More

    ಮೊದಲ ಪ್ರಯತ್ನದಲ್ಲೇ ಕುಸುಬೆ ಬೆಳೆದು ಯಶಸ್ಸು ಕಂಡ ಜಿಲ್ಲೆಯ ರೈತ ವೆಂಕಟಸ್ವಾಮಿ

    ಜಿ.ನಾಗರಾಜ್ ಬೂದಿಕೋಟೆ
    ಎಣ್ಣೆ ಕಾಳು ಬೆಳೆಯಾಗಿರುವ ಕುಸುಬೆಯನ್ನು ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ರೈತರೊಬ್ಬರು ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆದಿದ್ದಾರೆ.

    ಕುಸುಬೆ ಹಿಂಗಾರಿನಲ್ಲಿ ಬೆಳೆಯುವ ಎಣ್ಣೆಕಾಳು ಬೆಳೆಯಾಗಿದೆ. ಇದನ್ನು ಉತ್ತರ ಕರ್ನಾಟಕ ಜಿಲ್ಲೆಗಳ ಕಪ್ಪು ಮಣ್ಣಿನಲ್ಲಿ ಮಳೆಯಾಶ್ರಿತ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಸೂರ್ಯಕಾಂತಿಯಂತೆ ಬೆಳೆಯುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇಲ್ಲ. ಒಣ ಹವೆಯಲ್ಲಿಯೂ ಇಳುವರಿ ನೀಡುವ ಬೆಳೆಯಾಗಿದೆ.

    ಮಳೆ ಕೊರತೆಯಲ್ಲಿ ಪರ್ಯಾಯ ಬೆಳೆಯಾಗಿ ಬೆಳೆಯಬಹುದಾಗಿದೆ. ಇಬ್ಬನಿ ಮೂಲಕವೇ ಬೆಳೆಗೆ ಬೇಕಾಗುವಷ್ಟು ತಂಪಿನಾಂಶ ಹೀರಿಕೊಂಡು ಬೆಳೆಯುತ್ತದೆ. ಜಿಲ್ಲೆಯಲ್ಲಿ ನೀರಿನ ಕೊರತೆ ಇರುವ ಕಾರಣ ಕಡಿಮೆ ನೀರು ಬಳಸಿ ಗುಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ಕೊತ್ತೂರು ಗ್ರಾಮದ ರೈತ ವೆಂಕಟಸ್ವಾಮಿ ಅರ್ಧ ಎಕರೆಯಲ್ಲಿ ಕೃಷಿ ಬೆಳೆದಿದ್ದಾರೆ.

    0.30 ಲಕ್ಷ ಟನ್ ಉತ್ಪಾದನೆ: ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ರೈತ ಬಾಗಲಕೋಟೆಯಿಂದ ಬಿತ್ತನೆ ಬೀಜ ತರಿಸಿ ಬಿತ್ತನೆ ಮಾಡಿದ್ದು, ಈಗ ಬೆಳೆಯು ಹೂವು ಬಿಟ್ಟು ಕಾಳುಕಟ್ಟುವ ಹಂತದಲ್ಲಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಸುಮಾರು 0.34 ಲಕ್ಷ ಹೆಕ್ಟರ್‌ನಲ್ಲಿ ಕುಸುಬೆ ಬೆಳೆಯಲಾಗುತ್ತಿದ್ದು, 0.30 ಲಕ್ಷ ಟನ್ ಉತ್ಪಾದನೆಯಾಗುತ್ತಿದ್ದು, ಪ್ರತಿ ಎಕರೆಗೆ ಸುಮಾರು 3.60 ಕ್ವಿಂಟಾಲ್ ಇಳುವರಿ ಲಭ್ಯವಾಗಿದೆ.

    ಕೀಟ ಬಾಧೆ ಕಡಿಮೆ: ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಬೆಳೆ ಬೆಳೆಯಲಾಗಿದ್ದು, ಹಿಂಗಾರಿನಲ್ಲಿ ಒಣ ಪ್ರದೇಶದಲ್ಲಿಯೂ ಬೆಳೆಯಬಹುದಾಗಿದೆ. ಈ ಬೆಳೆಯನ್ನು ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾಗಿದೆ. ಆರೈಕೆ ವಿಧಾನವೂ ಸರಳವಾಗಿದ್ದು, ಕೀಟ ಬಾಧೆ ತೀರಾ ಕಡಿಮೆ. ಮುಳ್ಳುನಿಂದ ಕೂಡಿರುವ ಈ ಬೆಳೆಯನ್ನು ಕಾಡು ಪ್ರಾಣಿಗಳು ಹಾನಿ ಮಾಡುವುದಿಲ್ಲ.

    ಹೊಸ ಬೆಳೆ ಪರಿಚಯ: ಕೃಷಿ ಇಲಾಖೆಯಿಂದ ಬಂಗಾರಪೇಟೆ ತಾಲೂಕಿನಲ್ಲಿ ಇದುವರೆಗೂ ಚಿಯಾ, ಕುಸುಬೆ, ಸೋಯಾಬಿನ್ ಸೇರಿ ಸುಮಾರು 4 ಹೊಸ ಬೆಳೆಗಳನ್ನು ರೈತರಿಗೆ ಪರಿಚಯ ಮಾಡಲಾಗಿದೆ. ಸಕಾಲಕ್ಕೆ ಕೃಷಿ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆದ ರೈತರು ಎಲ್ಲ ಬೆಳೆಗಳನ್ನು ಚೆನ್ನಾಗಿ ಆರೈಕೆ ಮಾಡಿ ಫಲ ಕಂಡಿದ್ದಾರೆ.

    ಕೃಷಿ ಇಲಾಖೆಯ ಮಲ್ಲಿಕಾರ್ಜುನ ಬಾಗಲಕೋಟೆಯಿಂದ ಬೀಜ ತರಿಸಿ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ನೀಡಿದರು. ಅರ್ಧ ಎಕರೆಯಲ್ಲಿ ಬೆಳೆಯಲಾಗಿದ್ದು, ಖರ್ಚು ಕಡಿಮೆ. ನನ್ನ ಜಮೀನು ಕಾಡಿಗೆ ಹೊಂದಿದ್ದರೂ ಕುಸುಬೆ ಬೆಳೆಯು ಮುಳ್ಳಿನಿಂದ ಕೂಡಿರುವ ಕಾರಣ ಕಾಡು ಪ್ರಾಣಿಗಳು ಬೆಳೆಯ ಅಕ್ಕ ಪಕ್ಕ ಸುಳಿಯುತ್ತಿಲ್ಲ. ಕಾಡಂಚಿನ ರೈತರು ಇಂತಹ ಬೆಳೆ ಬೆಳೆಯಲು ಮುಂದಾದರೆ ಬೆಳೆದ ಬೆಳೆ ಕೈ ಸೇರುತ್ತದೆ.
    ವೆಂಕಟಸ್ವಾಮಿ, ರೈತ ಕೊತ್ತೂರು

    ಕಡಿಮೆ ಖರ್ಚು ಹಾಗೂ ಸರಳ ವಿಧಾನದಿಂದ ಬೆಳೆ ಬೆಳೆಯಬಹುದಾಗಿದೆ. ಕಾಡು ಪ್ರಾಣಿಗಳ ಹಾವಳಿ ಇರುವ ಕಾಡಂಚಿನ ಭೂಮಿಯಲ್ಲಿ ಕುಸುಬೆ ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತದೆ. ಲಾಭದಾಯಕ ಎಣ್ಣೆ ಕಾಳು ಬೆಳೆಯಾಗಿರುವ ಕಾರಣ ಬೆಲೆಯೂ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ರೈತರ ಉತ್ಪಾದಕರ ಸಂಸ್ಥೆಗಳಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
    ಎಚ್.ಆರ್.ಅಸೀಫುಲ್ಲಾ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಬಂಗಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts