More

    ಅರಬ್ ರಾಷ್ಟ್ರದಲ್ಲಿ ಐಪಿಎಲ್ ಬಿಸಿ ಏರಿಸಿದ ‘ಶಾರ್ಟ್ ರನ್’ ವಿವಾದ!

    ದುಬೈ: ಅರಬ್ ರಾಷ್ಟ್ರದಲ್ಲಿ ಐಪಿಎಲ್ 13ನೇ ಆವೃತ್ತಿ ಆರಂಭಗೊಂಡ ಎರಡೇ ದಿನಗಳಲ್ಲಿ ವಿವಾದವೊಂದು ಟೂರ್ನಿಯ ಬಿಸಿ ಏರಿಸಿದೆ. ಅದುವೇ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಟೈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮುಳುವಾದ ಶಾರ್ಟ್ ರನ್! ಅಂಪೈರ್ ಮಾಡಿದ ಎಡವಟ್ಟಿನಿಂದ ತನಗೆ ಸೋಲು ಎದುರಾಯಿತು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೀಗ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್‌ಗೆ ದೂರು ಕೂಡ ಸಲ್ಲಿಸಿದೆ.

    ಪಂಜಾಬ್ ಇನಿಂಗ್ಸ್‌ನ 19ನೇ ಓವರ್‌ನ 3ನೇ ಎಸೆತದಲ್ಲಿ ಮಯಾಂಕ್-ಜೋರ್ಡನ್ ಜೋಡಿ 2 ರನ್ ಓಡಿತು. ಆದರೆ ಜೋರ್ಡನ್ ಸ್ಟ್ರೈಕರ್ ಎಂಡ್‌ನಲ್ಲಿ ಕ್ರೀಸ್‌ನೊಳಗೆ ಬ್ಯಾಟ್ ಮುಟ್ಟಿಸಿರಲಿಲ್ಲವೆಂದ ಸ್ಕ್ವೆೇರ್ ಲೆಗ್ ಅಂಪೈರ್ ನಿತಿನ್ ಮೆನನ್ ‘ಶಾರ್ಟ್ ರನ್’ ಅಥವಾ ‘ಒನ್​ ಶಾರ್ಟ್​’ ಎಂದು ಘೋಷಿಸಿ ಪಂಜಾಬ್ ತಂಡಕ್ಕೆ 1 ರನ್ ಮಾತ್ರ ನೀಡಿದ್ದರು. ಆದರೆ ಟಿವಿ ಮರುಪ್ರಸಾರದಲ್ಲಿ ಮಾತ್ರ ಜೋರ್ಡನ್ ಮೊದಲ ರನ್ ಪೂರೈಸುವಾಗ ಕ್ರೀಸ್‌ನೊಳಗೆ ಬ್ಯಾಟ್ ಸ್ಪರ್ಶಿಸಿರುವಂತೆಯೇ ಕಂಡು ಬಂದಿದೆ. ಪಂದ್ಯದ ಸೂಪರ್ ಓವರ್ ಆರಂಭಕ್ಕೆ ಮೊದಲೇ ಈ ಟೆಕ್ನಿಕಲ್ ಸಾಕ್ಷ್ಯ ಲಭಿಸಿದ್ದರೂ, ಅಂಪೈರ್ ನಿರ್ಧಾರವನ್ನು ಬದಲಾಯಿಸಲಿಲ್ಲ. ಹೀಗಾಗಿ ಪಂದ್ಯ ಟೈ ಎಂದೇ ಪರಿಗಣಿಸಲ್ಪಟ್ಟಿತು.

    ಕೊನೇ ಓವರ್‌ನಲ್ಲಿ ಗೆಲುವಿಗೆ 13 ರನ್ ಬೇಕಾಗಿದ್ದಾಗ ಮಯಾಂಕ್ ಅಗರ್ವಾಲ್, ಸ್ಟೋಯಿನಿಸ್‌ರ ಮೊದಲ 3 ಎಸೆತಗಳಲ್ಲಿ 12 ರನ್ (6, 2, 4) ದೋಚಿದರು. ಬಳಿಕ 3 ಎಸೆತಗಳಲ್ಲಿ 1 ರನ್ ಗಳಿಸುವ ಸುಲಭ ಸವಾಲು ಇದ್ದಾಗ 4ನೇ ಎಸೆತದಲ್ಲಿ ರನ್ ಬರಲಿಲ್ಲ. 5ನೇ ಎಸೆತದಲ್ಲಿ ಪಂದ್ಯ ಮುಗಿಸುವ ಅವಸರದಲ್ಲಿ ಮಯಾಂಕ್ ಹೆಟ್ಮೆಯರ್‌ಗೆ ಕ್ಯಾಚ್ ನೀಡಿದರು. ಕೊನೇ ಎಸೆತದಲ್ಲಿ ಜೋರ್ಡನ್ ಕೂಡ ಔಟಾದರು. ಆದರೆ ಹಿಂದಿನ ಓವರ್‌ನಲ್ಲಿ ಅಂಪೈರ್ ಅವಾಂತರ (ಶಾರ್ಟ್ ರನ್) ನಡೆಯದೇ ಹೋಗಿದ್ದರೆ ಪಂಜಾಬ್ ಅಂತಿಮ ಓವರ್‌ನ 3ನೇ ಎಸೆತದಲ್ಲೇ ಪಂದ್ಯ ಗೆದ್ದಿರುತ್ತಿತ್ತು.

    ‘ನಾವು ಮ್ಯಾಚ್ ರೆಫ್ರಿಗೆ ಮನವಿ ಸಲ್ಲಿಸಿದ್ದೇವೆ. ಮಾನವ ಸಹಜ ತಪ್ಪುಗಳು ನಡೆಯುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೆ ಐಪಿಎಲ್‌ನಂಥ ವಿಶ್ವದರ್ಜೆಯ ಟೂರ್ನಿಯಲ್ಲಿ ಇಂಥ ಮಾನವ ಸಹಜ ತಪ್ಪುಗಳಿಗೆ ಅವಕಾಶ ನೀಡಬಾರದು. ಈ ಒಂದು ರನ್‌ನಿಂದಾಗಿ ನಾವು ಪ್ಲೇಆಫ್​ ಅವಕಾಶದಿಂದಲೂ ವಂಚಿತರಾಗಬಹುದು. ಪಂದ್ಯದ ಸೋಲು ಸೋಲೇ ಆಗಿದೆ. ಆದರೆ ಇದು ಅನ್ಯಾಯ. ನಿಯಮಗಳ ಮರುಪರಿಶೀಲನೆಯ ಭರವಸೆಯಲ್ಲಿದ್ದೇವೆ. ಅದರಿಂದ ಮಾನವ ಸಹಜ ತಪ್ಪುಗಳಿಗೆ ಅವಕಾಶವೇ ಇಲ್ಲದಂತಾಗಲಿ’ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಿಇಒ ಸತೀಶ್ ಮೆನನ್ ತಿಳಿಸಿದ್ದಾರೆ.

    ಇದನ್ನೂ ಓದಿ: ಪಂಜಾಬ್‌ಗೆ ‘ಸೂಪರ್’ ಸೋಲು; ಮಯಾಂಕ್ ಹೋರಾಟ ವ್ಯರ್ಥ

    ಆದರೆ ಪಂಜಾಬ್ ತಂಡದ ಮನವಿಯ ಹೊರತಾಗಿಯೂ ಪಂದ್ಯದ ಲಿತಾಂಶ ಬದಲಾಗುವ ಸಾಧ್ಯತೆ ಇಲ್ಲ. ಯಾಕೆಂದರೆ ಐಪಿಎಲ್ ನಿಯಮ 2.12 (ಅಂಪೈರ್ ತೀರ್ಪು) ಅನ್ವಯ, ‘ಅಂಪೈರ್ ಬೇಕಿದ್ದರೆ ತಕ್ಷಣವೇ ತಮ್ಮ ತೀರ್ಪನ್ನು ಬದಲಾಯಿಸಿಕೊಳ್ಳಬಹುದು. ಆದರೆ ಒಮ್ಮೆ ಅಂಪೈರ್ ಒಮ್ಮೆ ನಿರ್ಧಾರ ಕೈಗೊಂಡ ಬಳಿಕ ಅದುವೇ ಅಂತಿಮ’.

    ಪ್ರೀತಿ ಝಿಂಟಾ, ಸೆಹ್ವಾಗ್ ಕಿಡಿ
    ಅಂಪೈರ್‌ರ ಶಾರ್ಟ್ ರನ್ ಅವಾಂತರದ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ, ತಂಡದ ಮಾಜಿ ನಾಯಕ-ಕೋಚ್ ವೀರೇಂದ್ರ ಸೆಹ್ವಾಗ್ ಮತ್ತು ಕೆಲ ಮಾಜಿ ಕ್ರಿಕೆಟಿಗರು, ವಿಶ್ಲೇಷಕರು ಕಿಡಿಕಾರಿದ್ದಾರೆ. 6 ದಿನಗಳ ಕ್ವಾರಂಟೈನ್ ಮತ್ತು 5 ಕೋವಿಡ್ ಪರೀಕ್ಷೆಗಳನ್ನು ನಗುಮೊಗದಲ್ಲೇ ಎದುರಿಸಿದೆ. ಆದರೆ ಈ ಶಾರ್ಟ್ ರನ್ ನನಗೆ ದೊಡ್ಡ ಆಘಾತ ನೀಡಿದೆ ಎಂದಿರುವ ಪ್ರೀತಿ ಝಿಂಟಾ, ಬಿಸಿಸಿಐ ಹೊಸ ನಿಯಮ ಜಾರಿಗೆ ತರಬೇಕಾದ ಅಗತ್ಯವಿದೆ ಎಂದಿದ್ದಾರೆ.

    ಸೆಹ್ವಾಗ್ ಅವರು, ನನ್ನ ಪ್ರಕಾರ ಅಂಪೈರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು. ಯಾಕೆಂದರೆ ಅದು ಶಾರ್ಟ್ ರನ್ ಆಗಿರಲಿಲ್ಲ. ಪಂದ್ಯದ ಫಲಿತಾಂಶದಲ್ಲಿ ಅದುವೇ ವ್ಯತ್ಯಾಸ ತಂದಿತು ಎಂದು ತಮಾಷೆ ಮಿಶ್ರಿತವಾಗಿ ಅಂಪೈರ್‌ರನ್ನು ದೂರಿದ್ದಾರೆ. ಅಂಪೈರ್ ತೀರ್ಪು ಬದಲಾಯಿಸಬಹುದಿತ್ತು. ಅದಕ್ಕೆ ಯಾರೂ ಆಕ್ಷೇಪ ಎತ್ತುತ್ತಿರಲಿಲ್ಲ ಎಂದು ವಿಶ್ಲೇಷಕ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದರೆ, ಅಂಪೈರ್ ತೀರ್ಪು ನೀಡುವ ವೇಳೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಈ 2 ಅಂಕಗಳು ಪಂಜಾಬ್‌ಗೆ ಪ್ಲೇಆಫ್​ ಅವಕಾಶವನ್ನೇ ತಪ್ಪಿಸಿದರೆ ಏನು ಮಾಡುವುದು ಎಂದು ಮತ್ತೋರ್ವ ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ ಸನ್‌ರೈಸರ್ಸ್‌ ತಂಡದ ಮಾಜಿ ಕೋಚ್ ಟಾಮ್ ಮೂಡಿ, ತೃತೀಯ ಅಂಪೈರ್ ಮಧ್ಯಪ್ರವೇಶಿಸಬೇಕಿತ್ತು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts