More

    ಸಾಹಿತ್ಯ ಲೋಕದಲ್ಲಿ ಕುವೆಂಪುಗೆ ಅಗ್ರಸ್ಥಾನ: ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್ ಅಭಿಮತ

    ಪಾಂಡವಪುರ: ಕನ್ನಡ ಸಾಹಿತ್ಯ ಲೋಕದಲ್ಲಿ ವಿಶ್ವಮಾನವ ಕುವೆಂಪು ಅವರ ಹೆಸರು ಅಗ್ರಮಾನ್ಯ ಸ್ಥಾನದಲ್ಲಿ ನಿಲ್ಲುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಕುವೆಂಪು ಎಲ್ಲ ರೀತಿಯ ಸಾಹಿತ್ಯ ಪ್ರಕಾರಗಳಿಗೂ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್ ತಿಳಿಸಿದರು.
    ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಶೀರ್ಷಿಕೆಯಡಿ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಹಾಗೂ ಸಾಹಿತಿ ಡಾ.ಮಣಿಕರ್ಣಿಕಾ ಅವರ ‘ಎಳೆಯರ ನಡೆ ಇಂದೇ ತಿದ್ದೋಣ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಕೇವಲ ಓದು ಬರಹವನ್ನು ಶಿಕ್ಷಣ ಎಂದರೆ ತಪ್ಪಾಗುತ್ತದೆ. ಮನುಷ್ಯನ ಸರ್ವಾಂಗೀಣ ಬೆಳವಣಿಗೆಯೇ ಶಿಕ್ಷಣವಾಗಬೇಕು. ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಶಿಕ್ಷಣ ಇಂದಿನ ಮಕ್ಕಳಿಗೆ ಬೇಕಾಗಿದೆ. ಕುವೆಂಪು ಅವರು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕಿಕೊಳ್ಳದೆ ತಾವು ಬರೆದದಕ್ಕಿಂತ ಹೆಚ್ಚಾಗಿ ಬದುಕಿದ್ದರು ಎಂದು ಹೇಳಿದರು.
    ಡಾ.ಮಣಿಕರ್ಣಿಕಾ ಅವರು ಇಳಿ ವಯಸ್ಸಿನಲ್ಲೂ ಮಕ್ಕಳಿಗೆ ಅನಿವಾರ್ಯತೆ ಇರುವ ವಿಚಾರ ಹಾಗೂ ಮಕ್ಕಳು ಏನನ್ನು ಕಲಿಯಬೇಕು, ಪಾಲಕರು ಹೇಗೆ ನಡೆದುಕೊಳ್ಳಬೇಕು ಎಂಬ ವಿಚಾರವಾಗಿ ಬರೆದಿರುವ ‘ಎಳೆಯರ ನಡೆ ಇಂದೇ ತಿದ್ದೋಣ’ ಪುಸ್ತಕ ತುಂಬ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಬ್ಬ ತಾಯಿ ಮಗುವಿಗೆ ಸಣ್ಣ ವಿಚಾರಗಳನ್ನು ಅರ್ಥೈಸುವ ರೀತಿಯಲ್ಲಿ ಸಾಹಿತ್ಯ ಬರೆದಿದ್ದಾರೆ. ಮಕ್ಕಳ ಜತೆಗೆ ಪಾಲಕರು ಪುಸ್ತಕ ಕೊಂಡು ಓದುವಂತೆ ಮನವಿ ಮಾಡಿದರು.
    ಮೈಸೂರು ಬಿಜಿಎಸ್ ಬಿಎಡ್ ಕಾಲೇಜಿನ ಪ್ರಾಧ್ಯಾಪಕ ಎಚ್.ಡಿ.ಬೆಟ್ಟಸ್ವಾಮಿ ಮಾತನಾಡಿ, ಮಲೆನಾಡಿನ ಸಣ್ಣ ಕಾಡಲ್ಲಿ ಹುಟ್ಟಿದ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಜಗತ್ತೇ ನೋಡುವಂತೆ ಮಾಡಿದರು. ಶತ ಶತಮಾನಗಳಿಂದಲೂ ಮೌಢ್ಯದಿಂದ ಬದುಕುತ್ತಿದ್ದ ನಮಗೆ ವೈಜ್ಞಾನಿಕ ದಾರಿ ತೋರಿಸುವ ಜತೆಗೆ ಮಹತ್ವದ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದರು. ನಮ್ಮೊಳಗಿನ ಚೇತನ ಎಲ್ಲವನ್ನೂ ಮೀರಿ ಬೆಳೆಯಬೇಕು ಎಂಬುದನ್ನು ತಮ್ಮ ಸಾಹಿತ್ಯದಲ್ಲಿ ಸಾರಿ ಹೇಳಿದ್ದಾರೆ.ವಿದ್ಯಾರ್ಥಿಗಳು ಕುವೆಂಪು ಅವರ ಸಾಹಿತ್ಯಗಳನ್ನು ಹೆಚ್ಚು ಓದಬೇಕು ಎಂದು ಮನವಿ ಮಾಡಿದರು.
    ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಕಾರ್ಯದರ್ಶಿ ಪ.ಮ.ನಂಜುಂಡಸ್ವಾಮಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನೇಗೌಡ, ಸಾಹಿತಿ ಚಂದ್ರಶೇಖರಯ್ಯ, ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶಂಕರ್, ಕನ್ನಡ ಪ್ರಾಧ್ಯಾಪಕಿ ಸರಸ್ವತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts