More

    ಎರಡನೇ ಹಂತಕ್ಕೆ 3025 ಅಭ್ಯರ್ಥಿಗಳು

    ಪಡುಬಿದ್ರಿ: ಉಡುಪಿ ಜಿಲ್ಲಯ ಮೂರು ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ ಭಾನುವಾರ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಶನಿವಾರ ಮೂರು ತಾಲೂಕುಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಪೆಟ್ಟಿಗೆ, ಮತಪತ್ರಗಳೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು.

    ನೂತನವಾಗಿ ತಾಲೂಕು ರಚನೆಗೊಂಡ ಬಳಿಕ ಸ್ವತಂತ್ರವಾಗಿ ಚುನಾವಣೆಯೊಂದರ ನಿರ್ವಹಣೆ ಜವಾಬ್ದಾರಿ ಕಾಪುವಿನಲ್ಲಿ ನಡೆಯುತ್ತಿದೆ. ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುವ ಮೂಲಕ ಇತಿಹಾಸ ಸೃಷ್ಟಿಯಾಗಲಿದೆ. ತಾಲೂಕಿನ 16 ಗ್ರಾಪಂಗಳ 140 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 650 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕುತ್ಯಾರು ಗ್ರಾಪಂನ ಒಂದು ಮತಗಟ್ಟೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ. 95,700 ಮತದಾರರಿದ್ದಾರೆ. 11 ಅತಿ ಸೂಕ್ಷ್ಮ, 52 ಸೂಕ್ಷ್ಮ ಹಾಗೂ 77 ಸಾಮಾನ್ಯ ಮತಗಟ್ಟೆಗಳಿದ್ದು, ಪ್ರತೀ ಮತಗಟ್ಟೆಗಳಲ್ಲಿ ಪೊಲೀಸರು ಸೇರಿ 5 ಸಿಬ್ಬಂದಿ ಚುನಾವಣಾ ಕರ್ತವ್ಯ ಮಾಡಲಿದ್ದಾರೆ ಎಂದು ತಹಸೀಲ್ದಾರ್ ರಶ್ಮಿ ಮಾಹಿತಿ ನೀಡಿದರು.

    ಜಿಲ್ಲಾಧಿಕಾರಿ ಪರಿಶೀಲನೆ: ಕಾಪು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲೆಯ 4 ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಕುಂದಾಪುರ, ಕಾರ್ಕಳ, ಹಾಗೂ ಕಾಪು ತಾಲೂಕಿನ ಗ್ರಾಪಂಗಳ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.
    ಮತಗಟ್ಟೆ ಸಿಬ್ಬಂದಿ ಹಾಗೂ ಮತದಾರರು ಕರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. ಚುನಾವಣಾ ವೀಕ್ಷಕ ದಿನೇಶ್, ನೋಡಲ್ ಅಧಿಕಾರಿ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಉಪಸ್ಥಿತರಿದ್ದರು.

    ಕೋವಿಡ್ ಸೋಂಕಿತರಿಗೆ ಮತದಾನ ವ್ಯವಸ್ಥೆ
    ಕೋವಿಡ್ ರೋಗಿಗಳಿಗೆ ಸಾಯಂಕಾಲ 4 ಗಂಟೆ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಕರೊನಾಕ್ಕೆ ತುತ್ತಾಗಿರುವ ಮತದಾರ, ಅಭ್ಯರ್ಥಿ ಇದ್ದಲ್ಲಿ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಲಾಗಿದ್ದು, ಭಾನುವಾರ ಬೆಳಗ್ಗೆವರೆಗೂ ಈ ಸಂಬಂಧ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದಲ್ಲಿ ಮತದಾನಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗುವುದು. ಕರೊನಾ ಭಯ ಮುಕ್ತವಾಗಿ ಜನ ಮತದಾನದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

    ಮತಪತ್ರ ದೋಷ ಪರಿಹಾರಕ್ಕೆ ವ್ಯವಸ್ಥೆ
    ಉಡುಪಿ ಜಿಲ್ಲೆಯ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಉದ್ಯಾವರ ಮತಗಟ್ಟೆಯೊಂದರಲ್ಲಿ ಮತಪತ್ರದಲ್ಲಿ ಗುರುತು ಚಿಹ್ನೆ ಮುದ್ರಣ ದೋಷ ಗಮನಕ್ಕೆ ಬಂದಿದ್ದು, ಎರಡನೇ ಹಂತದ ಮತದಾನಕ್ಕೆ ಮೊದಲು ಮಸ್ಟರಿಂಗ್ ಕೇಂದ್ರದಲ್ಲಿಯೇ ಮತಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಮತಗಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಮತದಾನ ಸಂದರ್ಭದಲ್ಲಿ ಅಂತಹ ಲೋಪಗಳು ಕಂಡು ಬಂದಲ್ಲಿ ಅದನ್ನು ಪರಿಹರಿಸಲು ಮುದ್ರಣ ತಂಡವೊಂದನ್ನು ಸಜ್ಜಾಗಿರಿಸಲಾಗಿದೆ. ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಆಯಾ ತಾಲೂಕು ವ್ಯಾಪ್ತಿಯ ಗ್ರಾಪಂಗಳ ಮತ ಎಣಿಕೆ ನಡೆಯಲಿದ್ದು, ಭದ್ರತಾ ಕೊಠಡಿಗಳನ್ನೂ ಸಿದ್ಧ ಮಾಡಲಾಗಿದೆ. ಮತ ಎಣಿಕೆ ಡಿ.30ರಂದು ಬೆಳಗ್ಗೆ 8ಗಂಟೆಗೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಕುಂದಾಪುರದಲ್ಲಿ 1.90 ಲಕ್ಷ ಮತದಾರರು
    ಕುಂದಾಪುರ: ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜ್ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಶನಿವಾರ ಗ್ರಾಪಂ ಚುನಾವಭಣೆಗೆ ಮಸ್ಟರಿಂಗ್ ಪ್ರಕ್ರಿಯೆಗಳು ನಡೆಯಿತು. ಚುನಾವಣೆ ಅಧಿಕಾರಿಗಳು ಮಧ್ಯಾಹ್ನ ಮತ ಪೆಟ್ಟಿಗೆಯೊಂದಿಗೆ ನಿಯೋಜಿತ ಮತ ಕೇಂದ್ರಗಳಿಗೆ ತೆರಳಿದರು.

    ಕುಂದಾಪುರ ತಾಲೂಕಿನಲ್ಲಿ 204 ಮತಗಟ್ಟೆಗಳಿದ್ದು, ಹೆಚ್ಚುವರಿಯಾಗಿ 62 ಮತಗಟ್ಟೆ ವ್ಯವಸ್ಥೆಗೊಳಿಸಲಾಗಿದೆ. 298 ಚುನಾವಣಾ ಅಧಿಕಾರಿ, 298 ಸಹಾಯಕ ಚುನಾವಣಾ ಅಧಿಕಾರಿ, 216 ಸಿಬ್ಬಂದಿ, 596 ಪೊಲೀಸ್ ಚುನಾವಣೆ ಕರ್ತವ್ಯ ನಿಭಾಯಿಸಲಿದ್ದಾರೆ. ಕರೊನಾ ಪಾಸಿಟಿವ್ ಬಂದವರಿಗೆ ಮಧ್ಯಾಹ್ನ 4 ರಿಂದ 5 ಗಂಟೆ ಒಳಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಇದೆ. ಕುಂದಾಪುರ ತಾಲೂಕಿನ ಒಟ್ಟು 43 ಗ್ರಾಪಂಗಳಿಗೆ ಒಟ್ಟು 1,90,040 ಮತದಾರರು ಮತದಾನ ಮಾಡಲಿದ್ದು, ಪುರುಷ 91,939, ಮಹಿಳಾ 98,098 ಇದ್ದು, 3 ಇತರೆ ಮತದಾರರು. 1579 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದು, 24 ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದಾರೆ.

    ಮತದಾನ ಪ್ರಕ್ರಿಯೆ ಭದ್ರತೆಗೆೆ ಓರ್ವ ಡಿವೈಎಸ್ಪಿ, ನಾಲ್ವರು ಸಿಪಿಐ, ವಿವಿಧ ಠಾಣೆಗಳ ಒಟ್ಟು ಹನ್ನೆರಡು ಮಂದಿ ಪಿಎಸ್‌ಐ, 32 ಎಎಸ್‌ಐ, 300 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಒಂದು ಕೆಎಸ್‌ಆರ್‌ಪಿ, ಒಂದು ಡಿಎಆರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಡಿ ಗ್ರೂಪ್ ನೌಕರರು ಇದ್ದಾರೆ.
    ಮತಗಟ್ಟೆ ಬಳಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಿಕೊಂಡು ಸ್ಯಾನಿಟೈಸಿಂಗ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ.

    ಮಾಸ್ಕ್ ಧರಿಸದ ಸಿಬ್ಬಂದಿ, ಡಿಸಿ ಗರಂ
    ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯುತ್ತಿದ್ದ ಮಸ್ಟರಿಂಗ್ ವೀಕ್ಷಿಸಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಬೆಳಗ್ಗೆ ಆಗಮಿಸಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕದಿರುವುದು ನೋಡಿ ಗರಮ್ ಆಗಿ, ನಿಯಮ ಪಾಲಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಡಿಸಿ ಆಗಮಿಸಿದಾಗ ಅಧಿಕಾರಿಗಳು, ಮತಗಟ್ಟೆ ಸಿಬ್ಬಂದಿ ಮಸ್ಟರಿಂಗ್ ಕಾರ‌್ಯದಲ್ಲಿ ತೊಡಗಿಸಿಕೊಂಡಿದ್ದು, ಕೆಲವರು ಮಾಸ್ಕ್ ಬಾಯಿಗೆ ಹಾಕಿಕೊಂಡಿದ್ದರೆ ಮತ್ತೆ ಕೆಲವರು ಮಾಸ್ಕ್ ಧರಿಸಿಯೇ ಇರಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ನೀವೇ ಹೀಗೆ ಮಾಡಿದರೆ ಹೇಗೆ? ದೈಹಿಕ ಅಂತರ ಪಾಲನೆ ಇಲ್ಲ, ಮಾಸ್ಕ್ ಹಾಕಿಲ್ಲ. ಇದೇನು ಸಂತೆಯೇ ಎಂದು ಪ್ರಶ್ನಿಸಿದರು. ಗರಂ ಆದ ಅವರು ಹೆಚ್ಚುಹೊತ್ತು ಅಲ್ಲಿ ನಿಲ್ಲದೆ ಮರಳಿದರು.

    ಗ್ರಾಪಂ ಚುನಾವಣೆಗೆ ನಿಯುಕ್ತರಾದ ಎಲ್ಲ ಪಿಆರ್‌ಒ, ಎಪಿಆರ್‌ಒ, ಸಿಬ್ಬಂದಿ, ಪೊಲೀಸ್ ಕರ್ತವ್ಯಕ್ಕೆ ಹಾಜರಾಗಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಮಧ್ಯಾಹ್ನದ ಊಟದ ನಂತರ ಆಯಾ ಮತಗಟ್ಟೆಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಶಾಲೆ ಆರಂಭವಾಗದ ಹಿನ್ನೆಲೆ ಬಿಸಿಊಟ ಇಲ್ಲದ ಕಾರಣ ಮತಗಟ್ಟೆ ಬಳಿಯಿರುವ ಹೋಟೆಲ್ ಅಥವಾ ಹತ್ತಿರದ ಮನೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳ ಕಣ್ಗಾವಲಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
    ಕೆ.ರಾಜು, ಸಹಾಯಕ ಆಯುಕ್ತ ಕುಂದಾಪುರ

    ಕಾರ್ಕಳದ ಮತಗಟ್ಟೆಗಳಿಗೆ 935 ಸಿಬ್ಬಂದಿ
    ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಭಾನುವಾರ 27 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, 399 ಸ್ಥಾನಗಳಿಗೆ 796 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿ ಎಲ್ಲ ಸಿದ್ಧತೆ ಮಸ್ಟರಿಂಗ್ ಕೇಂದ್ರವಾಗಿರುವ ನಗರದ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆಯಿತು.
    ತಾಲೂಕಿನ 187 ಮತಗಟ್ಟೆಗಳಿಗೆ ಮತದಾನ ಪ್ರಕ್ರಿಯೆ ನಡೆಸಲು 935 ಸಿಬ್ಬಂದಿಯನ್ನು ಸಲಕರಣೆಗಳೊಂದಿಗೆ ವಾಹನದಲ್ಲಿ ಕಳುಹಿಸಿಕೊಡಲಾಯಿತು. ಭದ್ರತಾ ಸಿಬ್ಬಂದಿ ಸಹಿತ ಪ್ರತಿ ಮತಗಟ್ಟೆಗೆ 5ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶಿಕ್ಷಣ ಇಲಾಖೆ, ಕಂದಾಯ, ಮೋಜಣಿ ಇಲಾಖೆ, ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದೆ.

    ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಈಗಾಗಲೇ ವಿವಿಧ ಹಂತದ ತರಬೇತಿ ನೀಡಲಾಗಿದ್ದು, ಗೊಂದಲವಿಲ್ಲದೆ ಮತದಾನ ಯಶಸ್ವಿಗೆ ಎಲ್ಲ ಸಿದ್ಧತೆಯನ್ನು ತಾಲೂಕು ಆಡಳಿತ ನಡೆಸಿದೆ. ಭದ್ರತೆಗೆ 4 ಠಾಣಾಧಿಕಾರಿಗಳು, 1-ಡಿವೈಎಸ್ಪಿ, 2ವೃತ್ತ ನಿರೀಕ್ಷಕರ ಸಹಿತ 300 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ 1 ಬೆಟಾಲಿಯನ್ ಹಾಗೂ ತರಬೇತುದಾರ ಪೊಲೀಸರು ಕೂಡ ಇದರಲ್ಲಿ ಒಳಗೊಂಡಿರುವರು. ಶನಿವಾರ ಮಸ್ಟರಿಂಗ್ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ತಹಸೀಲ್ದಾರ್ ಪುರಂದರ ಹೆಗ್ಡೆ ಸಹಿತ ಅಧಿಕಾರಿಗಳು ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು. 30 ಬಸ್, ಟೆಂಪೋ ಟ್ರಾವೆಲರ್, ಜೀಪ್‌ಗಳನ್ನು ಬಳಸಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts