More

    ಸಾಹಿತ್ಯ ಜಾತ್ರೆಯಲ್ಲಿ ನೀರಾವರಿ ಕೂಗು; ಬೆಣಕಲ್ಲಿನಲ್ಲಿ ಕುಕನೂರು ತಾಲೂಕು ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಅದ್ದೂರಿ

    ಕುಕನೂರು: ತಾಲೂಕಿನ ಬೆಣಕಲ್ಲ ಗ್ರಾಮದಲ್ಲಿ ನೂತನ ತಾಲೂಕು ಮಟ್ಟದ ಚೊಚ್ಚಲ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನೃತತುಂಗ ಪ್ರೌಢ ಶಾಲೆಯ ಶ್ರೀ ಜ.ಅನ್ನದಾನೀಶ್ವರ ಮಹಾಶಿವಯೋಗಿಗಳ ಸಂಸ್ಥಾನಮಠ ಮುಂಡರಗಿ ಮುಖ್ಯ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದುದ್ದಕ್ಕೂ ನೀರಾವರಿ ಕೂಗು ಪ್ರತಿಧ್ವನಿಸಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹಾಲಪ್ಪ ಆಚಾರ್, ಬಯಲುಸೀಮೆ ಪ್ರದೇಶವಾದ ಯಲಬುರ್ಗಾ, ಕುಕನೂರು ತಾಲೂಕುಗಳು ಬಡತನದ ಹಾಹಾಕಾರದಿಂದ ಬಳಲುತ್ತಿವೆ. ಈ ಪ್ರದೇಶಕ್ಕೆ ನೀರಾವರಿ ಅಗತ್ಯ ಇದ್ದು, ಕೃಷಿ ಕ್ಷೇತ್ರ ಶ್ರೀಮಂತವಾಗಬೇಕಿದೆ. ಈ ಹಿಂದಿನ ಜನಪ್ರತಿನಿಧಿಗಳು, ವಿಚಾರವಂತರು ಯಾರೂ ಪ್ರಯತ್ನ ಮಾಡಿಲ್ಲ. ಸಾಹಿತ್ಯದ ಜತೆಗೆ ಸಾಹಿತಿಗಳು ನೀರಾವರಿ ಬಗ್ಗೆ ಧ್ವನಿ ಎತ್ತಬೇಕು. ಕನ್ನಡಕ್ಕೆ ಗಟ್ಟಿತನದ ಅವಶ್ಯಕತೆ ಇದೆ. ಅನ್ಯಭಾಷೆ ಪ್ರಭಾವದಿಂದ ದೂರಾಗಬೇಕಿದೆ. ಬರವಣಿಗೆ ಮಾತನಾಡಿದರೆ ಬದುಕು ರೂಪುಗೊಳ್ಳುತ್ತದೆ ಎಂದರು.

    ಮುಂಡರಗಿಯ ಶ್ರೀ ಅನ್ನದಾನೀಶ್ವರ ಮಠದ ಡಾ. ನಾಡೋಜ ಶ್ರೀ ಅನ್ನದಾನೀಶ್ವರ ಶಿವಯೋಗಿಗಳು ಮಾತನಾಡಿ, ಸಾರ್ಥಕ, ಸ್ವಾರಸ್ಯ, ಸದಾಭಿರುಚಿಯ ಪದಗಳ ಸಾರವೇ ಸಾಹಿತ್ಯ. ಸಾಹಿತ್ಯ, ಸ್ವಾರಸ್ಯ, ಕಲೆ, ವಿದ್ಯೆ, ದಾನ, ಸಾಮಾಜಿಕ ಕೊಡುಗೆ ಇಲ್ಲದವನು ಪಶುಕ್ಕೆ ಸಮನಾಧವನು. ಮೌಲಿಕ ತತ್ವವುಳ್ಳ ಜ್ಞಾನಾತ್ಮಕ ಸಾಹಿತ್ಯ ಹಾಗೂ ಕಲೆ, ಸಾಂಸ್ಕೃತೀಕತೆ ಅಳವಡಿಸಿಕೊಂಡ ಭಾವನಾತ್ಮಕ ಸಾಹಿತ್ಯ, ಸಾಹಿತ್ಯ ರಂಗದ ಮಜಲುಗಳು. ಈ ಭಾಗಕ್ಕೆ ನೀರಾವರಿ ಅಗತ್ಯ ಇದ್ದು, ಅದರ ಅನುಷ್ಠಾನಕ್ಕೆ ಹೃದಯಗಳು ಪುಟಿದೇಳಬೇಕು. ಹಸಿರು, ಜ್ಞಾನ, ಸಾಹಿತ್ಯ ಪಸರಿಸಲಿ ಎಂದರು.

    ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕಾಧ್ಯಕ್ಷ ಲಕ್ಷ್ಮಣ ಹಿರೇಮನಿ, ಸಾಹಿತಿ ಕೆ.ಆರ್ ಕುಲಕರ್ಣಿ ಮಾತನಾಡಿದರು. ಬೆಣಕಲ್ಲು ಸ್ಮರಣ ಸಂಚಿಕೆಯನ್ನು ಸಿ.ಎ ಸೋಮಶೇಖರಯ್ಯ ಹಿರೇಮಠ, ಸಮ್ಮೇಳನಾಧ್ಯಕ್ಷರ ನುಡಿ ಹೊತ್ತಿಗೆಯನ್ನು ವೀರಣ್ಣ ಹಳ್ಳಿಕೇರಿ, ಡಾ. ಮಹಾದೇವ ದೇವರ ಬದುಕಿಗೊಂದು ಕಥೆ ಪುಸ್ತಕವನ್ನು ಸಾಹಿತಿ ಡಾ.ಕೆ.ಬಿ ಬ್ಯಾಳಿ ಬಿಡುಗಡೆಗೊಳಿಸದರು. ತಾಪಂ ಅಧ್ಯಕ್ಷ ಜಗನ್ನಾಥಗೌಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.

    ಮಂಗಳೂರಿನ ಅರಳೆಲೆ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ದೇವರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯರಾದ ಗಂಗಮ್ಮ ಗುಳಗಣ್ಣವರ್, ಹನುಮಂತಗೌಡ ಚಂಡೂರು, ತಾಪಂ ಸದಸ್ಯ ಗವಿಸಿದ್ದಪ್ಪ ಜಂತ್ಲಿ, ಗ್ರಾಪಂ ಅಧ್ಯಕ್ಷೆ ಕಸ್ತೂರೆವ್ವ ನಿಂಗಪ್ಪ ಹಂಚಿನಾಳ, ಪ್ರಮುಖರಾದ ಈಶಯ್ಯ ಆರ್ಯರ, ಅಂದಪ್ಪ ಜವಳಿ, ಕಳಕಪ್ಪ ಕಂಬಳಿ, ಬಸವರಾಜ ಬಿನ್ನಾಳ, ಶಿವಕುಮಾರ ನಾಗಲಾಪುರಮಠ, ಸಂತೋಷ ಬೆಣಕಲ್ಲ, ಕಸಾಪ ಪದಾಧಿಕಾರಿಗಳು ಹಾಗೂ ಇತರರಿದ್ದರು.

    ಆಂಗ್ಲ ಭಾಷೆಯ ಕುರುಡು ವ್ಯಾಮೋಹ ತೊರೆಯಿರಿ: ಆಂಗ್ಲ ಭಾಷೆ ಕುರುಡು ವ್ಯಾಮೋಹ ತೊರೆದು ಕನ್ನಡಕ್ಕೆ ಅಗ್ರಸ್ಥಾನ ಎಂಬುದು ಅರಿಯಬೇಕು. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಸದೃಢವಾಗಲು ಕನ್ನಡ ಮಾಧ್ಯಮದಲ್ಲಿಯೇ ಅಧ್ಯಯನ ನಡೆಯಬೇಕು. ಕುಕನೂರಿನ ವಿದ್ಯಾನಂದ ಗುರುಕುಲ ಸ್ಥಾಪಕರು ಬೆಣಕಲ್ಲ ಗ್ರಾಮದ ದಿ. ರಾ.ಬಿ ದೇಸಾಯಿಯಾದ್ದರಿಂದ ಕುಕನೂರಿನ ವಿದ್ಯಾನಂದ ಗುರುಕುಲಕ್ಕೆ ಬೆಣಕಲ್ಲ ವಿದ್ಯಾನಂದ ಗುರುಕುಲವೆಂದು ಹೆಸರಿಡಬೇಕು. ಕೃಷಿ ಕ್ಷೇತ್ರ ಗಟ್ಟಿಗೊಳಿಸಿದಾಗ ಇನ್ನುಳಿದ ಕ್ಷೇತ್ರಗಳ ಬಲವರ್ಧನೆ ಸಾಧ್ಯ ಇದ್ದು, ನೀರಾವರಿ ಜಾರಿಗೆ ಪ್ರತಿಯೊಬ್ಬರೂ ಮುನ್ನುಗ್ಗಬೇಕು ಎಂದರು. ಸಾಹಿತ್ಯ ಸಮ್ಮೇಳನ ಸವಿನೆನಪಿಗಾಗಿ ಬೆಣಕಲ್ಲಿನಲ್ಲಿ ಸಾಹಿತ್ಯ ಭವನ ನಿರ್ಮಾಣ, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ, ಮಕ್ಕಳಿಗೆ ಶಿಕ್ಷಣ ಪೂರಕ ತರಬೇತಿ ಅವಶ್ಯಕತೆ ಇದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸಾಹಿತಿ, ಉಪನ್ಯಾಸಕ ಡಾ. ಫಕೀರಪ್ಪ ವಜ್ರಬಂಡಿ ಹೇಳಿದರು.

    ಸಾಹಿತ್ಯ ಜಾತ್ರೆಯಲ್ಲಿ ನೀರಾವರಿ ಕೂಗು; ಬೆಣಕಲ್ಲಿನಲ್ಲಿ ಕುಕನೂರು ತಾಲೂಕು ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಅದ್ದೂರಿ
    ಸಾಹಿತ್ಯ ಜಾತ್ರೆಯಲ್ಲಿ ನೀರಾವರಿ ಕೂಗು; ಬೆಣಕಲ್ಲಿನಲ್ಲಿ ಕುಕನೂರು ತಾಲೂಕು ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಅದ್ದೂರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts