More

    ಮಳೆ ನಡುವೆ ಸಿಎಂ ಸ್ವಾಗತಕ್ಕೆ ಸಿದ್ಧತೆ: ಕುಷ್ಟಗಿಯಲ್ಲಿ ಹಾಳಾದ ರಸ್ತೆಗಳಿಗೆ ಕೂಡಿಬಂದ ತೇಪೆ ಭಾಗ್ಯ

    ಕುಷ್ಟಗಿ: ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಟ್ಟಣಕ್ಕೆ ಮೊದಲ ಬಾರಿ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರು ವೇದಿಕೆ ಸಿದ್ಧತೆ ನಡೆಸಿದ್ದರೆ, ಇತ್ತ ಆಡಳಿತ ವರ್ಗ ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ.

    ರಸ್ತೆಯ ಉದ್ದಕ್ಕೂ ಪಕ್ಷದ ಬಾವುಟ ಹಾಗೂ ಅಭಿಮಾನಿಗಳ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪಟ್ಟಣ ಹೊರವಲಯದ ತಾವರಗೇರಾ ರಸ್ತೆ ಪಕ್ಕದ ಜಮೀನಿನಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ. ಇದೇ ರಸ್ತೆಯ ಸಣ್ಣ ನೀರಾವರಿ ಇಲಾಖೆ ಕಚೇರಿಯ ಮುಂಭಾಗದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಅ.12ರವರೆಗೂ ಮುಂದುವರಿಯಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯನ್ನೂ ಲೆಕ್ಕಿಸದೆ ಬುಧವಾರ ಸಿಎಂರನ್ನು ಸ್ವಾಗತಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ.

    ರಸ್ತೆಗಳಿಗೆ ತೇಪೆ: ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ರಸ್ತೆಗಳೂ ಸೇರಿದಂತೆ ಪ್ರಮುಖ ಒಳ ರಸ್ತೆಗಳು ಹಾಳಾಗಿ ನಿತ್ಯ ಸಂಚರಿಸುವ ವಾಹನ ಸವಾರರು, ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಲೇ ಇದ್ದಾರೆ. ಪಟ್ಟಣದ ಹೃದಯ ಭಾಗವಾಗಿರುವ ಬಸವೇಶ್ವರ ವೃತ್ತ ಹಾಗೂ ಲೋಕೋಪಯೋಗಿ ಕಚೇರಿ ಎದುರಿನ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ. ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ತೊಂದರೆಯಾದರೆ, ಉಳಿದ ದಿನಗಳಲ್ಲಿ ಧೂಳಿಗೆ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

    ದುರಸ್ತಿಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಗುಂಡಿಗಳ ಮಧ್ಯೆ ಸಸಿಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಕ್ಯಾರೆ ಎಂದಿರಲಿಲ್ಲ. ಈಗ ಸಿಎಂ ಆಗಮನ ಹಿನ್ನೆಲೆಯಲ್ಲಿ ತೇಪೆ ಹಾಕುವ ಕಾರ್ಯ ಭರದಿಂದ ಸಾಗಿದೆ. ಹಗಲು ಹೊತ್ತು ವಾಹನಗಳ ಓಡಾಟ ಹಾಗೂ ಜನಸಂದಣಿ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ರಾತ್ರಿ ಕಾಮಗಾರಿ ನಡೆಸಲು ಮುಂದಾದಾಗ ಮಳೆ ಅಡ್ಡಿಪಡಿಸಿತು. ಮಂಗಳವಾರ ಬೆಳಗ್ಗೆ ಮಳೆ ನಿಲ್ಲುತ್ತಿದ್ದಂತೆಯೇ ಕಾಮಗಾರಿ ಆರಂಭಿಸಲಾಗಿದೆ. ಪ್ರಮುಖ ರಸ್ತೆಗಳ ಡಿವೈಡರ್‌ದ ಮಧ್ಯದ ಕಸ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪೌರ ಕಾರ್ಮಿಕರು ತೊಡಗಿದ್ದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts