More

    ಶಾಲೆ ಹೆಸರಿಗೆ ಕ್ರೀಡಾಂಗಣ ನೋಂದಣಿ ಮಾಡಿಸಿ

    ಕೂಡ್ಲಿಗಿ: ಶಾಲೆಯ ಅಧೀನದಲ್ಲಿರುವ ಆಟದ ಮೈದಾನವನ್ನು ಶಾಲೆ ಹೆಸರಿಗೆ ನೋಂದಣಿ ಮಾಡಿಸುವಂತೆ ಒತ್ತಾಯಿಸಿ ಮೈದಾನ ಉಳಿಸಿ ಹೋರಾಟ ಸಮಿತಿ ಹಾಗೂ ಗಾಂಧಿ ಸ್ಮಾರಕ ಸಮಿತಿ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

    ಮೈದಾನ ಉಳಿಸಿ ಹೋರಾಟ ಸಮಿತಿ ಸದಸ್ಯ ಎ.ಎಂ. ರಾಘವೇಂದ್ರ ಮಾತನಾಡಿ, ಮಹಾದೇವ ಮೈಲಾರ ಕ್ರೀಡಾಂಗಣಕ್ಕೆ ಸೇರಿದ ಒಂದು ಭಾಗವು 75 ವರ್ಷಗಳಿಂದಲೂ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ವಿಭಾಗದ ಅಧೀನದಲ್ಲಿದೆ. ಆದರೆ ಖಾಸಗಿ ವ್ಯಕ್ತಿಯೊಬ್ಬರು ಆ ಜಾಗ ತಮಗೆ ಸೇರಿದೆಂದು ನಿವೇಶನಗಳನ್ನಾಗಿ ಮಾಡಿ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ 1945ರಿಂದಲೂ ಮೈದಾನ ಶಾಲಾ ಸ್ವಾಧೀನದಲ್ಲಿದ್ದು, ಅದನ್ನು ಜಮೀನು ಮಾಲೀಕರು ಶಾಲೆಗೆಂದು ದಾನ ಮಾಡಿದ್ದಾರೆ. ಆದರೆ ಆ ಜಾಗವನ್ನು ಅವರು ಶಾಲೆ ಹೆಸರಿಗೆ ಖಾತೆ ಮಾಡಿಸಿಕೊಟ್ಟಿಲ್ಲ. ಆದರೂ ಅದು ಶಾಲೆಯ ಅಧೀನದಲ್ಲಿದ್ದು, ಆ ಜಾಗದಲ್ಲಿ ಅನೇಕ ವರ್ಷಗಳ ಕಾಲ ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಲು ಬಾಡಿಗೆ ಆಧಾರದಲ್ಲಿ ಬಳಕೆ ಮಾಡಿಕೊಳ್ಳುತ್ತಿತ್ತು. 1 ಲಕ್ಷ ರೂ. ಬಾಡಿಗೆಯನ್ನು ಶಾಲಾಭಿವೃದ್ಧಿ ಸಮಿತಿ ಖಾತೆಗೂ ಜಮೆ ಮಾಡಿದೆ ಎಂದು ತಿಳಿಸಿದರು.

    2020-21ನೇ ಸಾಲಿನಲ್ಲಿ ಶಾಸಕರು ತಮ್ಮ ಅನುದಾನದಲ್ಲಿ ಆಟದ ಮೈದಾನದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಸಿದ್ದಾರೆ. ಈ ಹಿಂದೆ ನಿವೇಶನವಾಗಿ ಪರಿವರ್ತನೆ ಮಾಡಿದ ಜಾಗವನ್ನು ಪಪಂ ಸಾಮಾನ್ಯ ಸಭೆಯಲ್ಲಿ ತಿರಸ್ಕಾರ ಮಾಡಲಾಗಿದೆ. ಇದೇ ವೇಳೆ ಶಾಲಾ ಮೈದಾನವನ್ನು ಉಳಿಸುವಂತೆ ಅನೇಕ ಬಾರಿ ಹೋರಾಟ ಸಹ ಮಾಡಲಾಗಿದೆ. ಇದಕ್ಕೆ ಈ ಹಿಂದಿನ ಶಾಸಕ ಶಿರಾಜ್ ಶೇಕ್ ಬೆಂಬಲ ನೀಡಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಎನ್‌ಎ ರದ್ದುಪಡಿಸುವಂತೆ ಒತ್ತಾಯಿಸಿದ್ದರೆಂದು ತಿಳಿಸಿದ್ದರು.

    ಇತ್ತೀಚಿಗೆ ಕಂದಾಯ ಇಲಾಖೆ, ಅಗತ್ಯ ದಾಖಲೆಗಳು ಇಲ್ಲದ ಶಾಲೆಯ ಸ್ವಾಧೀನದಲ್ಲಿರುವ ಮೈದಾನವನ್ನು ಶಾಲೆಯ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧೀನದಲ್ಲಿರುವ ಆಟದ ಮೈದಾನವನ್ನು ಶಾಲೆಯ ಹೆಸರಿಗೆ ನೋಂದಣಿ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವು. ಅಲ್ಲದೆ ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಗಮನಕ್ಕೆ ತಂದಿದ್ದೇವು. ಅವರು ಈ ಕುರಿತು ವರದಿ ನೀಡುವಂತೆ ತಹಸೀಲ್ದಾರ್ ಸೂಚನೆ ನೀಡಿದ್ದರು. ಆದರೆ ಮೂರು ತಿಂಗಳಾದರೂ ತಹಸೀಲ್ದಾರ್ ವರದಿ ನೀಡದೆ ವಿಳಂಬ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಹಾಗೂ ಆಟದ ಮೈದಾನವನ್ನು ಶಾಲೆಯ ಹೆಸರಿಗೆ ನೋಂದಣಿ ಮಾಡುವವರೆಗೂ ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ಎಚ್ಚರಿಸಿದರು.

    ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ. ನಾಗರಾಜ, ವಾಲ್ಮೀಕಿ ಹಮಾಲರ ಸಂಘದ ಅಧ್ಯಕ್ಷ ಡಿ. ಹೂಲೆಪ್ಪ, ಕಾರ್ಯದರ್ಶಿ ಎಸ್.ಕೆ. ಹನುಮೇಶ್, ಸದಸ್ಯರು ಮತ್ತು ಸರ್ಕಾರಿ, ಅನುದಾನಿತ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಂದೀಪ ಧರಣಿಯಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts