More

    ಕುರುಕುಂದದಲ್ಲಿ ಚರಂಡಿಯಂತಾಗಿದೆ ರಸ್ತೆ

    ವಿಜಯವಾಣಿ ಸುದ್ದಿಜಾಲ ಸಿಂಧನೂರು
    ಕುರುಕುಂದ ಗ್ರಾಮ ಆರ್ಥಿಕವಾಗಿ ಅಭಿವೃದ್ಧಿಯಲ್ಲಿ ಮುಂದಿದ್ದರೂ, ಸಣ್ಣ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ನಿತ್ಯಲೂ ಹೆಚ್ಚಿನ ಓಡಾಟ ಇರುವ ಗ್ರಾಮದ ಪ್ರಮುಖ ರಸ್ತೆ ಚರಂಡಿಯಂತಾಗಿರುವುದೇ ಇದಕ್ಕೆ ಸಾಕ್ಷೃ.

    ತಿಡಿಗೋಳ ಗ್ರಾಪಂ ವ್ಯಾಪ್ತಿಯ ಅತೀ ದೊಡ್ಡ ಗ್ರಾಮ ಕುರುಕುಂದ ಆಗಿದ್ದು, ಆರ್ಥಿಕ ಸ್ಥಿತಿವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2012ನೇ ಸಾಲಿನಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಬಪ್ಪೂರು ಸಂಪರ್ಕ ರಸ್ತೆಯಿಂದ ಗ್ರಾಮದೊಳಗೆ ಪ್ರವೇಶಿಸುವ 300 ಮೀಟರ್ ರಸ್ತೆಯನ್ನು ಸಿಸಿ ರಸ್ತೆಯಾಗಿ ಮಾರ್ಪಡಿಸಲಾಗಿತ್ತು.
    ಎರಡು ವರ್ಷದವರೆಗೆ ಚೆನ್ನಾಗಿದ್ದ ರಸ್ತೆ ನಂತರ ಹಂತ ಹಂತವಾಗಿ ಹಾಳಾಗಿದೆ. ರಸ್ತೆ ತುಂಬೆಲ್ಲ ಮಣ್ಣು, ಚರಂಡಿ ನೀರು ತುಂಬಿಕೊಂಡಿರುವುದರಿಂದ ಸಂಚರಿಸುವವರು ಮೂಗುಮುಚ್ಚಿಕೊಳ್ಳುವುದು ಅನಿವಾರ್ಯವಾಗಿದೆ. ಗ್ರಾಮದಲ್ಲಿ ಎಲ್ಲಿಯೂ ಸಮರ್ಪಕ ಚರಂಡಿ ನಿರ್ಮಾಣ ಮಾಡದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

    ವಾಹನ ಹೋದರೆ ರಸ್ತೆ ಬದಿ ಇರುವವರ ಮೇಲೆ ಚರಂಡಿ ತ್ಯಾಜ್ಯ ಸಿಡಿಯುತ್ತದೆ. ಆದರೆ, ರಸ್ತೆ ಮರು ನಿರ್ಮಾಣಕ್ಕೆ ಕ್ರಮಕೈಗೊಂಡಿಲ್ಲ. ಮಸ್ಕಿ ಕ್ಷೇತ್ರ ವ್ಯಾಪ್ತಿಗೊಳಪಡುವ ಗ್ರಾಮ ನಿರ್ಲಕ್ಷೃಕ್ಕೊಳಗಾಗಿದೆ. ಗ್ರಾಮದ ಅಧಿ ದೇವತೆ ಗುಡ್ಡದರಾಜೇಶ್ವರ ದೇವಸ್ಥಾನಕ್ಕೆ ಇದೇ ರಸ್ತೆ ಮೂಲಕ ತೆರಳಬೇಕು.

    ಕುರುಕುಂದದಲ್ಲಿ ಚರಂಡಿಯಂತಾಗಿದೆ ರಸ್ತೆ
    ಜೆಜೆಎಂ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಮಧ್ಯೆ ಅಗೆದಿರುವುದು.

    ಜೆಜೆಎಂನಿಂದ ರಸ್ತೆ ಹಾಳು

    ಗ್ರಾಮದ ವಿವಿಧ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಗಳ ಸ್ಥಿತಿಯೂ ಬದಲಾಗಿಲ್ಲ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಚರಂಡಿ ನಿರ್ಮಿಸಿಲ್ಲ. ರಸ್ತೆ ಮಧ್ಯದಲ್ಲಿ ಸಣ್ಣದಾಗಿ ನೀರು ಹರಿಯಲು ವ್ಯವಸ್ಥೆ ಮಾಡಿದ್ದು ಸಮಸ್ಯೆಗೆ ಕಾರಣವಾಗಿದೆ. ಜೆಜೆಎಂ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಅಗೆದಿದ್ದರಿಂದ ಸಂಚಾರಕ್ಕೆ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಕಳೆದ ಆರೇಳು ವರ್ಷಗಳ ಹಿಂದೆ ಲಕ್ಷಾಂತರ ರೂ. ವ್ಯಯಿಸಿ ಬಪೂರು ಸಂಪರ್ಕ ರಸ್ತೆ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಚರಂಡಿ ನಿರುಪಯುಕ್ತವಾಗಿದೆ. ಈ ಚರಂಡಿಯಲ್ಲಿ ಮಳೆ ನೀರು ಮಾತ್ರ ಹರಿಯುತ್ತದೆ.

    ಕುರುಕುಂದ ಗ್ರಾಮಕ್ಕೆ ಪ್ರವೇಶ ಕಲ್ಪಿಸುವ ರಸ್ತೆ ಸುವರ್ಣ ಗ್ರಾಮ ಯೋಜನೆಯಡಿ ನಿರ್ಮಾಣವಾಗಿದೆ. ಉಳಿದ ರಸ್ತೆಗಳು ಗ್ರಾಪಂ ಅನುದಾನದಲ್ಲಿ ಆಗಿವೆ. ರಸ್ತೆ ನಿರ್ಮಾಣ ಹಾಗೂ ಚರಂಡಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು. ಜೆಜೆಎಂ ಯೋಜನೆಗಾಗಿ ರಸ್ತೆ ಅಗೆದಿದ್ದರೆ, ಮರು ನಿರ್ಮಾಣಕ್ಕೆ ಸೂಚನೆ ನೀಡಲಾಗುವುದು.
    ದೀಪಾ ಅರಳಿಕಟ್ಟಿ, ಪಿಡಿಒ, ತಿಡಿಗೋಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts