More

    ಕುಂದಾಪುರ ಆಸ್ಪತ್ರೆ ಅವ್ಯವಸ್ಥೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಅಪಘಾತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಯ ಆರೋಗ್ಯ ಪರೀಕ್ಷೆಗೆ ವೈದ್ಯರು ಬರೋದು ನಾಲ್ಕು ದಿನ ಕಳೆದು! ರೋಗಿಯ ಕತ್ತು, ತಲೆಗೆ ಗಾಯವಾಗಿದ್ದು, ಸ್ಕಾೃನಿಂಗ್ ಕೂಡ ಮಾಡುತ್ತಿಲ್ಲ. ಹೊರಗಡೆ ಸ್ಕ್ಯಾನಿಂಗ್ ಮಾಡಿಕೊಂಡು ಬರಲೂ ಹೇಳುತ್ತಿಲ್ಲ. ಯಾರು ಚಿಕಿತ್ಸೆ ಮಾಡಬೇಕು ಎಂಬ ಸ್ಪಷ್ಟತೆಯೂ ಇಲ್ಲ. ಗಂಟಲು ನೋಡಲು ಇಎನ್‌ಟಿ ವೈದ್ಯರು ಬರೋತನಕ ಕಾಯಬೇಕಂತೆ.. ಹೆಚ್ಚು ಕಮ್ಮಿಯಾದರೆ ನಾವು ಏನು ಮಾಡಬೇಕು… ಇದು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಅಳಲು. ರಿಯಾಲಿಟಿ ಚೆಕ್ ಹಿನ್ನೆಲೆಯಲ್ಲಿ ವಿಜಯವಾಣಿ ಪ್ರತಿನಿಧಿ ಆಸ್ಪತ್ರೆಗೆ ಭೇಟಿ ನೀಡಿದಾಗ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇರಲಿಲ್ಲ. ಕೈಯಲ್ಲಿ ರಕ್ತ ಸೋರುತ್ತಿದ್ದರೂ ಕೇಳುವವರಿಲ್ಲ. ಕೊನೆಗೆ ಕರೆತಂದವರೇ ಸ್ವಲ್ಪ ಜೋರು ಮಾತನಾಡಿದಾಗ ಚಿಕಿತ್ಸೆ ನೀಡಲಾಯಿತು. ಬ್ಯಾಂಡೇಜ್ ಕಟ್ಟಿದರೂ ವೈದ್ಯರ ಕೊಠಡಿಯಿಂದ ಮರಳುವಷ್ಟರಲ್ಲೇ ಅದು ಬಿಚ್ಚಿ ರಕ್ತ ಸೋರತೊಡಗಿತ್ತು. ತಾಲೂಕು ಆಸ್ಪತ್ರೆಯಲ್ಲೇ ಹೀಗಾದರೆ ಹೇಗೆ ಎಂದು ಅಳಲು ತೋಡಿಕೊಂಡರು ಗಾಯಾಳು ಕಡೆಯವರು.  ಇದಿಷ್ಟು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಳ್ಳುವ ರೀತಿಯಾದರೆ, ಆಸ್ಪತ್ರೆಯಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿದೆ. ಶವಾಗಾರ ಪರಿಸರ, ಆಸ್ಪತ್ರೆ ಹಿಂಭಾಗ, ಶೌಚಗೃಹ ಎಲ್ಲವೂ ಕೊಳಕು. ಹುಳ ಬಿದ್ದ, ಒಳಗೆ ಕಾಲಿಡಲಿಕ್ಕೂ ಆಗದಷ್ಟು ಗಲೀಜಾದ, ಬಾಗಿಲು ಕಳಚಿಕೊಂಡ ಬಾತ್‌ರೂಮಗಳು… ಒಟ್ಟಾರೆ ಕುಂದಾಪುರ ತಾಲೂಕಿಗೆ ದೊಡ್ಡ ಸರ್ಕಾರಿ ಆಸ್ಪತ್ರೆ ಇದ್ದರೂ ಜನಸಾಮಾನ್ಯರು ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಹಿಂದಿನ ಆರೋಗ್ಯ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು. ಜಿಲ್ಲಾಧಿಕಾರಿ, ಆರೋಗ್ಯ ಅಧಿಕಾರಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೊನ್ನೆ ಮೊನ್ನೆ ಕೋಟಿ ರೂ. ವೆಚ್ಚದಲ್ಲಿ ಡಾ.ಜಿ ಶಂಕರ್ ಹೈಫೈ ಕಟ್ಟಡ, ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಿಸಿ ಹಸ್ತಾಂತರಿಸಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದೆ ಕ್ರಮೇಣ ಈ ಕಟ್ಟಡಕ್ಕೂ ಇದೇ ಗತಿ ಬಂದರೂ ಬರಬಹುದು.

    ಸ್ವಚ್ಛತೆ ಅವ್ಯವಸ್ಥೆ ಬಗ್ಗೆ ಟ್ರೋಲ್: ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ತಾಲೂಕು ತಾಪಂ ಸಾಮಾನ್ಯ ಸಭೆಗಳಲ್ಲಿ ಚರ್ಚೆ ಆಗುತ್ತಲೇ ಇದೆ. ಆಸ್ಪತ್ರೆಗೆ ಬರುವ ಜನಪ್ರತಿನಿಧಿಗಳಿಗೆ ಗೌರವ ಕೊಡುವುದಿಲ್ಲ. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ತಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ವೈದ್ಯಾಧಿಕಾರಿ ವಿರುದ್ಧ ಹರಿಹಾಯ್ದಿದ್ದರು. ವೈದ್ಯಾಧಿಕಾರಿ ವಿರುದ್ಧ ಆಸ್ಪತ್ರೆ ನರ್ಸ್‌ಗಳು ಕಪ್ಪುಪಟ್ಟಿ ಕಟ್ಟಿ ಪ್ರತಿಭಟನೆ ಕೂಡ ಮಾಡಿದ್ದರು. ಇಷ್ಟೇ ಅಲ್ಲದೆ ಆಸ್ಪತ್ರೆ ಸ್ವಚ್ಛತೆ, ಚಿಕಿತ್ಸೆಗೆ ತಾತ್ಸಾರ, ರೋಗಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲೂ ಅಸಮಾಧಾನ ಇದೆ. ಇವೆಲ್ಲದರ ನಡುವೆ ಆಸ್ಪತ್ರೆ ಸ್ವಚ್ಛತೆ ಬಗ್ಗೆ ಮಾಡಲಾದ ವಿಡಿಯೋ ಸಾರ್ವಜನಿಕ ವಲಯದಲ್ಲಿ ಟ್ರೋಲ್‌ಗೂ ಒಳಗಾಗಿದೆ.

    ಆಸ್ಪತ್ರೆಗೆ ಬರುವ ಆನಾರೋಗ್ಯ ಪೀಡಿತರ ಬಗ್ಗೆ ತಾತ್ಸಾರ ಮಾಡಲಾಗುತ್ತಿದೆ. ಶೌಚಗೃಹಗಳ ಒಳಗೆ ಹೋಗಲಿಕ್ಕೂ ಆಗದಷ್ಟು ಕೆಟ್ಟದಾಗಿದೆ. ಸಾರ್ವಜನಿಕ ವಾರ್ಡ್‌ನ ಶೌಚಗೃಹದಲ್ಲಿ ಹುಳ ಬಿದ್ದಿದೆ. ಗಾಯಗೊಂಡವರಿಗೆ ಸರಿಯಾಗಿ ಬ್ಯಾಂಡೇಜ್ ಮಾಡುವುದು ಹಾಗಿರಲಿ, ಬ್ಯಾಂಡೇಜ್ ಬಟ್ಟೆ ಮನೆಯಿಂದ ತಂದವರಂತೆ ಆಡುತ್ತಾರೆ. ಆಸ್ಪತ್ರೆ ವೈದ್ಯರಿಂದ ಸಕಾರಾತ್ಮಕ ಸ್ಪಂದನೆ ಸಿಗುವುದಿಲ್ಲ. ತಾಲೂಕಿನ ಅತಿದೊಡ್ಡ ಆಸ್ಪತ್ರೆಯೇ ಹೀಗಾದರೆ ಬಡವರು ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು?
    -ಆನಂದ ಕೆ. ಕಾವೂರು, ಜಿಲ್ಲಾ ಸಂಘಟನಾ ಸಂಚಾಲಕ, ಹೊಸಂಗಡಿ

    ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಸಮಸ್ಯೆ, ಸ್ವಚ್ಛತೆ ಇನ್ನಿತರ ವಿಷಯಗಳು ಗಮನಕ್ಕೆ ಈಗ ಬಂದಿದೆ. ಜಿಲ್ಲಾ ಆರೋಗ್ಯ ಅಧಿಕಾರಿ, ಸಂಬಂಧಿತರ ಜೊತೆ ಸಮಸ್ಯೆ ಪರಿಹರಿಸುವ ಬಗ್ಗೆ ಮಾತನಾಡಿ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಇನ್ನಿತರ ಸಮಸ್ಯೆ ಪರಿಹಾರ, ಒಳ್ಳೆಯ ವ್ಯವಸ್ಥೆ, ಶುಚಿತ್ವ ಹಾಗೂ ಜನರಿಗೆ ಉತ್ತಮ ಸೌಲಭ್ಯ ಸಿಗುವ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.
    -ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts