More

    ಹಲವು ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಉತ್ತರ : ಅಪರ ಜಿಲ್ಲಾಧಿಕಾರಿ ಅಮರೇಶ್ ಅಭಿಪ್ರಾಯ

    ಚಿಕ್ಕಬಳ್ಳಾಪುರ: ಹಲವು ಸಂಕೀರ್ಣ ಸಮಸ್ಯೆಗಳಿಗೆ ಶ್ರೀಕೃಷ್ಣನ ಬೋಧನೆಗಳಲ್ಲಿ ಸೂಕ್ತ ಉತ್ತರಗಳು ಸಿಗುತ್ತವೆ, ವೈಜ್ಞಾನಿಕ ವಿಶ್ಲೇಷಣೆಗೂ ಒಳಪಟ್ಟಿವೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಅಭಿಪ್ರಾಯಪಟ್ಟರು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿಯಲ್ಲಿ ಮಾತನಾಡಿ, ಶ್ರೀಕೃಷ್ಣನ ತತ್ವಗಳು ಸಂಕಷ್ಟದ ಸಂದರ್ಭಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿವೆ ಎಂದು ಜರ್ಮನ್ ಭಾಷಾಶಾಸ್ತ್ರಜ್ಞ ಮ್ಯಾಕ್ಸ್ ಮುಲ್ಲರ್ ಸೇರಿ ಪಾಶ್ಚಾತ್ಯ ಅನೇಕ ತಜ್ಞರು ವಿವರಿಸಿರುವುದು ಹೆಗ್ಗಳಿಕೆಯ ವಿಚಾರ ಎಂದರು.

    ಹಿಂದು ಧರ್ಮದಲ್ಲಿ ಶ್ರೀಕೃಷ್ಟ ಪರಮಾತ್ಮನಿಗೆ ಶ್ರೇಷ್ಠ ಸ್ಥಾನವಿದ್ದು ಆದಿಪುರಾಣದಿಂದ ಹಿಡಿದು ದಾಸ ಪರಂಪರೆಯನ್ನೊಳಗೊಂಡಂತೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ತತ್ವ ಸಿದ್ಧಾಂತಗಳ ಉಲ್ಲೇಖವಿದೆ. ಪ್ರತಿಯೊಬ್ಬರಲ್ಲೂ ಉಳಿದುಕೊಂಡಿರುವ ಮಾನಸಿಕ ಗೊಂದಲಗಳಿಗ ಭಗವದ್ಗೀತೆಯ ಸಾರ ಉತ್ತರ ನೀಡುತ್ತದೆ ಎಂದು ಹೇಳಿದರು.

    ಸಮಾನತೆ, ಸಮನ್ವಯತೆ, ಸಹಕಾರ, ಚಲನಶೀಲ, ಸ್ನೇಹಜೀವಿ ವ್ಯಕ್ತಿತ್ವಕ್ಕೆ ಪ್ರತೀಕವಾದ ಶ್ರೀಕೃಷ್ಣ ಮತ್ತು ಆತನ ಬೋಧನೆಗಳು ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಪ್ರಮುಖವಾಗಿ ಮಹಾತ್ಮರ ಜಯಂತಿಗಳು ಜಾತಿಯಾಧಾರಿತ ಕಾರ್ಯಕ್ರಮಗಳಾಗಬಾರದು. ಯುವ ಜನತೆಗೆ ಒಳ್ಳೆಯ ಸಂದೇಶ ನೀಡುವಂತೆ ಅರ್ಥಪೂರ್ಣವಾಗಿ ನಡೆಯಬೇಕು ಎಂದು ಜಿಲ್ಲಾ ಯಾದವ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಮುನೇಗೌಡ ಅಭಿಪ್ರಾಯಪಟ್ಟರು.

    ಕೌರವರು ಅತಿರಥ ಮಹಾನಾಯಕರಿಂದ ಪ್ರಾಬಲ್ಯ ಹೊಂದಿದ್ದರೂ ಅಧರ್ಮವನ್ನು ಒಪ್ಪಿ ಸರ್ವನಾಶವಾಗುತ್ತಾರೆ. ಕೃಷ್ಣನ ಮಾರ್ಗದರ್ಶನದಲ್ಲಿ ಧರ್ಮಪಾಲನೆಯ ಮೂಲಕ ಪಾಂಡವರು ಗೆಲುವು ಸಾಧಿಸಿದರು, ಇದು ಸಜ್ಜನಿಕೆಯ ಮಹತ್ವವನ್ನು ಸಾರುತ್ತದೆ ಎಂದರು.

    ಕೃಷ್ಣ ಜನ್ಮಾಷ್ಟಮಿ ದಿನದಂದು ಮಕ್ಕಳು ಶ್ರೀಕೃಷ್ಣ-ರಾಧೆಯ ವೇಷಾವಳಿ ಧರಿಸಿ ಸಂಭ್ರಮಿಸುವುದಲ್ಲದೇ ಭಗವದ್ಗೀತೆಯ ಶ್ಲೋಕಗಳನ್ನು ಹೇಳುವುದು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಿವೆ ಎಂದು ತಿಳಿಸಿದರು.
    ಜಿಲ್ಲಾ ಯಾದವ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಪ್ರಭಾಕರ್, ಶ್ರೀನಿವಾಸ್, ವೆಂಕಟೇಶ್, ಕೃಷ್ಣಪ್ಪ, ಟಿ.ಸಿ.ಗೋವಿಂದರಾಜು, ಹರೀಶ್, ಯಾದವ ಯುವ ವೇದಿಕೆ ಮುಖಂಡ ಮುನಿಕೃಷ್ಟ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts