More

    ಬಿತ್ತನೆ ಬೀಜ ವಿತರಣೆ ಪ್ರಮಾಣ ಹೆಚ್ಚಿಸಿ: ಕುಷ್ಟಗಿ ಕೃಷಿ ಇಲಾಖೆ ಎಡಿ ತಿಪ್ಪೇಸ್ವಾಮಿಗೆ ರೈತರ ಮನವಿ

    ಕುಷ್ಟಗಿ: ಸಹಾಯಧನದಡಿ ಪೂರೈಸುವ ಶೇಂಗಾ ಬಿತ್ತನೆ ಬೀಜ ವಿತರಣೆ ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಪಟ್ಟಣದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿಗೆ ಬುಧವಾರ ಮನವಿ ಸಲ್ಲಿಸಿದರು.

    ಸದ್ಯ ಎಕರೆಗೆ 40ಕೆಜಿ ವಿತರಿಸಲಾಗುತ್ತಿದೆ. ಇವು ಸಾಕಾಗದೆ ಅಗತ್ಯ ಬೀಳುವ ಬೀಜವನ್ನು ಹೆಚ್ಚಿನ ಮೊತ್ತಕ್ಕೆ ಖರೀದಿಸಬೇಕಿದೆ. ಹೀಗಾಗಿ ಎಕರೆಗೆ 1 ಕ್ವಿಂಟಾಲ್ ಶೇಂಗಾ ಬೀಜ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಸಕಾಲಕ್ಕೆ ಕೇಂದ್ರ ತೆರೆಯುತ್ತಿಲ್ಲ. ಬೆಳೆಗಳಿಗೆ ಸಿಂಪಡಿಸುವ ಔಷಧವನ್ನು ಹೆಚ್ಚಿನ ದರಕ್ಕೆ ಮಾರಲಾಗುತ್ತಿದೆ. ಖರೀದಿಸಿದ ಔಷಧ ಹಾಗೂ ಬಿತ್ತನೆ ಬೀಜಕ್ಕೆ ರಸೀದಿ ನೀಡುತ್ತಿಲ್ಲವೆಂದು ರೈತರು ದೂರಿದರು. ರೈತರಾದ ಶರಣಪ್ಪ ಮೆಣೇಧಾಳ, ಮರಿಯಪ್ಪ ಚಿಪ್ರಿ, ಶಂಕರ್ ಚೌಡ್ಕಿ, ಅಪ್ಪಯ್ಯ ಬೆನಕನಾಳಮಠ, ಉಮೇಶ ಪೂಜಾರ, ಯಲ್ಲಪ್ಪ ಪೂಜಾರ, ಸುಖಮುನಿ ಮೆಣೇಧಾಳ, ಶರಣಪ್ಪ ಗಂಗನಾಳ, ರಮೇಶ ಜರಗಡ್ಡಿ ಇತರರಿದ್ದರು.

    ಎಕರೆಗೆ ಇಂತಿಷ್ಟೇ ಬಿತ್ತನೆ ಬೀಜ ಬೇಕಾಗುತ್ತದೆ ಎಂದು ಕೃಷಿ ವಿವಿ ವೈಜ್ಞಾನಿಕ ಪ್ರಮಾಣ ನಿಗದಿಪಡಿಸಿದೆ. ಅದರಂತೆ ತಾಲೂಕಿನ ಶೇಂಗಾ ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಬೀಜಗಳನ್ನು ಪೂರೈಸಲಾಗುತ್ತಿದೆ. ನಿಗದಿಗಿಂತ ಹೆಚ್ಚು ವಿತರಿಸಲು ಅವಕಾಶವಿಲ್ಲ. ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು.
    | ತಿಪ್ಪೇಸ್ವಾಮಿ, ಎಡಿ, ಕೃಷಿ ಇಲಾಖೆ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts