More

    ಬಸವಣ್ಣ ಸಮಾನತೆ ಸಮಾಜ ನಿರ್ಮಾಣಕ್ಕೆ ಪ್ರೇರಣೆ

    ಕೂಡಲಸಂಗಮ: ಮಹಿಳೆಯರ ಅಂತರಂಗದ ಶ್ರೇಷ್ಠತೆ ಗುರುತಿಸಿ, ಸಮಾನತೆ ಸಮಾಜ ನಿರ್ಮಾಣಕ್ಕೆ ಮೊಟ್ಟ ಮೊದಲು ಮನ್ನಣೆ ನೀಡಿದವರು ಬಸವಣ್ಣನವರು. ಅವರ ಧೋರಣೆಗಳು ಪಾಲನೆಯಾದರೆ ಮಹಿಳೆ ವಿಶ್ವಮಾನ್ಯವಾಗಿ ಗುರುತಿಸಿಕೊಳ್ಳಲು, ಬೆಳಗಲು ಸಾಧ್ಯ ಎಂದು ಕಲಬುರಗಿಯ ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ಡಾ.ಇಂದುಮತಿ ದಿವಾಕರ ಅಭಿಪ್ರಾಯಪಟ್ಟರು.

    ಇಲ್ಲಿಯ ಬಸವ ಧರ್ಮ ಪೀಠದ ವತಿಯಿಂದ ಏರ್ಪಡಿಸಿರುವ ಶರಣ ಮೇಳದಲ್ಲಿ ಭಾನುವಾರ ಬಸವಾದಿ ಶರಣರ ಮಹಿಳಾ ಕ್ರಾಂತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರೀತಿ ಮತ್ತು ತ್ಯಾಗದ ಪ್ರತಿರೂಪ ಮಹಿಳೆ. ಕುಟುಂಬದ ಮೂಲಕ ಸದೃಢ ಸಮಾಜಕ್ಕಾಗಿ ಶ್ರಮಿಸುವ ಮಹಿಳೆ ಪಾತ್ರವನ್ನು ಗುರುತಿಸಿದ್ದು ಬಸವಣ್ಣನವರು. ಪುರುಷರಲ್ಲೂ ತಾಯಿ ಸ್ವರೂಪದ ಧಾರ್ಮಿಕ ಮೌಲ್ಯವನ್ನು ಬಿತ್ತಿದ ಬಸವಣ್ಣನ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು.

    ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ ಮಾತನಾಡಿ, ಮಹಿಳೆಯರು ಛಲ, ಧೈರ್ಯದಿಂದ ಬದುಕಲು 12ನೇ ಶತಮಾನದಲ್ಲಿ ಬಸವಣ್ಣ ಸ್ವಾತಂತ್ರ್ಯ ನೀಡಿದರು. 21ನೇ ಶತಮಾನದಲ್ಲಿ ಅನುಷ್ಠಾನಕ್ಕೆ ತಂದ ಶ್ರೇಯಸ್ಸು ಮಾತೆ ಮಹಾದೇವಿಯವರಿಗೆ ಸಲ್ಲುವುದು ಎಂದರು.

    ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿದರು. ಮಾತೆ ಜ್ಞಾನೇಶ್ವರಿ, ಬೀದರನ ಸಿದ್ದು ಉಳ್ಳೆ, ಶಿವಲಿಂಗಯ್ಯ ಕನ್ನಾಡೆ, ವೈದ್ಯಾಧಿಕಾರಿ ದೀಪಮಾಲಾ ಪಾಟೀಲ, ಬಳ್ಳಾರಿ ರಾಷ್ಟ್ರೀಯ ಬಸವದಳದ ಶಾರದಾತಾಯಿ, ಭದ್ರಾವತಿಯ ರತ್ನಮ್ಮ ಮಹಾಲಿಂಗಪ್ಪ, ಲೀಲಾವತಿ ನಾಡಗೌಡರ, ಡಾ.ಅನ್ನಪೂರ್ಣ ಹಿರಲಿಂಗಣ್ಣನವರ, ಗಂಗಾಂಬಿಕೆ ಬಸವರಾಜ, ಎಚ್.ವಿ. ಜಯಾ, ಶರಣರತ್ನ ಜಯಶ್ರೀ ಉಪಸ್ಥಿತರಿದ್ದರು. ಲಿಂಗಾಯತ ಧರ್ಮ ಮಹಾಸಭಾದ ಉಪಾಧ್ಯಕ್ಷ ಆನಂದ ಗುಡಸ ಸ್ವಾಗತಿಸಿದದರು. ವೈ.ಬಿ. ನಂದಿನಿ ನಿರೂಪಿಸಿದರು. ಕಮಲಕ್ಕ ಚೌದರಿ ವಂದಿಸಿದರು.

    ಶರಣ ಮೇಳದಲ್ಲಿ ಇಂದು
    ಕೂಡಲಸಂಗಮದಲ್ಲಿ ನಡೆದ 33ನೇ ಶರಣ ಮೇಳದ 3ನೇ ದಿನದ ಶರಣ ಮೇಳವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಹರಿದ್ವಾರ ಪತಂಜಲಿ ಯೋಗ ಗುರು ಪೀಠದ ಸಂಸ್ಥಾಪಕ ಅಧ್ಯಕ್ಷ ರಾಮದೇವ ಬಾಬಾ, ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಬಸವನ ಬಾಗೇವಾಡಿ ಯರನಾಳ ವಿರಕ್ತಮಠದ ಸಂಗನ ಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಸವ ಧ್ವಜಾರೋಹಣವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೆರವೇರಿಸುವರು. ಶ್ರೀಧರ ಗೌಡರ ಸಂಪಾದನೆಯ ವಚನಾಮೃತ ಗ್ರಂಥ ಬಿಡುಗಡೆಯನ್ನು ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಮಾಡುವರು. ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಲಬುರಗಿ ಶಾಸಕ ಬಸವರಾಜ ಮತ್ತಿಮೂಡ, ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ, ಮಾಜಿ ಸಚಿವ ಎಂ.ಶಿವಣ್ಣ ಇತರರು ಭಾಗವಹಿಸುವರು. ಪ್ರಶಸ್ತಿ ಪ್ರದಾನ ಮತ್ತು ಸಂಜೆ 6 ಗಂಟೆಗೆ ಬಸವ ಧರ್ಮದ ಮಹಾಜಗದ್ಗುರು ಪೀಠದ 28ನೇ ಪೀಠಾರೋಹಣ ಸಮಾರಂಭ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts