More

    ಕುಂಬಾರರ ಬದುಕು ಮತ್ತೆ ಅತಂತ್ರ

    ರಾಣೆಬೆನ್ನೂರ: ಕರೊನಾ 2ನೇ ಅಲೆ ಶುರುವಾದ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಕರ್ಫ್ಯೂ ಆದೇಶ ಹಾಗೂ ಕೆಲವು ಕಟ್ಟುನಿಟ್ಟಿನ ನಿಯಮಗಳಿಂದ ಹಲವರು ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಅಂತೆಯೇ ನಗರದ ಮಣ್ಣಿನ ಮಡಕೆ-ಕುಡಿಕೆಗಳನ್ನು ತಯಾರಿಸುವ ಕುಂಬಾರರ ಬುದಕು ವ್ಯಾಪಾರವಿಲ್ಲದೆ ಅತಂತ್ರ ಸ್ಥಿತಿಯತ್ತ ವಾಲುತ್ತಿದೆ.

    ಬಾಕಿ ದಿನಗಳಿಗಿಂತಲೂ ಮಾರ್ಚ್, ಏಪ್ರಿಲ್​ನ ಬಿರು ಬೇಸಿಗೆ ಸಂದರ್ಭದಲ್ಲಿ ಕುಂಬಾರರ ಮಡಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಕೆಂಪು, ಕಪ್ಪು ಬಣ್ಣದಲ್ಲಿ ಇರುವ ಮಡಕೆಗಳನ್ನು ಕುಂಬಾರರು ತಯಾರಿಸಿದ್ದರೂ, ಹೊರಹೋಗಿ ವ್ಯಾಪಾರ ಮಾಡಲು ಸಾಧ್ಯವಾಗದ ಕಾರಣ ಲಕ್ಷಾಂತರ ರೂ. ನಷ್ಟ ಎದುರಿಸುವಂತಾಗಿದೆ.

    ಪ್ರತಿ ವರ್ಷ ಬೇಸಿಗೆ ಆರಂಭವಾಗುವ ಮೂರು ತಿಂಗಳು ಮುಂಚಿತವಾಗಿಯೇ ಕುಂಬಾರರು ಮಡಕೆಗಳು, ಹೂವಿನ ಕುಂಡಗಳು, ಮೊಸರಿನ ಕುಡಿಕೆಗಳನ್ನು ತಯಾರಿಸುತ್ತಾರೆ. ಅಂತೆಯೇ ಈ ವರ್ಷವೂ ಹೆಚ್ಚಿನ ಮಡಕೆಗಳನ್ನು ತಯಾರಿಸಿದ್ದಾರೆ.

    ಮಾರ್ಚ್ ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾರಾಟ ಮಾಡಿದ್ದಾರೆ. ಆದರೆ, ಕರೊನಾ 2ನೇ ಅಲೆಯಿಂದಾಗಿ ಮಡಕೆಗಳನ್ನು ಬೇರೆ ಊರಿಗೆ ಕೊಂಡೊಯ್ದು ಮಾರಾಟ ಮಾಡಲು ಆಗುತ್ತಿಲ್ಲ. ಅಲ್ಲದೆ, ಸ್ಥಳೀಯವಾಗಿಯೂ ಮಾರಾಟವಾಗುತ್ತಿಲ್ಲ. ಹೀಗಾಗಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಕುಂಬಾರರು ಭಾರಿ ನಷ್ಟ ಅನುಭವಿಸುವಂತಾಗಿದೆ.

    ಮದುವೆ ಕಾರ್ಯಕ್ಕೆ ಅಗತ್ಯವಾದ ಕೇಲು, ದೀಪಗಳು, ಮಗೆ, ಮದುಮಕ್ಕಳಿಗೆ ಬಾಸಿಂಗವನ್ನೂ ಇವರು ತಯಾರಿಸಿಕೊಡುತ್ತಾರೆ. ಬಸವ ಜಯಂತಿ ಸಂದರ್ಭದಲ್ಲಿ ಹೆಚ್ಚು ಮದುವೆ ಕಾರ್ಯಗಳು ನಡೆಯುತ್ತಿದ್ದವು. ಆದರೀಗ ಅಂತಹ ಕಾರ್ಯಗಳಿಗೆ ಅವಕಾಶವಿಲ್ಲ. ಹೀಗಾಗಿ ಇವರು ತಯಾರಿಸಿದ ವಸ್ತುಗಳನ್ನು ಕೊಳ್ಳುವವರಿಲ್ಲ. ಅಷ್ಟೇ ಅಲ್ಲ, ಹೊರಗೆ ಹೋಗಿ ಮಾರಾಟ ಮಾಡಲೂ ಆಗುತ್ತಿಲ್ಲ. ಹೀಗಾಗಿ ಕುಂಬಾರರ ಅಳಲು ಕೇಳುವವರಿಲ್ಲದಂತಾಗಿದೆ.

    ನಿರಂತರ ಕುತ್ತು ತಂದ ಕರೊನಾ: ಕರೊನಾದಿಂದಾಗಿ ಕಳೆದ ವರ್ಷ ನಷ್ಟ ಅನುಭವಿಸಿದ ಕುಂಬಾರರು ಈ ವರ್ಷವೂ ಅದೇ ಪರಿಸ್ಥಿತಿ ಎದುರಿಸುವಂತಾಗಿದೆ. ಬೇಸಿಗೆ ಮಾತ್ರವಲ್ಲ, ವರ್ಷದುದ್ದಕ್ಕೂ ಪರದಾಡುವ ಸ್ಥಿತಿ ಎದುರಾಗಲಿದೆ. ‘ಪ್ರತಿ ವರ್ಷ ಯುಗಾದಿ ಮುಗಿಯುತ್ತಿದ್ದಂತೆ ಕೆರೆಗಳಿಂದ ಮಣ್ಣು ಸಂಗ್ರಹಿಸಿಕೊಳ್ಳುತ್ತೇವೆ. ಜೂನ್-ಜುಲೈನಿಂದಲೇ ಗಣೇಶ ಮೂರ್ತಿಗಳ ತಯಾರಿಕೆ ಕೆಲಸ ಆರಂಭಿಸುತ್ತೇವೆ. ಆದರೆ, ಈ ವರ್ಷ ಮಣ್ಣು ಸಂಗ್ರಹಿಸಲು ಸಾಧ್ಯವಾಗಿಲ್ಲ. ಮಳೆ ಬಿದ್ದ ನಂತರ ಟ್ರಾ್ಯಕ್ಟರ್​ಗಳು ಕೆರೆಗೆ ಇಳಿಯುವುದಿಲ್ಲ. ಆದ್ದರಿಂದ ಕರೊನಾ ಈ ವರ್ಷವೂ ನಮ್ಮ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಕುಂಬಾರರು ನೋವಿನಿಂದ ಹೇಳುತ್ತಾರೆ.

    ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಡಕೆ ಮಾರಾಟ ಆಗುತ್ತವೆ. ಹೀಗಾಗಿ ಹಲವರು ಹೆಚ್ಚಿನ ಪ್ರಮಾಣದಲ್ಲಿ ಮಡಕೆ ತಯಾರಿಸಿದ್ದಾರೆ. ಕಳೆದ ವರ್ಷದ ಮಡಕೆಗಳೂ ಹಾಗೆಯೇ ಉಳಿದುಕೊಂಡಿದೆ. ಈ ಬಾರಿ ಎಲ್ಲವೂ ಮಾರಾಟವಾಗಲಿವೆ ಎಂದುಕೊಂಡಿದ್ದೆವು. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಮಡಕೆ ಮಾರಾಟಕ್ಕೆ ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ. ಸಾಲ ಮಾಡಿಕೊಂಡು ಮಡಕೆ ಸಿದ್ಧಪಡಿಸಿದ ಕುಂಬಾರರ ಬದುಕು ಇದೀಗ ಬೀದಿಗೆ ಬರುವ ಸ್ಥಿತಿ ನಿರ್ವಣವಾಗಿದೆ.

    | ಗಣೇಶ ಸಾಲಿಮನಿ, ಕುಂಬಾರ ಸಮಾಜದ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts