More

    11ರಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ? ಉಡುಪಿಯಲ್ಲಿ ಖಾಸಗಿ ಬಸ್ ಆರಂಭ ಡೌಟ್

    ಉಡುಪಿ: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಮೇ 11ರಿಂದ ಆರಂಭವಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

    ಜಿಲ್ಲೆ ಹಸಿರು ವಲಯ ಆಗಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಜಿಲ್ಲಾಡಳಿತ ಸರ್ಕಾರದ ಸೂಚನೆ ಮೇರೆಗೆ ಕೆಎಸ್‌ಆರ್‌ಟಿಸಿ ಸೇವೆ ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು, ಈಗಾಗಲೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಎಲ್ಲೆಲ್ಲಿ ಅಗತ್ಯ ಪ್ರಯಾಣಕ್ಕೆ ಸಂಬಂಧಿಸಿ ಬಸ್ ಓಡಾಟ ನಡೆಸಬಹುದು ಎಂದು ರೂಟ್ ಸರ್ವೇ ನಡೆಸಲಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ರೂಟ್ ಸರ್ವೇ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಈ ವರದಿ ಆದರಿಸಿ ಜಿಲ್ಲಾಡಳಿತ ಸರ್ಕಾರಿ ಬಸ್ಸು ಓಡಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.

    ಖಾಸಗಿ ಬಸ್ ಸೇವೆ ಸದ್ಯಕ್ಕೆ ಡೌಟು: ಖಾಸಗಿ ಬಸ್ ಸೇವೆ ಆರಂಭಿಸುವ ಬಗ್ಗೆ ಖಾಸಗಿ ಬಸ್ಸು ಮಾಲೀಕರ ಸಂಘ ಮತ್ತು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಆದರೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಇನ್ನೇನಿದ್ದರೂ ಲಾಕ್‌ಡೌನ್ ಮುಕ್ತಾಯ ಬಳಿಕವೇ ನೋಡಬೇಕು. ಇನ್ನೊಂದು ಹಂತದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರೊಡನೆ ಶೀಘ್ರ ಮಾತುಕತೆ ನಡೆಸಲಾಗುವುದು ಎಂದು ಕೆನರಾ ಬಸ್ಸು ಮಾಲೀಕರ ಸಂಘದ ರಾಜವರ್ಮ ಬಲ್ಲಾಳ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಭೆಯಲ್ಲಿ ಅಧಿಕಾರಿಗಳು ಶೇ.50 ಪ್ರಯಾಣಿಕರೊಂದಿಗೆ ದರ ಏರಿಸದಂತೆ ಬಸ್ಸು ಓಡಿಸಲು ಸೂಚಿಸಿದರು. ನಷ್ಟದಲ್ಲಿ ಬಸ್ಸು ಓಡಿಸಲು ಸಾಧ್ಯವಿಲ್ಲ ಎಂದು ಬಸ್ ಮಾಲೀಕರು ಅಭಿಪ್ರಾಯಪಟ್ಟರು. ಒಂದೂವರೆ ಪಟ್ಟು ದರ ಏರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಬಗ್ಗೆ ಸ್ಪಷ್ಟತೆ ಮೂಡಲಿಲ್ಲ. ಕನಿಷ್ಠ ಮೂರು ತಿಂಗಳ ತೆರಿಗೆ ವಿನಾಯಿತಿ ನೀಡಲು, ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಮೊತ್ತ ನೀಡಿದಂತೆ ಬಸ್ ಚಾಲಕ ಮತ್ತು ನಿರ್ವಾಹಕರಿಗೂ ನೀಡಬೇಕು ಎಂದು ಸಭೆಯಲ್ಲಿ ಬಸ್ ಮಾಲೀಕರು ಮನವಿ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಸಚಿವರೊಡನೆ ಚರ್ಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಕೆನರಾ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದಕ್ಷಿಣ ಕನ್ನಡ ಜಿಲ್ಲೆ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಕೆನರಾ ಬಸ್ಸು ಮಾಲೀಕರ ಸಂಘದ ಪದಾಧಿಕಾರಿ ವೆಂಕಟರಮಣ ಪೈ ಮೊದಲಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts