More

    ಉಡುಪಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ

    ಉಡುಪಿ: ಕೃಷ್ಣ ಮಠದಲ್ಲಿ ಪ್ರತಿವರ್ಷ ಸಹಸ್ರಾರು ಭಕ್ತರು ಸೇರಿ ಆಚರಿಸುವ ಶ್ರೀಕೃಷ್ಣಾಷ್ಟಮಿ ಈ ಬಾರಿ ಸರಳವಾಗಿ, ಸಾಂಪ್ರದಾಯಿಕವಾಗಿ ಭಕ್ತಿ, ಶ್ರದ್ಧೆಯಿಂದ ನೆರವೇರಿತು.

    ಸೌರ ಕೃಷ್ಣಾಷ್ಟಮಿ ಪ್ರಯುಕ್ತ ಗುರುವಾರ ಬೆಳಗ್ಗೆ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಕೃಷ್ಣ ದೇವರಿಗೆ ‘ಚಿನ್ನದ ತೊಟ್ಟಿಲಿನಲ್ಲಿ ಬಾಲಕೃಷ್ಣ ಅಲಂಕಾರ’ ಮಾಡಿದರು. ಅದಮಾರು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಿದರು.

    ನಂತರ ದೇವರ ವಿಶೇಷ ಪೂಜೆಗಾಗಿ ಲಡ್ಡಿಗೆ ತಯಾರಿ ಕಾರ್ಯಕ್ಕೆ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

    ರಾತ್ರಿ 10 ಗಂಟೆ ಬಳಿಕ ಕೃಷ್ಣ ಪೂಜೆ ಆರಂಭಗೊಂಡಿದ್ದು, ಬಳಿಕ ಕೃಷ್ಣಾರ್ಘ್ಯ ಪ್ರದಾನ ನೆರವೇರಿತು. ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ಬಿಲ್ವಪತ್ರೆ ಅರ್ಪಿಸಿ, ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡಿದರು.

    ಶ್ರೀಪಾದರು ಚಂದ್ರೋದಯ ಸಮಯ 12.16ರ ಮುಹೂರ್ತದಲ್ಲಿ ತುಳಸಿಕಟ್ಟೆ ಬಳಿ ವಿಶೇಷ ಪೂಜೆ ನೆರವೇರಿಸಿ, ತೆಂಗಿನ ಹೋಳಿನಲ್ಲಿ ಸುದರ್ಶನ ಸಾಲಿಗ್ರಾಮವನ್ನಿಟ್ಟು ಚಂದ್ರನಿಗೆ ಶಂಖದಿಂದ ಕ್ಷೀರಾರ್ಘ್ಯವನ್ನು ನೀಡಿದರು.
    ಕೃಷ್ಣನ ಮುಂಭಾಗ ತೀರ್ಥ ಮಂಟಪದಲ್ಲಿ ವಿಶೇಷವಾಗಿ ಅಳವಡಿಸಿದ್ದ ಬೆಳ್ಳಿಯ ಮಂಟಪದಲ್ಲಿ ವಿದ್ವಾಂಸರು, ಮಠದ ಪರಿವಾರದವರು ಸರತಿ ಸಾಲಿನಲ್ಲಿ ಬಂದು ಕೃಷ್ಣಾರ್ಘ್ಯವನ್ನೂ, ತುಳಸಿಕಟ್ಟೆಯಲ್ಲಿ ಚಂದ್ರಾರ್ಘ್ಯವನ್ನು ನೀಡಿದರು.

    ಇಂದು ವಿಟ್ಲಪಿಂಡಿ: ವಿಟ್ಲಪಿಂಡಿ ಶ್ರೀಕೃಷ್ಣಲೀಲೋತ್ಸವ ಮೆರವಣಿಗೆ ಶುಕ್ರವಾರ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗಲಿದೆ. ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಸ್ವರ್ಣರಥದಲ್ಲಿ ಹಾಗೂ ಅನಂತೇಶ್ವರ ಚಂದ್ರಮೌಳೀಶ್ವರ ವಿಗ್ರಹಗಳನ್ನು ನವರತ್ನ ರಥದಲ್ಲಿ ಸ್ಥಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಕೃಷ್ಣ ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೊಲ್ಲರು ಪ್ರತಿ ಗುರ್ಜಿಯ ಬಳಿ ಮೊಸರಿನ ಮಡಕೆ ಒಡೆದು ಕೃಷ್ಣನ ಮೊಸರು ಪ್ರೀತಿಯನ್ನು ಸಾರುತ್ತಾರೆ. ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನಗೊಳಿಸಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ವಿವಿಧ ಮಠಾಧೀಶರು, ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಲಿದ್ದಾರೆ.

    ಮುದ್ದುಕೃಷ್ಣರಿಲ್ಲ, ಭಕ್ತರಿಲ್ಲ!: ಕೃಷ್ಣಾಷ್ಟಮಿ ಎಂದರೆ ಇಡೀ ಉಡುಪಿ ನಗರಿಗೆ ಹಬ್ಬದ ಸಂಭ್ರಮ. ಕೃಷ್ಣನ ದರ್ಶನಕ್ಕೆ ಸರತಿ ಸಾಲು, ಮಠದೊಳಗೆ ಸಡಗರ, ಖರೀದಿಗೆ ದುಂಬಾಲು ಬೀಳುವ ಜನ, ಎಲ್ಲಿ ನೋಡಿದರಲ್ಲಿ ಮುದ್ದುಕೃಷ್ಣ, ರಾಧೆಯರ ಓಡಾಟ, ಬೆಳಗ್ಗಿನಿಂದ ರಾತ್ರಿವರೆಗೂ ಅಲ್ಲಲ್ಲಿ ಕಾರ್ಯಕ್ರಮಗಳು, ವೇಷಧಾರಿ ಮಕ್ಕಳ ಕಲರವ, ಭಕ್ತರ ಓಡಾಟ, ಹುಲಿ ಸಹಿತ ವಿವಿಧ ವೇಷಧಾರಿಗಳ ಕಲರವ, ಅಲಂಕಾರದಿಂದ ಕಂಗೊಳಿಸುವ ಇಡೀ ರಥಬೀದಿ. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಇದ್ಯಾವುದಕ್ಕೂ ಅವಕಾಶವಿಲ್ಲ. ಮಠವನ್ನು ಅಲಂಕರಿಸಲಾಗಿತ್ತು. ಸರಳ ಕೃಷ್ಣಾಷ್ಟಮಿಗೆ ಮಠದ ಆಡಳಿತ ಮಂಡಳಿ ನಿರ್ಧರಿಸಿದ್ದರಿಂದ ಭಕ್ತರಿಗೆ ಮಠದೊಳಗೆ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಭಕ್ತರು ಕನಕನ ಕಿಂಡಿಯಲ್ಲೇ ದೇವರ ದರ್ಶನ ಪಡೆದು ತೆರಳುತ್ತಿದ್ದರು. ಜಿಲ್ಲೆಯಲ್ಲಿ ಸಾವಿರಾರು ಜನ ಅಷ್ಟಮಿ ಉಪವಾಸ ವ್ರತ ಆಚರಿಸುತ್ತಾರೆ. ಕೇವಲ ತೀರ್ಥ ಸ್ವೀಕರಿಸಿ, ರಾತ್ರಿ ಕೃಷ್ಣಾಷ್ಟಮಿ ಅರ್ಘ್ಯ ಪ್ರದಾನ ಬಳಿಕ ಆಹಾರ ಸೇವಿಸುತ್ತಾರೆ. ಕೃಷ್ಣಾಷ್ಟಮಿ ರಾತ್ರಿ ಅರ್ಘ್ಯ ಪ್ರದಾನ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರು ಹಾಗೂ ವೈದಿಕರು ಗುರುವಾರ ಏಕಾದಶಿಯಂತೆ ನಿರ್ಜಲ ಉಪವಾಸದಲ್ಲಿದ್ದರು. ಅಷ್ಟಮಿ ಸಂಭ್ರಮವೂ ಮನೆಗೆ ಮಾತ್ರ ಸೀಮಿತವಾಗಿತ್ತು. ಜನ ಲಡ್ಡು, ಚಕ್ಕುಲಿ, ಉಂಡೆ ತಯಾರಿಸಿ ದೇವರಿಗೆ ಸಮರ್ಪಿಸಿ ಹಬ್ಬ ಆಚರಿಸಿದರು. ಭಕ್ತರು ಆನ್‌ಲೈನ್‌ನಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಿ ತೃಪ್ತಿಪಡಬೇಕಾಯಿತು.

    ಮೃಣ್ಮಯ ಮೂರ್ತಿ: ಭಾಗೀರಥಿ ಜಯಂತಿಯಂದು ಕೃಷ್ಣ ಮಠದ ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ. ಹೀಗಾಗಿ ಉತ್ಥಾನ ದ್ವಾದಶಿವರೆಗೆ ಯಾವುದೇ ಉತ್ಸವಗಳು ಇರುವುದಿಲ್ಲ. ಆದರೆ ವಿಟ್ಲಪಿಂಡಿ ಉತ್ಸವಕ್ಕೆ ಮಾತ್ರ ವಿಶೇಷವಾಗಿ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಚಿಸಿ ಸ್ವರ್ಣ ರಥದಲ್ಲಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

    ಭಕ್ತಿ ಚೌಕಟ್ಟು ಪಾಲಿಸೋಣ: ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ
    ಗೋಪಾಲಕರ ಕಷ್ಟಗಳನ್ನು ನಿವಾರಿಸಿದಂತೆ ಶರಣಾಗತಿಗೆ ಕೃಷ್ಣ ರಕ್ಷಣೆ ನೀಡುತ್ತಾನೆ. ಗೀತೆಯ ಸಂದೇಶದಲ್ಲಿ ಭರವಸೆ ಇಟ್ಟು ಸನ್ಮಾರ್ಗದಲ್ಲಿ ಮುಂದುವರಿಯಬೇಕು ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
    ರಾಜಾಂಗಣದಲ್ಲಿ ಗುರುವಾರ ಸಾಯಂಕಾಲ ಪ್ರವಚನ ಮಾಲಿಕೆಯ ಸಮಾರೋಪದಲ್ಲಿ ಮಾತನಾಡಿದರು. ಭಕ್ತಿಗೆ ಒಂದು ಚೌಕಟ್ಟು ಇದೆ. ಅದನ್ನು ಎಲ್ಲರೂ ಪಾಲಿಸಬೇಕು. ವ್ಯಕ್ತಿಯಲ್ಲಿ ಅಡಗಿರುವ ಭಕ್ತಿಯನ್ನು ಮೇಲ್ನೋಟಕ್ಕೆ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು.
    ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಪೂಜೆ, ಕಥಾಶ್ರವಣ ನಡೆಯುವ ಪ್ರದೇಶಗಳಲ್ಲಿ ಕೃಷ್ಣ ಸನ್ನಿಹಿತನಾಗಿರುತ್ತಾನೆ. ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ಶಿಕ್ಷಣ ಎಂಬುದು ಕೃಷ್ಣನ ಬದುಕಿನ ನೀತಿಯಾಗಿದೆ ಎಂದರು. ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts