More

    ನನಗೆ ಸ್ವಾಭಿಮಾನದ ಗೆಲುವಾಗಲಿದೆ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿಶ್ವಾಸ

    ಮದ್ದೂರು: ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಹೆಚ್ಚು ಬಾರಿ ಜಯ ಗಳಿಸಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾರರು ನನ್ನನ್ನು ಕೈ ಹಿಡಿಯಲಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
    ತಾಲೂಕಿನ ಕೊಪ್ಪ ಗ್ರಾಮದಲ್ಲಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲ ಕ್ಷೇತ್ರ 15 ಚುನಾವಣೆಗಳನ್ನು ಎದುರಿಸಿದೆ. ಅದರಲ್ಲಿ 6 ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಾನು ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಉದಾಹರಣೆ ಇದೆ. ನಾಗಮಂಗಲ ಕ್ಷೇತ್ರದ ಜನರು ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ನೋಡಿ ಮತದಾನ ಮಾಡುವವರು. ಆದ್ದರಿಂದ, ಈ ಬಾರಿ ನನ್ನದು ಸ್ವಾಭಿಮಾನದ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಈಗಾಗಲೇ ನಾಗಮಂಗಲ ಕ್ಷೇತ್ರದಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಮಾಡಿದ್ದೇನೆ. ಇದರಿಂದ ಅನ್ಯ ಪಕ್ಷದವರಿಗೆ ನಡುಕ ಉಂಟಾಗಿದೆ. ಮುಂದಿನ ದಿನಗಳಲ್ಲಿ ಕೊಪ್ಪದಲ್ಲೂ ಒಂದು ಸ್ವಾಭಿಮಾನ ಸಮಾವೇಶ ಮಾಡುತ್ತೇನೆ. ನಾನು ಯಾವುದೇ ಪಕ್ಷಕ್ಕೆ ಹೋಗುವ ಹಿಂಗಿತ ಹೊಂದಿಲ್ಲ. ನನಗೆ ಜನರೇ ಹೈಕಮಾಂಡ್, ಜನರೇ ದೇವರು ಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಅವರಿಗೆ ಶಾಸಕ ಸುರೇಶ್‌ಗೌಡ ಅವರಿಂದ ತುಂಬಾ ನೋವಾಗಿದೆ. ಅಪ್ಪಾಜಿಗೌಡ ಅವರದು ಮೃದು ಸ್ವಭಾವದ ವ್ಯಕ್ತಿತ್ವವಾಗಿದ್ದು, ಅನಿವಾರ್ಯ ಕಾರಣಗಳಿಂದ ಅವರು ಜೆಡಿಎಸ್‌ನಲ್ಲಿದ್ದಾರೆ. ಸ್ವಾಭಿಮಾನವನ್ನು ಬದಿಗಿಟ್ಟು ಕೆಲಸ ಮಾಡುವ ಬದಲು ಮನದ ವೇದನೆಯನ್ನು ಹೊರ ಹಾಕಿ ಚುನಾವಣಾ ಸಂದರ್ಭದಲ್ಲಿ ಬೇರೆ ನಿರ್ಧಾರ ತೆಗೆದುಕೊಳ್ಳುವುದು ಸಮಂಜಸ ಎಂದು ಸಲಹೆ ನೀಡಿದರು.
    ಶಾಸಕ ಸುರೇಶ್‌ಗೌಡ ಅವರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಮತ್ತು ನಾನು ರಾಜಕೀಯದಲ್ಲಿ ಬೆಳೆಯದಂತೆ ಹಾಗೂ ನಾವುಗಳು ಬೆಳೆದರೆ ಅವರ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗುವುದು ಎಂಬ ಉದ್ದೇಶದಿಂದ ನಮ್ಮಗಳ ರಾಜಕೀಯ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಲು ಹೊರಟಿದ್ದರು ಎಂದು ಶಾಸಕ ಸುರೇಶ್‌ಗೌಡ ಅವರ ವಿರುದ್ಧ ಹರಿಹಾಯ್ದರು.
    ಮುಖಂಡರಾದ ರಮೇಶ್, ರವಿ, ನಾಗರಾಜು, ಪ್ರಕಾಶ್, ಕೋಡಿಹಳ್ಳಿ ರವಿ, ಬೆಟ್ಟಸ್ವಾಮಿ, ಚಿಕ್ಕಣ್ಣ, ಪಾಪಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts