More

    ಶಿರೂರು ಮಠದ ನೂತನ ಯತಿ ನಿಡ್ಲೆ ಮೂಲದವರು

    ಉಡುಪಿ: ಉಡುಪಿ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠದ 31ನೇ ಉತ್ತರಾಧಿಕಾರಿಯಾಗಿ ಉಡುಪಿಯ ಹಿರಿಯ ವಿದ್ವಾಂಸರೊಬ್ಬರ ಪುತ್ರ ಆಯ್ಕೆಯಾಗಿದ್ದು, ಏ.21ರಂದು ರಾಮನವಮಿ ಪರ್ವ ಕಾಲದಲ್ಲಿ ಶಿರೂರು ಮೂಲ ಮಠದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನೂತನ ಯತಿಯ ಹೆಸರು ಘೋಷಿಸಲಿದ್ದಾರೆ.

    ಮೂಲತಃ ಧರ್ಮಸ್ಥಳ ಸಮೀಪದ ನಿಡ್ಲೆಯವರಾದ, ಸುಬ್ರಹ್ಮಣ್ಯ ಮಠದ ಶಿಷ್ಯ ವರ್ಗಕ್ಕೆ ಸೇರಿದ ಹಿರಿಯ ವಿದ್ವಾಂಸರ ಪುತ್ರ ಶಿರೂರು ಮಠದ ಉತ್ತರಾಧಿಕಾರಿಯಾಗಲಿದ್ದಾರೆ. ಬಾಲ್ಯದಿಂದಲೇ ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದು, ಎಸ್ಸೆಸ್ಸೆಲ್ಸಿವರೆಗೆ ಲೌಕಿಕ ಶಿಕ್ಷಣ ಪಡೆದಿರುವ ವಟುವಿಗೆ ಈಗ ಸುಮಾರು 18 ವರ್ಷ ವಯಸ್ಸು. ಕಳೆದ 2 ವರ್ಷಗಳಿಂದ ಮಧ್ವ ಸಿದ್ಧಾಂತ ಹಾಗೂ ವೇದ, ವೇದಾಂತ ವಿಷಯಗಳನ್ನು ಬೋಧಿಸಲಾಗುತ್ತಿದೆ.

    ನಾಗಪುರ, ಕಾಶಿ, ಉಡುಪಿ ಸಹಿತ ವಿವಿಧೆಡೆ ಜ್ಯೋತಿಷಿಗಳಲ್ಲಿ ವಟುವಿನ ಸಂನ್ಯಾಸ ಯೋಗದ ಬಗ್ಗೆ ಜಾತಕವನ್ನು ಪರಾಮರ್ಶಿಸಲಾಗಿದೆ. ಎಲ್ಲೆಡೆ ಸಕಾರಾತ್ಮಕ ಉತ್ತರ ದೊರಕಿದೆ. ಮೇ 2ನೇ ವಾರದಲ್ಲಿ ಸೋಂದಾ ಕ್ಷೇತ್ರದ ವಾದಿರಾಜ ಶ್ರೀಗಳ ಸನ್ನಿಧಿಯಲ್ಲಿ ಸಂನ್ಯಾಸ ದೀಕ್ಷೆ ನೀಡಲು ಸೋದೆ ಶ್ರೀಗಳು ನಿರ್ಧರಿಸಿದ್ದಾರೆ ಎಂದು ವಿಜಯವಾಣಿಗೆ ಅಧಿಕೃತ ಮೂಲಗಳಿಂದ ಮಾಹಿತಿ ಲಭಿಸಿದೆ. ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ 2018ರಲ್ಲಿ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ 3 ವರ್ಷಗಳಿಂದ ದ್ವಂದ್ವ ಮಠವಾದ ಸೋದೆ ಮಠ ಶಿರೂರು ಮಠದ ಆಡಳಿತ ನಿರ್ವಹಿಸುತ್ತಿದೆ.

    ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಏ.21ರಂದು 2.30ಕ್ಕೆ ನೂತನ ಸಭಾಂಗಣದ ಉದ್ಘಾಟನೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts