More

    ಕುಂದಗೋಳ ಪಪಂ ಬಿಜೆಪಿ ವಶ

    ಕುಂದಗೋಳ: ಕುಂದಗೋಳ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ವಾಸು ಗಂಗಾಯಿ, ಉಪಾಧ್ಯಕ್ಷೆಯಾಗಿ ಭುವನೇಶ್ವರಿ ಕವಲಗೇರಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.

    ಒಟ್ಟು 19 ಸದಸ್ಯರ ಬಲಾಬಲದಲ್ಲಿ ಬಿಜೆಪಿ 12, ಕಾಂಗ್ರೆಸ್- 5, ಪಕ್ಷೇತರ-2 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ 9ನೇ ವಾರ್ಡ್ ಸದಸ್ಯ ವಾಸು ಗಂಗಾಯಿ, ಉಪಾಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡ್ ಸದಸ್ಯೆ ಭುವನೇಶ್ವರಿ ಕವಲಗೇರಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೊಷಿಸಿದರು. ಕಳೆದ ಅವಧಿಯಲ್ಲಿ ಜೆಡಿಎಸ್​ನೊಂದಿಗೆ ಜಂಟಿಯಾಗಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಸದಸ್ಯರು ಈ ಬಾರಿ ಬಹುಮತವಿಲ್ಲದ ಕಾರಣ ನಾಮಪತ್ರ ಸಲ್ಲಿಕೆಯಿಂದ ದೂರವೇ ಉಳಿದಿದ್ದರು.

    ನೂತನ ಅಧ್ಯಕ್ಷ ವಾಸು ಗಂಗಾಯಿ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು, ಬಿಜೆಪಿ ಮುಖಂಡರೊಂದಿಗೆ ಸಮಾಲೋಚಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

    ಎಂ.ಆರ್. ಪಾಟೀಲ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ನೂತನ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರು ಸೇರಿಕೊಂಡು ಶ್ರಮಿಸುವ ಮೂಲಕ ರಾಜ್ಯ, ಕೇಂದ್ರ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸನ್ಮಾನಿಸಿದರು. ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ಬಿಜೆಪಿ ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಶಾಗೋಟಿ, ಬಿಜೆಪಿ ಕುಂದಗೋಳ ತಾಲೂಕಾಧ್ಯಕ್ಷ ರವಿಗೌಡ ಪಾಟೀಲ, ಪಂಕಜ ಕೋರಿ, ಭರಮಗೌಡ ದ್ಯಾಮನಗೌಡ, ಕುಂದಗೋಳ ನಗರ ಘಟಕ ಅಧ್ಯಕ್ಷ ಪೃಥ್ವಿರಾಜ್ ಕಾಳೆ, ಡಿ.ವೈ. ಲಕ್ಕನಗೌಡರ, ಈಶಪ್ಪ ಗಂಗಾಯಿ, ಬಸವರಾಜ ಕೊಪ್ಪದ, ಪಪಂ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

    ಮುಂದಿನ ಚುನಾವಣೆ ಚಿತ್ತ

    ಬಿಜೆಪಿ ಕೊನೇ ಕ್ಷಣದಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆಗೊಳಿಸಿ ಅಚ್ಚರಿ ಮೂಡಿಸಿತು. ಗುರುವಾರ ರಾತ್ರಿವರೆಗೂ ಸದಸ್ಯ ಶ್ಯಾಮ್ ಸುಂದರ್ ದೇಸಾಯಿ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ, ಮುಂಬರುವ ಚುನಾವಣೆ ದೃಷ್ಟಿಕೋನದಿಂದ ಪಕ್ಷದ ವರಿಷ್ಠರು ವಾಸು ಗಂಗಾಯಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇನ್ನೊಂದು ಮೂಲದ ಪ್ರಕಾರ, 10 ತಿಂಗಳಿಗೆ ಅಧ್ಯಕ್ಷರ ಅವಧಿಯನ್ನು ಸೀಮಿತಗೊಳಿಸಿ ಎಲ್ಲರಿಗೂ ಅವಕಾಶ ನೀಡುವ ಬಗ್ಗೆ ಅಸಮಾಧಾನಗೊಂಡವರಿಗೆ ಪಕ್ಷದ ಮುಖಂಡರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts