More

    ಸ್ನೇಹ, ಪ್ರೇಮದ ಸಂಗಮ ಕನ್ನಡ

    ಧಾರವಾಡ: ಕನ್ನಡವೆಂದರೆ ಬರೀ ನುಡಿಯಲ್ಲ. ಅದು ಕನ್ನಡದ ಪ್ರೇಮ, ಸ್ನೇಹ. ಕನ್ನಡಿಗರ ಸ್ವಾಭಿಮಾನ ಮಡುಗಟ್ಟುವುದೆ ಕನ್ನಡದ ಅಸ್ಮಿತೆ ಎಂದು ಡಾ. ದಾಕ್ಷಾಯಣಿ ಉಡಿಕೇರಿ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಸಂಭ್ರಮ- ೫೦ರ ನಿಮಿತ್ತ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
    ಕನ್ನಡದ ಆದಿಕವಿ ಪಂಪ, ಗದುಗಿನ ವೀರನಾರಾಯಣನ ಭಕ್ತಿ, ಕುಮಾರವ್ಯಾಸನ ಕಾವ್ಯದಲ್ಲಿ ಧುಮ್ಮಿಕ್ಕಿ ಹರಿಯುವ ನದಿಗಳು, ಜೋಗ ಜಲಪಾತ, ಪ್ರಕೃತಿ ಸೊಬಗು, ಹಕ್ಕಿಗಳ ಕಲರವ ನೆನೆಯುವುದೆ ಕನ್ನಡ ನಾಡಿನ ಹಿರಿಮೆ. ಭಾರತ ಮಾತೆಯ ಜನನಿ ಕರ್ನಾಟಕ. ಅಂಥ ಹೆತ್ತ ತಾಯಿಯನ್ನು ಮರೆಯಬಾರದು. ಅದಕ್ಕೊಂದು ಭಾವವಿದೆ. ರಾಮಾಯಣ, ಮಹಾಭಾರತ ಮತ್ತು ವೇದಗಳ ಕಾಲದಲ್ಲೂ ಕರ್ನಾಟಕದ ಪ್ರಸ್ತಾಪವಿದೆ ಎಂದರು.
    ಬ್ರಿಟಿಷರು ತಮ್ಮ ಆಳ್ವಿಕೆಗಾಗಿ ಕರ್ನಾಟಕವನ್ನು ಮೈಸೂರು ಕರ್ನಾಟಕ, ಮುಂಬೈ ಕರ್ನಾಟಕ, ಹೈದ್ರಾಬಾದ ಕರ್ನಾಟಕ, ಮದ್ರಾಸ್ ಕರ್ನಾಟಕ, ಕೊಡಗು ಕರ್ನಾಟಕ ಎಂದು ವಿಂಗಡಿಸಿ ಒಡೆದಾಳುವ ನೀತಿ ಅನುಸರಿಸಿದ್ದರು. ಕರ್ನಾಟಕವನ್ನು ಒಂದುಗೂಡಿಸಲು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾಯರು ಮುನ್ನುಡಿ ಬರೆದರು ಎಂದರು.
    ಜಿಗಳೂರು ಮಹಿಳಾ ಕಾಲೇಜಿನ ಅಧ್ಯಾಪಕರಾದ ಶಕುಂತಲಾ ಬಿರಾದಾರ, ಶುಭಾ ಹೆಗಡೆ, ವಿಶಾಲ ಕರಿಕಟ್ಟಿ, ಅಂಜುಮನ್ ಪ.ಪೂ. ಕಾಲೇಜಿನ ಆರ್.ಎಂ. ಮುಲ್ಲಾ ಹಾಗೂ ಶಿವಾಜಿ ಪ.ಪೂ. ಕಾಲೇಜಿನ ರವೀಂದ್ರ ದೇಸಾಯಿ ವೇದಿಕೆಯಲ್ಲಿದ್ದರು.
    ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಂಗಳ ಕಾರ್ಯಕ್ರಮ ಸಂಚಾಲಕ ಗುರು ಹಿರೇಮಠ ನಿರೂಪಿಸಿದರು. ಜಿಗಳೂರು ಮಹಿಳಾ ಕಾಲೇಜು, ಅಂಜುಮನ್ ಕಾಲೇಜು, ಶಿವಾಜಿ ಕಾಲೇಜುಗಳ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಾಧ್ಯಾಪಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts