More

    ಕುಂಭಮೇಳ ಸಂಭ್ರಮ: ಏಪ್ರೀಲ್ 27 ರವರೆಗೆ ನಡೆಯಲಿದೆ ಸಾಧು-ಸಂತರ ಹಬ್ಬ

    (ಮಾಘ ಮಾಸದ ಅಮಾವಾಸ್ಯೆಯಂದು ಮಕರ ರಾಶಿಯಲ್ಲಿ ಸೂರ್ಯ-ಚಂದ್ರ ಗ್ರಹ ಬಂದಾಗ ವೃಷಭ ರಾಶಿಯಲ್ಲಿ ಗುರುವಿನ ಪ್ರವೇಶವಾದಾಗ ತ್ರಿವೇಣಿ ಸಂಗಮ ಪ್ರಯಾಗದಲ್ಲಿ ಕುಂಭಮೇಳಕ್ಕೆ ಚಾಲನೆ ದೊರೆಯುತ್ತದೆ. ಗುರು ಗ್ರಹವು ಕುಂಭರಾಶಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತದೆ. ಮಾ. 11ರಂದು ಆರಂಭವಾಗಿರುವ ಕುಂಭ ಮೇಳ ಸ್ನಾನ ಏಪ್ರಿಲ್ 27ರವರೆಗೆ ಜರುಗಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಾಧು-ಸಂತರು ಮತ್ತು ಭಕ್ತರು ಪಾಲ್ಗೊಳ್ಳುವ ಬೃಹತ್ ಮೇಳವಿದು)

    • ಮಂಡಗದ್ದೆ ಪ್ರಕಾಶ್ ಬಾಬು ಕೆಆಆರ್

    ಅಮೃತ ಪ್ರಾಪ್ತಿಗಾಗಿ ದೇವ ಮತ್ತು ದಾನವರಲ್ಲಿ ಸಮುದ್ರಮಥನ ನಡೆಯಿತು. ಕೊನೆಯಲ್ಲಿ ಅಮೃತ ಕಲಶ (ಕುಂಭ) ಹೊತ್ತು ಧನ್ವಂತರಿ ಮೂಡಿಬಂದ. ಅದನ್ನು ಇಂದ್ರನ ಮಗನಾದ ಜಯಂತನು ಸ್ವರ್ಗ ಲೋಕದತ್ತ ಕೊಂಡೊಯ್ಯತೊಡಗಿದ. ದಾನವರು ಅವನನ್ನು ತಡೆದರು. 12 ದಿನ ನಡೆದ ಘೋರ ಯುದ್ಧ ನಡೆಯಿತು. ಆಗ ಅಮೃತಕಲಶದಿಂದ 4 ಹನಿ ಅಮೃತ ಹೊರಬಂತು. ಗಂಗಾ ನದಿಯಲ್ಲಿ ಒಂದು ಹನಿ ಬಿತ್ತು. ಹಾಗೆಯೇ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಪ್ರಯಾಗದಲ್ಲಿ, ಮಧ್ಯಪ್ರದೇಶದ ಉಜ್ಜಯಿನಿಯ ಸಿಪ್ರಾ ನದಿಯಲ್ಲಿ ಮತ್ತು ನಾಸಿಕ್​ದಲ್ಲಿರುವ ಗೋದಾವರಿ ನದಿಯಲ್ಲಿ ತಲಾ ಒಂದು ಹನಿ ಬಿದ್ದವು ಎಂಬ ನಂಬಿಕೆಯಿದೆ. ಅಂದಿನಿಂದ ಈ ನಾಲ್ಕು ಕ್ಷೇತ್ರಗಳು ಪವಿತ್ರವಾದವು. ನಂತರ ಇಲ್ಲಿ ಮಹಾಕುಂಭಮೇಳ ಮತ್ತು ಅರ್ಧ ಕುಂಭಮೇಳ ನಡೆಯುವ ಸಂಪ್ರದಾಯ ಆರಂಭವಾಯಿತು.

    ಆರೋಗ್ಯಕ್ಕೆ ಆದ್ಯತೆ

    ಕರೊನಾ ಕಾರಣದಿಂದ ಉತ್ತರಾಖಂಡ ಸರ್ಕಾರ ಮಾರ್ಗಸೂಚಿ ಘೊಷಿಸಿದ್ದು, ಈ ಸಲ 48 ದಿನ ಮಾತ್ರ ಕುಂಭಮೇಳ ನಡೆಯಲಿದೆ. ಈಗಾಗಲೇ 64 ಸ್ನಾನಘಟ್ಟಗಳನ್ನು ಸ್ವಚ್ಛಗೊಳಿಸಲಾಗಿದೆ. ಅಖಾಡದ ಸಾಧುಗಳಿಗೆ ಶಾಹಿಸ್ನಾನ ಮಾಡಲು ಸಮಯ ನಿಗದಿಪಡಿಸಲಾಗಿದೆ. ಭಕ್ತರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಂಗಾನದಿ ತೀರದಲ್ಲಿ 800ಕ್ಕೂ ಹೆಚ್ಚು ಅಖಾಡಗಳು ಮತ್ತು ಧಾರ್ವಿುಕ ಸಾಮಾಜಿಕ ಶಿಬಿರಗಳು ತಲೆಎತ್ತಲಿವೆ. ಭಕ್ತರು ಆಧಾರ್ ಕಾರ್ಡ್, ವೈದ್ಯಕೀಯ ಪರೀಕ್ಷೆ ಪತ್ರ ಇಟ್ಟುಕೊಂಡಿರುವುದು ಕಡ್ಡಾಯ. ವಸತಿಗೆ ಆಶ್ರಮ, ಹೋಟೆಲ್, ಟೆಂಟ್​ಗಳು ಸಜ್ಜಾಗಿವೆ.

    ಸಾಧುಸಂತರ ಆಗಮನ

    ಗಂಟು ಗಂಟು ಕೂದಲು, ಮೈತುಂಬಾ ಭಸ್ಮ, ಉದ್ದುದ್ದ ನಾಮ, ಗುಡುಗುಡಿ ಸೇದಿ ಹೊಗೆ ಬಿಡುತ್ತಾ ಕಣ್ಣಲ್ಲೇ ಕೆಂಡ ಉಗುಳುತ್ತಾ ಬರುವ ನಾಗಾಸಾಧುಗಳನ್ನು ಹತ್ತಿರದಿಂದ ನೋಡಿದರೆ ಎಂಥವರಿಗೂ ಭಯ ಹುಟ್ಟುತ್ತದೆ. ಆದರೆ ಅವರ ಭಕ್ತಿ ಸಮುದ್ರದಷ್ಟು. ಸಾಧನೆಯ ಹಾದಿ ಸುಲಭವಾದುದಲ್ಲ. ಅವರು ಮೂಲತಃ ದತ್ತಾತ್ರೇಯನ ಆರಾಧಕರು. ತಪೋನಿಷ್ಠರು, ಶಾಸ್ತ್ರ ಹಾಗೂ ಶಸ್ತ್ರವಿದ್ಯಾ ಸಂಪನ್ನರು. ಮುಖ್ಯವಾಗಿ ಹಠಯೋಗಿಗಳು. ಶ್ರೀ ಶಂಕರಾಚಾರ್ಯರು ಪ್ರಾಚೀನ ಭಾರತದ ಯೋಗಿ ಹಾಗೂ ಸಾಧಕರ ವರ್ಗವನ್ನು ದಶನಾಮಿ ಸಂನ್ಯಾಸಿಗಳಾಗಿ ಸಂಘಟಿಸಿದರು. ಅದೇ ಪರಂಪರೆಯ ಅನುಸರಣೆಯಲ್ಲಿ ಕ್ರಿ.ಶ. 8ನೇ ಶತಮಾನದಲ್ಲಿ ಝುನಾ ಅಖಾಡ ಸಾಧು-ಸಂನ್ಯಾಸಿಗಳ ಒಂದು ಗಣ್ಯ ಒಕ್ಕೂಟವಾಗಿ ರೂಪುಗೊಂಡಿತು. ಅದರ ಮುಖ್ಯ ಕೇಂದ್ರ ಹರಿದ್ವಾರದಲ್ಲಿದೆ. 5 ಲಕ್ಷಕ್ಕೂ ಹೆಚ್ಚು ಸಾಧಕರು ಆ ಅಖಾಡಾದ ಆಶ್ರಮದಲ್ಲಿದ್ದಾರೆ. ಅವರು ಹಿಮಾಲಯದ ಅರಣ್ಯ ಪ್ರದೇಶದಲ್ಲಿ ಸಾಧನೆಯಲ್ಲಿ ನಿರತರಾಗಿರುತ್ತಾರೆ. ಈ ನಾಗಾ ಸಾಧುಗಳನ್ನು ಹಿಮಾಲಯದಲ್ಲಿ ಮತ್ತು ಕುಂಭಮೇಳದಲ್ಲಿ ಮಾತ್ರ ಕಾಣಲು ಸಾಧ್ಯ.

    ಮೇಳಕ್ಕೂ ಗ್ರಹಗಳಿಗೂ ಸಂಬಂಧ

    ಕುಂಭಮೇಳದ ದಿನ ತಿಥಿ, ನಕ್ಷತ್ರ ಮತ್ತು ಸಮಯ ನಿರ್ಧರಿಸುವುದು ಜ್ಯೋತಿಷ ಶಾಸ್ತ್ರದ ಆಧಾರದಲ್ಲಿ. ಅದರಲ್ಲಿ ರವಿ ಮತ್ತು ಗುರು ಗ್ರಹಗಳು ಅತಿ ಮುಖ್ಯ. ಗುರು ಗ್ರಹದ ಗತಿಯ ಆಧಾರದ ಪ್ರಕಾರ ನಾಲ್ಕು ಮುಖ್ಯ ಕ್ಷೇತ್ರಗಳಲ್ಲಿ ಸರತಿಯಂತೆ ಮೂರು ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಅಂದರೆ ಯಾವುದೇ ಕ್ಷೇತ್ರದಲ್ಲಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುವುದು. ಅರ್ಧ ಕುಂಭಮೇಳ ಮತ್ತು ಪೂರ್ಣ ಕುಂಭಮೇಳಕ್ಕಿಂತಲೂ ಅಪರೂಪವಾದ ಮಹಾಕುಂಭಮೇಳ 144 ವರ್ಷಕ್ಕೊಮ್ಮೆ ನಡೆಯುತ್ತದೆ. ಗುರು ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತಾನೆ. ಅದರ ಪ್ರಕಾರ 12 ರಾಶಿಗಳನ್ನು ದಾಟಿ ವೃಷಭ ರಾಶಿಗೆ ಬಂದಾಗ ರವಿ ಮಕರ ರಾಶಿಯಲ್ಲಿದ್ದಾಗ ಪೂರ್ಣಕುಂಭಮೇಳ ನಡೆಯುತ್ತದೆ. ಹರಿದ್ವಾರ ಮತ್ತು ಪ್ರಯಾಗ್​ನಲ್ಲಿ 6 ವರ್ಷಕ್ಕೊಮ್ಮೆ ಅರ್ಧಕುಂಭಮೇಳ ನಡೆದರೆ ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಒಂದೇ ವರ್ಷದಲ್ಲಿ ಅಥವಾ ಒಂದು ವರ್ಷದ ಅಂತರದಲ್ಲಿ ನಡೆಯುತ್ತದೆ. ಗುರು ಗ್ರಹವು ಕುಂಭರಾಶಿಯಲ್ಲಿ, ರವಿ ಮೇಷದಲ್ಲಿದ್ದರೆ ಮಾಘಮಾಸದಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತದೆ.

    ಪವಿತ್ರಸ್ನಾನ

    ಕುಂಭಮೇಳದಲ್ಲಿ ಪವಿತ್ರ ಸ್ನಾನವೇ ಅತಿ ಮುಖ್ಯ ಕಾರ್ಯಕ್ರಮ. ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ ಮತ್ತು ವಸಂತ ಪಂಚಮಿ ಈ ದಿನಗಳಲ್ಲಿ ‘ಶಾಹಿ’ ಸ್ನಾನಕ್ಕೆ ವಿಶೇಷ ಮಹತ್ವ. ಈ ದಿನಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಮೊದಲು ನಾಗಾಸಾಧುಗಳು ಸ್ನಾನ ಮಾಡುತ್ತಾರೆ. ನಂತರ ಉಳಿದವರಿಗೆ ಅವಕಾಶ. ಆ ಸಮಯದಲ್ಲಿ ನದಿ ನೀರು ಅಮೃತವಾಗಿರುತ್ತದಂತೆ. ಜನ್ಮಜನ್ಮಾಂತರದ ಪಾಪಗಳನ್ನು ತೊಳೆಯುವ ಶಕ್ತಿ ನದಿಗೆ ಇರುತ್ತದೆ. ಆದ್ದರಿಂದ ಆ ಸಮಯದಲ್ಲಿ ಎಲ್ಲರೂ ನದಿಸ್ನಾನ ಮಾಡಿ ಧನ್ಯರಾಗುತ್ತಾರೆೆ. ಗಂಗಾಸ್ನಾನಕ್ಕೆ ಅತಿ ಹೆಚ್ಚು ಪ್ರಾಶಸ್ತ್ಯ

    ಗಂಗಾ ಆರತಿ

    ಗಂಗೆಗೆ ಪ್ರತಿದಿನ ಸಂಜೆ 2 ಗಂಟೆಗಳ ಕಾಲ ಆರತಿ ಬೆಳಗುತ್ತಾರೆ. ಈ ಆರತಿ ಕಂಬವು 5 ರಿಂದ 6 ಅಡಿ ಎತ್ತರ ಇರುತ್ತದೆ. ಗಂಗಾ ಜಯಂತಿ ದಿನ ಆರತಿ ತಟ್ಟೆಗೆ ಹತ್ತು ಬಗೆಯ ಹೂವು, ಗೋಧಿಹಿಟ್ಟು, ಬತ್ತಿ, ಸುಗಂಧ ದ್ರವ್ಯ, ಗಂಧ, ಹಾಲುಗಳಿಂದ ಅಲಂಕಾರ ಮಾಡಿರುತ್ತಾರೆ. ಹರಿದ್ವಾರದ ಹರಿಕೀಪೌರಿ ಎಂಬಲ್ಲಿ ಪ್ರತಿದಿನ ಆರತಿ ಕಾರ್ಯಕ್ರಮ ಇರುತ್ತದೆ. ಕುಂಭಮೇಳದ ಸಮಯದಲ್ಲಿ ನಾಗಾಸಾಧುಗಳ ಡೇರೆಯಲ್ಲಿ ಸಂಜೆ ಆರತಿ ಜರುಗುತ್ತದೆ. ಹರಿಕೀಪೌರಿ ಗಂಗಾ ನದಿ ದಡದಲ್ಲಿದೆ. ಪ್ರತಿಸಲ ಕುಂಭಮೇಳ ಇಲ್ಲಿಯೇ ನಡೆಯುತ್ತದೆ. ಪ್ರತಿದಿನ ಗಂಗಾ ಆರತಿಯೂ ಇಲ್ಲೇ ನಡೆಯುತ್ತದೆ. ಚಾರ್​ಧಾಮ್ ಯಾತ್ರೆಯೂ ಇಲ್ಲಿಂದಲೇ ಆಗುತ್ತದೆ.

    ಸ್ನಾನದ ವಿಶೇಷ ದಿನಗಳು

    ಈಗಾಗಲೇ ಮಾ. 11ರಿಂದ 14ರವರೆಗೆ ಶಿವರಾತ್ರಿ ಸ್ನಾನ, ಅಮಾವಾಸ್ಯೆ ಶಾಹಿಸ್ನಾನ, ಮೀನ ಸಂಕ್ರಮಣ ಸ್ನಾನ ಮುಗಿದಿದ್ದು, 28ರಂದು ಹೋಳಿ ಹುಣ್ಣಿಮೆ ಸ್ನಾನ, ಏ. 12ರಂದು ಅಮಾವಾಸ್ಯೆ ಶಾಹಿಸ್ನಾನ, ಏ. 17ರಂದು ವಸಂತ ಪಂಚಮಿ ಸ್ನಾನ, ಏ. 21ರಂದು ರಾಮನವಮಿ ಸ್ನಾನ, ಏ. 27ರಂದು ಚೈತ್ರ ಹುಣ್ಣಿಮೆ ಸ್ನಾನ ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts