More

    ಕುಕ್ಕೆಗೆ ಅಭಿವೃದ್ಧಿ ಸಮಿತಿಯೋ? ಪ್ರಾಧಿಕಾರವೋ?

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದು ಒಂದು ವರ್ಷ ಪೂರ್ಣಗೊಂಡಿದೆ. ದೇಗುಲದಲ್ಲಿ ನೂತನ ಆಡಳಿತ ಸಮಿತಿ ನೇಮಕಾತಿ ವಿಚಾರ ಆಗಾಗ್ಗೆ ಪ್ರಸ್ತಾಪವಾಗುತ್ತದಾದರೂ ಇದುವರೆಗೂ ಪ್ರಕ್ರಿಯೆ ಆರಂಭಗೊಂಡಿಲ್ಲ.

    ಈಗ ವ್ಯವಸ್ಥಾಪನಾ ಸಮಿತಿ ಬದಲಿಗೆ ಅಭಿವೃದ್ಧಿ ಸಮಿತಿ ಅಥವಾ ಪ್ರಾಧಿಕಾರ ರಚಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಪ್ರಸ್ತುತ ವ್ಯವಸ್ಥಾಪನಾ ಸಮಿತಿ ಆಯ್ಕೆ ಪ್ರಕ್ರಿಯೆಗಳು ಸ್ಥಗಿತಗೊಂಡಿದೆ. ಆದ್ದರಿಂದ ಕುಕ್ಕೆಗೆ ಮುಂದೆ ಅಭಿವೃದ್ಧಿ ಸಮಿತಿಯೋ ಅಥವಾ ಪ್ರಾಧಿಕಾರವೋ ಎಂಬುದು ಕೌತುಕದ ವಿಷಯ. ಸರ್ಕಾರದ ಅಂತಿಮ ತೀರ್ಮಾನ ಕೆಲವೇ ದಿನಗಳಲ್ಲಿ ಹೊರಬೀಳುವ ಸಾಧ್ಯತೆಗಳಿವೆ.

    ಅಭಿವೃದ್ದಿ ಸಮಿತಿ: ಇನ್ನೊಂದೆಡೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ರಾಧಿಕಾರ ಮಾಡಬೇಕೆಂಬ ಬಗ್ಗೆ ಇಲಾಖೆ, ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ಸದ್ಯ ಪ್ರಾಧಿಕಾರ ರಚಿಸದೆ ಅಭಿವೃದ್ಧಿ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ದೇವಳದ ಆಡಳಿತ ನೋಡಿಕೊಳ್ಳುವ ದೃಷ್ಟಿಯಿಂದ ಇಲಾಖೆ ವತಿಯಿಂದ ಸಾರ್ವಜನಿಕವಾಗಿ ಅರ್ಜಿ ಕರೆದು, ಬಳಿಕ ಅವುಗಳಲ್ಲಿ ಪರಿಶೀಲನೆ ನಡೆಸಿ, 8 ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯು ರಾಜ್ಯ ಸರ್ಕಾರದ ಧಾರ್ಮಿಕದತ್ತಿ ಇಲಾಖೆಯ ಮುಖಾಂತರ ರಚನೆಯಾಗುತ್ತದೆ. ಆ ಬಳಿಕ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳು ವ್ಯವಸ್ಥಾಪನಾ ಸಮಿತಿ ಸದಸ್ಯರ, ಸಮಿತಿಯ ನಿರ್ಣಯದಂತೆ ನಡೆಯುತ್ತವೆ.

    ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತದೆ ಎಂದಾದಲ್ಲಿ ಅಲ್ಲೀ ತನಕ ಅಭಿವೃದ್ಧಿ ಸಮಿತಿ ರಚಿಸುತ್ತದೆ. ಇದು ಐವರು ಸದಸ್ಯರನ್ನು ಒಳಗೊಳ್ಳಲಿದ್ದು, ಪ್ರಾಧಿಕಾರ ರಚನೆ ಆಗುವವರೆಗೆ ಕ್ಷೇತ್ರದ ಆಡಳಿತ, ಅಭಿವೃದ್ಧಿ ಕೆಲಸಗಳ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎನ್ನಲಾಗಿದೆ. ಕುಕ್ಕೆ ದೇಗುಲದ ಅಭಿವೃದ್ಧಿ ಸಮಿತಿಗೆ ನೇಮಕ ಮಾಡುವ ಬಗ್ಗೆ ಐವರು ಸದಸ್ಯರ ಪಟ್ಟಿ ಈಗಾಗಲೇ ಸಿದ್ಧಗೊಂಡಿದ್ದು, ಪೊಲೀಸ್ ಇಲಾಖೆಯಿಂದ ಪರಿಶೀಲನೆ ಹಂತದಲ್ಲಿದೆ ಎಂದುಮೂಲಗಳಿಂದ ತಿಳಿದುಬಂದಿದೆ.

    ಕುಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಬಗ್ಗೆ ಪ್ರಸ್ತಾಪನೆ ಇದೆ. ಆದರೆ ಅಂತಿಮ ತೀರ್ಮಾನ ಆಗಿಲ್ಲ. ಕ್ಷೇತ್ರಕ್ಕೆ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ ಅಥವಾ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪ ಇಲಾಖೆಯ ಮುಂದಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ವಿಮರ್ಶೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಒಂದು ವಾರದ ಒಳಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
    -ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts