More

    ನಿತ್ಯ ಐದು ವಚನ ಪಾರಾಯಣ ಮಾಡಿ

    ಕೂಡಲಸಂಗಮ: ಕೂಡಲಸಂಗಮ ಬಸವ ಧರ್ಮಪೀಠದ ಶರಣ ಲೋಕದಲ್ಲಿ 34ನೇ ಶರಣ ಮೇಳದ ಅಖಂಡ ವಚನ ಪಠಣ ಸಪ್ತಾಹ ಸಮಾರಂಭವನ್ನು ಶನಿವಾರ ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿದರು.


    ವಚನ ಹೇಳುವ ಮೂಲಕ ವಚನ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ ಸುಪ್ರಭಾತದಲ್ಲಿ ಇಷ್ಟಲಿಂಗಾರ್ಚನೆ ನೆರವೇರಿಸಿದ ಬಳಿಕ ಕನಿಷ್ಠ ಐದು ವಚನಗಳನ್ನಾದರೂ ಪಾರಾಯಣ ಮಾಡಬೇಕು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶಮಾಡಬೇಕೆಂದು ಪಣ ತೊಟ್ಟಾಗ 12ನೇ ಶತಮಾನದಲ್ಲಿ ಶರಣರು ಖಡ್ಗ ಹಿಡಿದು ಹೋರಾಟ ಮಾಡಿ ಪ್ರಾಣತೆತ್ತು ವಚನ ಸಾಹಿತ್ಯವನ್ನು ಉಳಿಸಿಕೊಟ್ಟಿದ್ದಾರೆ. ಅವರು ಪ್ರಾಣಕೊಟ್ಟು ಉಳಿಸಿದ ಸಾಹಿತ್ಯವನ್ನು ನಾವು ಅಭಿಮಾನವಿಟ್ಟು ಕಾಪಾಡಿಕೊಳ್ಳಬೇಕು. ಅಸಂಖ್ಯಾತ ಶರಣ-ಶರಣೆಯರ ಕೊಡುಗೆಯಾದ ವಚನ ಸಾಹಿತ್ಯ ವಿಶ್ವದ ಅನುಭಾವ ಸಾಹಿತ್ಯಕ್ಕೆ ಮಹಾನ್ ಕೊಡುಗೆ, ನಮಗೆಲ್ಲ ದಾರಿದೀಪವಾಗಿದೆ ಎಂದು ಬಣ್ಣಿಸಿದರು.

    ಈ ವಚನ ಪಠಣ ಜ. 14ರ ರಾತ್ರಿ 10 ಗಂಟೆಗೆ ಮುಕ್ತಾಯಗೊಳ್ಳುವುದು. ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿ ರಾತ್ರಿ 10 ಗಂಟೆವರೆಗೆ ವಚನ ಪಠಣ ನಡೆಯುವುದು. ವಚನ ಪಠಣದ ಮಧ್ಯ ಓಂ ಶ್ರೀಗುರು ಬಸವ ಲಿಂಗಾಯನಮಃ ಮಂತ್ರ ಪಠಣ, ವಿಶೇಷ ಪೂಜೆ ಆಗಾಗ ನಡೆಯುತ್ತದೆ. ವಚನ ಪಠಣದಲ್ಲಿ ಭಾಗವಹಿಸುವವರು ಸ್ನಾನ ಮಾಡಿ ಮಡಿ ವಸಗಳನ್ನುಟ್ಟು ಅಲ್ಲಿ ಒದಗಿಸುವ ವಿಶೇಷ ಪವಿತ್ರ ಮೇಲು ವಸವನ್ನು ಹೊದ್ದು ಪಠಣ ಮಾಡಬೇಕು ಎಂದರು.

    ಕೂಡಲಸಂಗಮ ಬಸವ ಧರ್ಮಪೀಠದ ಉಪಾಧ್ಯಕ್ಷ ಮಹಾದೇಶ್ವರ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಕನ್ನಡ ಸಾಹಿತ್ಯ ಹಾಗೂ ವಿಶ್ವಮಟ್ಟದ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಜಗ ಬದುಕಲಿ ಜನ ಬದುಕಲಿ ಎಂದು ಶರಣರು ಹೇಳುವ ಮೂಲಕ ಜಗತ್ತಿಗೆ ವಚನ ಸಾಹಿತ್ಯವನ್ನು ಅಮೂಲ್ಯ ಆಸ್ತಿಯಾಗಿ ಕೊಟ್ಟರು. ಇಂತಹ ವಚನ ಸಾಹಿತ್ಯವನ್ನು ಜಗತ್ತಿನ ಎಲ್ಲ ಭಾಷೆಗಳಲ್ಲಿ ಬಿತ್ತರಿಸುವ, ಪ್ರಸಾರ ಮಾಡುವ ಕಾರ್ಯವನ್ನು ಕೂಡಲಸಂಗಮ ಬಸವ ಧರ್ಮ ಪೀಠ ಮಾಡುತ್ತಿದೆ ಎಂದು ಹೇಳಿದರು.

    ವಚನ ಪಠಣಕ್ಕೆ ನೆರವಾಗುವಂತೆ ವಚನ ಸಂಗಮ ಎಂಬ ಪುಸ್ತಕ ಕನ್ನಡ, ಮರಾಠಿ, ತೆಲುಗು, ತಮಿಳು ಭಾಷೆಯಲ್ಲಿ ಇದೆ. ಪ್ರತಿಯೊಬ್ಬ ಶರಣರು ಒಂದು ಗಂಟೆ ವಚನ ಪಠಣ ಮಾಡಬೇಕು ಎಂದರು.

    ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಮಾತೆ ಜ್ಞಾನೇಶ್ವರಿ, ಉಳವಿಯ ಅಕ್ಕನಾಗಲಾಂಬಿಕಾ ಪೀಠದ ಪೀಠಾಧ್ಯಕ್ಷೆ ಮಾತೆ ದಾನೇಶ್ವರಿ, ಬೆಂಗಳೂರು ಬಸವ ಮಂಟಪದ ಮಾತೆ ಬಸವರತ್ನಾ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts