More

    ಗರಿಷ್ಠ ಪ್ರಮಾಣದ ಬೀಜ ಬಿತ್ತನೆಯಲ್ಲಿ ಹೆಸರು

    ಕೂರಿಗೆಗೆ ಸೀರೆ, ಕುಪ್ಪಸ ತೊಡಿಸಿ ಬಿತ್ತನೆಗೆ ಚಾಲನೆ | ಖಾಲಿಯಾಗುತ್ತಿರುವ ದಾಸ್ತಾನು

    ಕುಷ್ಟಗಿ: ಲೋಕದೊಳೇನೇ.. ನಡೆಯುತಲಿರಲಿ ತನ್ನೀ ಕಾಯಕ ಬಿಡನೆಂದು.. ಎಂಬ ಸಾಲಿನಂತೆ ಕರೊನಾ ಎಮರ್ಜೆನ್ಸಿ ನಡುವೆ ಉಳುವಾ ಯೋಗಿ ತನ್ನ ಕಾಯಕ ಆರಂಭಿಸಿದ್ದಾನೆ. ಒಣ ಬೇಸಾಯ ಪದ್ಧತಿ ಅನುಸರಿಸುತ್ತಿರುವ ತಾಲೂಕಿನ ರೈತರು ಮಳೆಯಾಗುತ್ತಿದ್ದಂತೆ ಬಿತ್ತನೆ ಕೆಲಸಕ್ಕೆ ಮುಂದಾಗಿದ್ದಾರೆ.
    ಮುಂಗಾರು ಹಂಗಾಮಿನ ಬಿತ್ತನೆಗೆ ಜಮೀನು ಹದಗೊಳಿಸಿಕೊಂಡಿದ್ದ ರೈತರಿಗೆ ಕೃತ್ತಿಕಾ ನಕ್ಷತ್ರದ ಮಳೆ ಅನುವು ಮಾಡಿಕೊಟ್ಟಿದೆ. ತಾಲೂಕಿನ ಅಲ್ಲಲ್ಲಿ ಬಿತ್ತನೆ ಮಾಡುವ ದೃಶ್ಯಗಳು ಕಂಡುಬರುತ್ತಿವೆ. ಬಹುತೇಕ ರೈತರು ಹೆಸರು ಬಿತ್ತನೆ ಕೈಗೊಳ್ಳುತ್ತಿದ್ದಾರೆ.

    ಕೂರಿಗಿಗೆ ಸೀರೆ, ಕುಪ್ಪಸ : ಬಿತ್ತನೆ ಕೂರಿಗೆಗೆ ಸೀರೆ, ಕುಪ್ಪಸ ತೊಡಿಸಿ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಬಿತ್ತನೆಗೆ ಚಾಲನೆ ನೀಡಲಾಗುತ್ತಿದೆ. ಕೆಲವರು ಟ್ರ್ಯಾಕ್ಟರ್‌ಗಳ ಸಹಾಯದಿಂದ ಬಿತ್ತನೆ ಕೈಗೊಂಡರೆ ಬಹುತೇಕ ರೈತರು ಎತ್ತುಗಳ ಸಹಾಯದಿಂದ ಬಿತ್ತನೆ ಮಾಡುತ್ತಿದ್ದಾರೆ. ಇನ್ನೂ 4ದಿನಗಳಲ್ಲಿ ರೋಹಿಣಿ ನಕ್ಷತ್ರದ ಮಳೆ ಪ್ರವೇಶವಾಗಿ ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳದ ಬಿತ್ತನೆಯೂ ಆರಂಭವಾಗಲಿದೆ.

    ಪೂರೈಕೆಗೆ ಬೇಡಿಕೆ ಸಲ್ಲಿಕೆ : ಕುಷ್ಟಗಿ ಪಟ್ಟಣ ಸೇರಿ ತಾಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿನ ಹೆಸರು ಬೀಜದ ದಾಸ್ತಾನು ಖಾಲಿಯಾಗಿದ್ದು, ದಾಸ್ತಾನು ಪೂರೈಕೆಗೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಕುಷ್ಟಗಿಯ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಿಸಲಾಗಿದ್ದ 35 ಕ್ವಿಂಟಾಲ್ ಹೆಸರು ಬೀಜದಲ್ಲಿ ಈಗಾಗಲೇ 30ಕ್ವಿಂಟಾಲ್ ಮಾರಾಟವಾಗಿದೆ. ತಾವರಗೇರಾ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಿಸಿದ್ದ 12 ಕ್ವಿಂಟಾಲ್, ಹನುಮಸಾಗರ ರೈತ ಸಂಪರ್ಕ ಕೇಂದ್ರಕ್ಕೆ ಪೂರೈಕೆಯಾಗಿದ್ದ 75ಕ್ವಿಂಟಾಲ್ ಬೀಜದಲ್ಲಿ ಈಗಾಗಲೇ 68 ಕ್ವಿಂಟಾಲ್, ಹನುಮನಾಳ ಕೇಂದ್ರದಲ್ಲಿ ಸಂಗ್ರಹಿಸಲಾಗಿದ್ದ 60ಕ್ವಿಂಟಾಲ್‌ನಲ್ಲಿ 45ಕ್ವಿಂಟಾಲ್ ಖಾಲಿಯಾಗಿದೆ. ತೊಗರಿ ಬೀಜವು ನಂತರದಲ್ಲಿ ಪೂರೈಕೆಯಾಗಿದ್ದರಿಂದ ರೈತರು ಇದೀಗ ಖರೀದಿಸುತ್ತಿದ್ದಾರೆ. ತಾವರಗೇರಾ ರೈತ ಸಂಪರ್ಕ ಕೇಂದ್ರದಲ್ಲಿ 6ಕ್ವಿಂಟಾಲ್ ಮುಸುಕಿನ ಜೋಳ, 7.5ಕ್ವಿಂಟಾಲ್ ಸೂರ್ಯಕಾಂತಿ ಹಾಗೂ 30ಕ್ವಿಂಟಾಲ್ ಸಜ್ಜೆ ಬೀಜದ ದಾಸ್ತಾನು ಸಂಗ್ರಹವಿದೆ. ದೋಟಿಹಾಳ ಉಪ ಕೇಂದ್ರದಲ್ಲಿಯೂ 12ಕ್ವಿಂಟಾಕ್ ಸಜ್ಜೆ, 4.5ಕ್ವಿಂ. ಮುಸುಕಿನ ಜೋಳ ಹಾಗೂ 1.5ಕ್ವಿಂ. ಸೂರ್ಯಕಾಂತಿ ಬೀಜದ ದಾಸ್ತಾನು ಇದೆ. ಉಳಿದ ರೈತ ಸಂಪರ್ಕ ಕೇಂದ್ರಗಳಿಗೂ ಪೂರೈಕೆಯಾಗಲಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ನಾಗನಗೌಡ ಪಾಟೀಲ್ ತಿಳಿಸಿದ್ದಾರೆ.

    ಈಗಾಗಲೇ 10ಎಕರೆ ಜಮೀನಿನಲ್ಲಿ ಹೆಸರು ಬಿತ್ತನೆ ಮಾಡಿದ್ದೇನೆ. ಗ್ರಾಮದ ಬಹುತೇಕರು ಅತಿ ಹೆಚ್ಚು ಹೆಸರು ಬೀಜ ಬಿತ್ತನೆ ಮಾಡಿದ್ದಾರೆ. ಬಿತ್ತನೆ ನಂತರ ಸಕಾಲಕ್ಕೆ ಮಳೆಯಾದರೆ ಉತ್ತಮ ಆದಾಯ ಕೈಸೇರಲಿದೆ.
    | ವೀರಭದ್ರಯ್ಯ, ತಳುವಗೇರಾ ಗ್ರಾಮದ ರೈತ.

    ಗರಿಷ್ಠ ಪ್ರಮಾಣದ ಬೀಜ ಬಿತ್ತನೆಯಲ್ಲಿ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts