ಬೀಜ ಬಿತ್ತನೆ ನಡೆದಿದೆ. ಭತ್ತದ ಸಸಿ ನಾಟಿ ಮಾಡಿದ ಸುಮಾರು 3300ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಗದ್ದೆಗಳಲ್ಲಿ ನೀರಿಲ್ಲ. ಈ ವರ್ಷದ ಮುಂಗಾರು ಮಳೆಯ ಪೂರ್ವದ ಮಳೆ ಬೀಳದೆ ಇರುವುದರಿಂದ ಕೃಷಿ ಚಟುವಟಿಕೆ ಸ್ತಬ್ಧಗೊಂಡಿತು. ಆದರೆ, ಜುಲೈನಲ್ಲಿ ಬಿದ್ದ ಮಳೆಗೆ ಎಲ್ಲ ಕೃಷಿಕರು ಗದ್ದೆ ಹದ ಮಾಡಿ ಬೀಜ ಬಿತ್ತಿದ್ದರು. ಮಳೆಯೂ ಚೆನ್ನಾಗಿ ಬಿದ್ದು ಗದ್ದೆ ನಾಟಿಗೆ ನೀರಾಗಿತ್ತು. ಆದರೆ, ಆಗಸ್ಟ್‌ನಲ್ಲಿ ಮಳೆ ಬೀಳದಿರುವುದರಿಂದ ಸಸಿ ನಾಟಿ ಮಾಡಿದ ಗದ್ದೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿದೆ. ಇದರ ಮಧ್ಯೆ ಕೆಲ ರೈತರು ಮಳೆ ಬರುವ ಆಶಾಭಾವದಲ್ಲಿ ಬಿರುಬಿಸಿಲಿನಲ್ಲಿಯೇ ಸಸಿ ನಾಟಿ ಮಾಡುತ್ತಿದ್ದಾರೆ.

    ನಾಟಿ ಮಾಡಿದ ತಗ್ಗುಪ್ರದೇಶದ ಗದ್ದೆಗಳಲ್ಲಿ ನೀರಿದ್ದರೂ ಭತ್ತದ ಸಸಿಯ ಬೆಳವಣಿಗೆ ಕುಂಠಿತಗೊಂಡಿದೆ. ಎತ್ತರದ ಪ್ರದೇಶದ ಗದ್ದೆಗಳಲ್ಲಿ ನೀರಿಲ್ಲದೆ ನೆಲ ಬಾಯ್ತೆರೆದಿದೆ. ಹಲವು ರೈತರು ತಮ್ಮ ಗದ್ದೆಯ ಸುತ್ತಮುತ್ತ ಇರುವ ಹೊಳೆ, ಹಳ್ಳ, ಕೆರೆಗಳಿಗೆ ಪಂಪ್‌ಸೆಟ್ ಅಳವಡಿಸಿ, ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ನೀರು ಬಿಸಿಲಿನ ತಾಪಕ್ಕೆ ಬಿಸಿ ಆಗುತ್ತಿರುವುದರಿಂದ ಭತ್ತದ ಸಸಿಗಳ ಬೆಳವಣಿಗೆಗೆ ಮಾರಕವಾಗಿದೆ.

    ಮಳೆ ಪ್ರಮಾಣ ಕಡಿಮೆ: ಈ ವರ್ಷ ಜೂನ್‌ನಲ್ಲಿ ಮಳೆಯೇ ಇಲ್ಲ. ಜುಲೈನಲ್ಲಿ 1147 ಮಿ.ಮೀ. ಮಳೆ ಆಗಬೇಕಿತ್ತು. 1859 ಮಿ.ಮೀ. ಮಳೆ ದಾಖಲಾಗಿ ಶೇ. 62ರಷ್ಟು ಮಳೆ ಹೆಚ್ಚಾಗಿತ್ತು. ಆಗಸ್ಟ್‌ನಲ್ಲಿ ಸರಾಸರಿ 710 ಮಿ.ಮೀ. ಮಳೆ ಬೀಳಬೇಕಾಗಿತ್ತು. ಆದರೆ, ಕೇವಲ 271 ಮಿ.ಮೀ. ಮಳೆ ಬಿದ್ದು ದಾಖಲಾಗಿ ಶೇ. 62ರಷ್ಟು ಮಳೆ ಕೊರತೆ ಆಗಿದೆ.

    ಮಳೆ ಕೊರತೆ ಆದಾಗ ತೇವಾಂಶ ಇರುವ ಜಮೀನಿನಲ್ಲಿನ ಬೆಳೆಗೆ ಪೂರಕವಾಗಿ 19:19:19 ತರಹದ ಪೋಷಕಾಂಶಗಳನ್ನು ಒಂದು ಲೀಟರ್ ನೀರಿಗೆ 5 ಗ್ರಾಂ ಹಾಕಿ ಸಿಂಪಡಣೆ ಮಾಡುವುದರಿಂದ ಬೆಳೆಯು ಉತ್ತಮವಾಗಿ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯನ್ನು ರೈತರು ಸಂಪರ್ಕಿಸಬಹುದಾಗಿದೆ.
    I ಪ್ರಶಾಂತ ಜಿ.ಎಸ್., ಕೃಷಿ ಅಧಿಕಾರಿ ಸಿದ್ದಾಪುರ

    ಮಳೆ ಬಂದರೆ ಮಾತ್ರ ಭತ್ತ ಬೆಳೆಯಬಹುದು. ಭತ್ತದ ಸಸಿ ನಾಟಿ ಮಾಡಿದ ಗದ್ದೆಯಲ್ಲಿ ನೀರಿಲ್ಲದೆ ಬೆಳೆ ಒಣಗುತ್ತಿದೆ. ಭತ್ತ ಬೆಳೆಯುವುದೇ ಇಂದಿನ ದಿನದಲ್ಲಿ ಕಷ್ಟ. ಮಳೆ ಬೀಳಬೇಕಾದ ದಿನಗಳಲ್ಲಿ ಬಿಸಿಲಿನ ತಾಪಕ್ಕೆ ಇದ್ದ ತೇವಾಂಶವೂ ಆರಿ ಹೋಗುತ್ತಿದೆ. ಬೆಳೆ ನಾಶವಾಗುತ್ತಿದೆ. ಭತ್ತ ಬೆಳೆಯುವ ರೈತರ ಸ್ಥಿತಿ ಚಿಂತಾಜನಕವಾಗಿದೆ.

    I ರಾಮಚಂದ್ರ ನಾಯ್ಕ, ಕೃಷಿಕ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts