More

    ಮತ್ತೆ ನಷ್ಟದ ಹಾದಿಯಲ್ಲಿ ಮಂಗಳೂರು ಏರ್‌ಪೋರ್ಟ್ ವೋಲ್ವೊ ಬಸ್

    | ಪ್ರಕಾಶ್ ಮಂಜೇಶ್ವರ ಮಂಗಳೂರು
    ರಾಜ್ಯದ ಎರಡನೇ ಹೆಚ್ಚು ಪ್ರಯಾಣಿಕರ ದಟ್ಟಣೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಮಣಿಪಾಲದಿಂದ ರಾಜ್ಯೋತ್ಸವ ದಿನ ಆರಂಭಿಸಲಾದ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್ ಸಂಚಾರ ನಷ್ಟದ ಹಾದಿಯಲ್ಲಿದೆ.

    ಪ್ರಸ್ತುತ ವೋಲ್ವೊ ಬಸ್ ನಿರ್ವಹಿಸಲು ಕಿ.ಮೀ.ಗೆ 65 ರೂಪಾಯಿ ಖರ್ಚು ತಗಲುತ್ತದೆ. ಆದರೆ ಪ್ರಸಕ್ತ ವೋಲ್ವೊ ಬಸ್‌ನಲ್ಲಿ ಮಂಗಳೂರು – ವಿಮಾನ ನಿಲ್ದಾಣ ನಡುವೆ ಕಿ.ಮೀ.ಗೆ 7 ರೂ. ಮತ್ತು ಮಣಿಪಾಲ – ವಿಮಾನ ನಿಲ್ದಾಣ ನಡುವೆ 13 ರೂ. ಮಾತ್ರ ಸಂಗ್ರಹವಾಗುತ್ತಿದೆ. ಮಣಿಪಾಲ ಮತ್ತು ಮಂಗಳೂರಿನಿಂದ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಬಸ್‌ಗಳು ಬಹುತೇಕ ಖಾಲಿ ಓಡುತ್ತಿವೆ.

    ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ 2014ರಲ್ಲಿ ಸಾಮಾನ್ಯ ಸಾರಿಗೆ ಮತ್ತು ಎರಡು ವರ್ಷ ಬಳಿಕ ವೋಲ್ವೊ ಬಸ್ ಆರಂಭಿಸಿತ್ತು. ಎರಡೂ ಬಾರಿ ಬಸ್ ಸೇವೆಯು ಪ್ರಯಾಣಿಕರ ಕೊರತೆಯಿಂದ ರದ್ದುಗೊಂಡಿತ್ತು. ಇದೇ ಪರಿಸ್ಥಿತಿ ಪುನರಾವರ್ತನೆಯಾಗುವ ಸಾಧ್ಯತೆ ಕಂಡುಬಂದಿದೆ.

    ಹಳೇ ಬೇಡಿಕೆ: ಮಂಗಳೂರು ಮತ್ತು ಮಣಿಪಾಲದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಆರಂಭಿಸಬೇಕು ಎನ್ನುವುದು ಹಳೇ ಬೇಡಿಕೆ. ಆದರೆ ವಿವಿಧ ಕಾರಣಗಳಿಂದ ಈ ಮಾರ್ಗದಲ್ಲಿ ಬಸ್ ವ್ಯವಸ್ಥೆ ವಿಫಲವಾಗುತ್ತಿದೆ. ವಿಮಾನದಲ್ಲಿ ಸಂಚರಿಸುವವರು ಸಾಮಾನ್ಯವಾಗಿ ಸ್ವಂತ ವಾಹನ ಅಥವಾ ಟ್ಯಾಕ್ಸಿಗಳ ಮೂಲಕವೇ ಪ್ರಯಾಣಿಸಲು ಬಯಸುತ್ತಾರೆ. ಬೆಂಗಳೂರು ನಗರಕ್ಕಿಂತ ಭಿನ್ನವಾದ ಪರಿಸ್ಥಿತಿ ಮಂಗಳೂರಿನಲ್ಲಿ ಇದೆ ಎನ್ನುವುದು ಕೆಲ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಭಿಪ್ರಾಯ.

    ಸಾಮಾನ್ಯ ಬಸ್ ಓಡಿಸಬಹುದಲ್ಲವೇ?: ಪ್ರಯಾಣಿಕರ ಕೊರತೆಯಿಂದಾಗಿ ವೋಲ್ವೊ ಬಸ್ ನಿರ್ವಹಣೆ ಕಷ್ಟ. ಬೇಡಿಕೆ ಇರುವುದು ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರ ಇರಬೇಕು ಎನ್ನುವುದೇ ಹೊರತು ವೋಲ್ವೊ ಬಸ್ಸೇ ಬೇಕೆಂದಲ್ಲ. ಸಾಮಾನ್ಯ ಬಸ್‌ಗಳನ್ನೂ ಓಡಿಸಬಹುದು. ನರ್ಮ್ ಮಾದರಿ ಸಾಮಾನ್ಯ (ಹವಾನಿಯಂತ್ರಿತ ಅಲ್ಲದ) ಮಿನಿ ಬಸ್‌ಗಳನ್ನು ಓಡಿಸುವ ಕುರಿತೂ ಕೆಎಸ್‌ಆರ್‌ಟಿಸಿ ಚಿಂತಿಸಬಹುದು. ಇದರಿಂದ ವಿಮಾನ ನಿಲ್ದಾಣಕ್ಕೆ ಬಸ್ ಸಂಪರ್ಕ ಇರಬೇಕೆಂಬ ಬೇಡಿಕೆಯನ್ನೂ ಪೂರೈಸಿದಂತಾಗುತ್ತದೆ. ನಷ್ಟವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯವಿದೆ. ಇಂದು ವಿಮಾನ ಪ್ರಯಾಣ ಸಿರಿವಂತರಿಗೆ ಮಾತ್ರ ಸೀಮಿತವಾಗಿಲ್ಲ. ಅನಿವಾರ್ಯ ಕಾರಣಗಳಿಂದ ಮಧ್ಯಮ ವರ್ಗದ ಜನರು ಕೂಡ ವಿಮಾನದಲ್ಲಿ ಸಂಚರಿಸುತ್ತಾರೆ. ಅಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ಸಾಮಾನ್ಯ ಸಾರಿಗೆಯನ್ನು ಇತರ ನಿಲುಗಡೆ ಸ್ಥಳಗಳ ಪ್ರಯಾಣಿಕರು ಕೂಡ ಬಳಸಲು ಅವಕಾಶ ಇರುವುದರಿಂದ ಸಾಮಾನ್ಯ ಬಸ್ ಓಡಿಸಿದರೆ ಕೆಎಸ್‌ಆರ್‌ಟಿಸಿಗೆ ನಷ್ಟಕ್ಕೊಳಗಾಗುವ ಭೀತಿ ಇಲ್ಲ ಎಂಬುದು ಪ್ರಯಾಣಿಕರ ಮಾತು.

    ಪ್ರಸ್ತುತ ವೋಲ್ವೊ ಬಸ್‌ನಲ್ಲಿ ಮಂಗಳೂರು- ವಿಮಾನ ನಿಲ್ದಾಣ ನಡುವೆ 100 ರೂ. ಹಾಗೂ ಮಣಿಪಾಲ- ವಿಮಾನ ನಿಲ್ದಾಣ ನಡುವೆ 300 ರೂ. ಪ್ರಯಾಣ ದರವಿದೆ. ಪ್ರಸ್ತಾವಿತ ಮಾರ್ಗದಲ್ಲಿ ವೋಲ್ವೊ ಬಸ್ ಬದಲು ಸಾಮಾನ್ಯ ಬಸ್ ವ್ಯವಸ್ಥೆ ಒದಗಿಸುವುದರಿಂದ ಕೆಎಸ್‌ಆರ್‌ಟಿಸಿ ನಷ್ಟಕ್ಕೊಳಗಾಗುವ ಸಾಧ್ಯತೆ ಇಲ್ಲ. ವಿಮಾನ ನಿಲ್ದಾಣಕ್ಕೆ ಸಾಮಾನ್ಯ ಸಾರಿಗೆ ಒದಗಿಸಿದಂತೆ ಕೂಡ ಆಗುತ್ತದೆ.
    | ಅನಿಲ್ ಹೆಗ್ಡೆ, ಸಾಮಾಜಿಕ ಕಾರ್ಯಕರ್ತರು

    ಏರ್‌ಪೋರ್ಟ್ ಮಾರ್ಗದ ವೋಲ್ವೊ ಬಸ್ ಸೇವೆಗೆ ಪ್ರಯಾಣಿಕರ ಸ್ಪಂದನೆ ಸ್ವಲ್ಪ ನಿರಾಶದಾಯಕವಾಗಿಯೇ ಇದೆ. ಈ ಮಾರ್ಗದ ಬಸ್ ಸೇವೆಯನ್ನು ಜನಪ್ರಿಯಗೊಳಿಸುವ ಕುರಿತು ನಿರಂತರ ಅಧ್ಯಯನ ನಡೆಯುತ್ತಿದೆ. ವಿಮಾನ ನಿಲ್ದಾಣದ ವಿವಿಧ ವಿಭಾಗಗಳಲ್ಲಿ ಹಾಗೂ ಮೂರು ಪಾಳಿಗಳಲ್ಲಿ 1250 ಮಂದಿ ದುಡಿಯುತ್ತಿದ್ದು, ಅವರಿಗೆ ರಿಯಾಯಿತಿ ಪಾಸ್‌ಗಳನ್ನು ಒದಗಿಸಿ ವೋಲ್ವೊ ಬಸ್‌ಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ ಕೂಡ ಪ್ರಯತ್ನ ನಡೆಯುತ್ತಿದೆ.
    | ರಾಜೇಶ್ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts