More

    ಮೇವು ಬೀಜ ನಾಪತ್ತೆ, ಖಾಲಿ ಪ್ಯಾಕೆಟ್‌ಗಳು ಪತ್ತೆ !: ಕುಷ್ಟಗಿ ಪಶು ಆಸ್ಪತ್ರೆಯ ಕೋಣೆಯಲ್ಲಿ ಸಂಗ್ರಹ

    ಕುಷ್ಟಗಿ: ರೈತರಿಗೆ ವಿತರಣೆ ಮಾಡಲೆಂದು ಪೂರೈಸಲಾದ ಮೇವು ಬೀಜದ ಅವಧಿ ಮುಗಿದ ಪ್ಯಾಕೆಟ್‌ಗಳು ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದು, ಬುಧವಾರ ಭೇಟಿ ನೀಡಿದ ರೈತ ಸಂಘದ ಪದಾಧಿಕಾರಿಗಳು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

    ಹೈನುಗಾರಿಕೆಗೆ ಅನುಕೂಲವಾಗಲೆಂದು ಮೇವು ಬೆಳೆಯಲು ಸರ್ಕಾರ ಪ್ರತಿ ವರ್ಷ ರೈತರಿಗೆ ಸಜ್ಜೆ, ಜೋಳ ಹಾಗೂ ಮೆಕ್ಕೆಜೋಳದ ಬೀಜ ವಿತರಿಸುತ್ತಿದೆ. ಹೀಗೆ ಪೂರೈಸಿದ ಬೀಜಗಳನ್ನು ರೈತರಿಗೆ ವಿತರಿಸದೆ ಕಚೇರಿಯ ಕೋಣೆಯಲ್ಲಿ ಸಂಗ್ರಹಿಸಿಡಲಾಗಿದೆ. ಕಳೆದ ನವೆಂಬರ್‌ಗೆ ಬೀಜದ ಬಳಕೆಯ ಅವಧಿ ಮುಗಿದಿದೆ. ಇನ್ನೂ ಕೆಲ ಪ್ಯಾಕೆಟ್‌ಗಳ ಅವಧಿ ಜ.2023ಕ್ಕೆ ಮುಗಿಯಲಿದೆ. ಬಳಕೆಯ ಅವಧಿ ಮುಗಿಯುತ್ತದೆಂದು ಗೊತ್ತಿದ್ದರೂ ವಿತರಿಸದೆ ಅಧಿಕಾರಿಗಳು ನಿರ್ಲಕ್ಷೃವಹಿಸಿದ್ದಾರೆಂದು ರೈತ ಸಂಘದ ಪದಾಧಿಕಾರಿಗಳು ದೂರಿದರು.

    ಬೀಜ ನಾಪತ್ತೆ: ಅದೇ ಕೋಣೆಯಲ್ಲಿ ಮೇವು ಬೀಜದ ಖಾಲಿ ಪ್ಲಾಸ್ಟಿಕ್ ಕವರ್‌ಗಳು ತುಂಬಿದ್ದ ಚೀಲಗಳು ಕಂಡುಬಂದವು. ಬೀಜ ತೆಗೆದು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ರೈತರಿಗಾಗಿ ಜಾರಿ ಮಾಡಲಾದ ಯೋಜನೆಗಳ ಲಾಭ ಅಧಿಕಾರಿಗಳು ಪಡೆಯುತ್ತಿದ್ದಾರೆಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಹವಾಲ್ದಾರ್, ಪದಾಧಿಕಾರಿಗಳಾದ ಮಹಾಂತಮ್ಮ ಪಾಟೀಲ್, ನೀಲಪ್ಪ ರಾಠೋಡ್, ಮೆಹಬೂಬ ನಡುವಲಮನಿ, ರಮೇಶ ರಾಠೋಡ್, ಶಂಕರಗೌಡ ಬೀಳಗಿ ಇತರರಿದ್ದರು.

    ರೈತರಿಗೆ ವಿತರಿಸದೆ ಸಂಗ್ರಹಿಸಿಟ್ಟ ಮೇವು ಬೀಜದ ಪ್ಯಾಕೆಟ್‌ಗಳ ಬಳಕೆಯ ಅವಧಿ ಮುಗಿದಿದೆ. ಇನ್ನೂ ಕೆಲ ಪ್ಯಾಕೆಟ್‌ಗಳ ಅವಧಿ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನೂರಾರು ಪ್ಯಾಕೆಟ್‌ಗಳಲ್ಲಿನ ಬೀಜ ಹೊರತಗೆದು ಮಾರಾಟ ಮಾಡಲಾಗಿದೆ. ಈ ಸಂಬಂಧ ಸಮಗ್ರ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.
    | ನಜೀರಸಾಬ್ ಮೂಲಿಮನಿ, ರೈತ ಸಂಘದ ಜಿಲ್ಲಾಧ್ಯಕ್ಷ, ಕೊಪ್ಪಳ

    ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆ ಹಾಗೂ ಇತರ ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿಕೊಂಡ ಕಾರಣ ರೈತರಿಗೆ ಮೇವು ಬೀಜ ವಿತರಿಸಲು ಸಾಧ್ಯವಾಗಿಲ್ಲ. ಡ್ಯಾಮೇಜ್ ಆದ ಪ್ಯಾಕೆಟ್‌ಗಳಲ್ಲಿ ಬೀಜ ತೆಗೆದು ಖಾಲಿ ಪ್ಯಾಕೆಟ್ ಸಂಗ್ರಹಿಸಿಡಲಾಗಿದೆ.
    | ಸಿದ್ದಪ್ಪ ಚವ್ಹಾಣ್, ಸಹಾಯಕ ನಿರ್ದೇಶಕ, ಪಶು ಸಂಗೋಪನೆ ಇಲಾಖೆ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts