More

    ಕೃಷ್ಣರಾಜ ಕ್ಷೇತ್ರ : ಯಾರಾಗಲಿದ್ದಾರೆ ಈ ಬಾರಿ ಕೃಷ್ಣ ‘ರಾಜ’?

    ಸದೇಶ್ ಕಾರ್ಮಾಡ್ ಮೈಸೂರು

    ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಒದಗಿ ಸುತ್ತಿರುವ ಕ್ಷೇತ್ರ. ಈ ಬಾರಿಯೂ ಅಂತಹದ್ದೇ ಒಂದು ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಈ ಎರಡು ಪಕ್ಷಗಳ ಜಿದ್ದಾಜಿದ್ದಿನ ಹೋರಾಟದ ನಡುವೆ ಜೆಡಿಎಸ್ ಮತ್ತೊಮ್ಮೆ ಗೆದ್ದು ಬೀಗುವ ತವಕದಲ್ಲಿ ಇದೆ.

    ಈ ಬಾರಿ ಕ್ಷೇತ್ರದ ರಾಜಕೀಯ ಚಿತ್ರಣ ಒಂದಷ್ಟು ಬದಲಾವಣೆಯಾಗಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದ, ಹಾಲಿ ಶಾಸಕ ಎಸ್.ಎ. ರಾಮದಾಸ್‌ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸ ಲಾಗಿದೆ. ಬದಲಾದ ಅಭ್ಯರ್ಥಿ, ಬದಲಾದ ರಾಜಕೀಯ ತಂತ್ರಗಾರಿಕೆಯು ಈ ಬಾರಿಯ ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಎಲ್ಲರ ಕುತೂಹಲದ ವಿಚಾರವಾಗಿದೆ.

    ಕಣದಲ್ಲಿ 17 ಅಭ್ಯರ್ಥಿಗಳು

    ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಕೆ. ಸೋಮಶೇಖರ್, ಜೆಡಿಎಸ್ ಅಭ್ಯರ್ಥಿಯಾಗಿ ಕೆ.ವಿ. ಮಲ್ಲೇಶ್ ಕಣಕ್ಕಿಳಿದಿ ದ್ದಾರೆ. ಒಟ್ಟು 17 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

    ಕ್ಷೇತ್ರದಲ್ಲಿ ಕ್ರಮವಾಗಿ ಬ್ರಾಹ್ಮಣ, ವೀರಶೈವ ಲಿಂಗಾಯತ, ಪರಿಶಿಷ್ಟ ಜಾತಿ, ಕುರುಬ, ಒಕ್ಕಲಿಗ, ಮುಸ್ಲಿಂ, ನಾಯಕ ಸಮುದಾಯಗಳು ಪ್ರಾಬಲ್ಯ ಹೊಂದಿದ್ದು, ಈ ಜಾತಿ ಲೆಕ್ಕಾಚಾರದಲ್ಲಿಯೇ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವಿನ ತಂತ್ರಗಾರಿಕೆ ರೂಪಿಸಿದ್ದಾರೆ.

    ರಾಮದಾಸ್ ಸ್ಪರ್ಧಿಸದ ಚುನಾವಣೆ

    ಶಾಸಕ ಎಸ್.ಎ. ರಾಮದಾಸ್ 1994 ರಿಂದ 2018ರವರೆಗೆ ಪ್ರತಿ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಾ ಬಂದಿದ್ದರು. ಒಟ್ಟು 6 ಚುನಾವಣೆಗಳನ್ನು ಎದುರಿಸಿ 4 ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಶಾಸಕ ಎಸ್.ಎ. ರಾಮದಾಸ್ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಹಂಚಿಕೆ ಸಂದರ್ಭವೇ ಅವರ ವಿರುದ್ಧ ಬ್ರಾಹ್ಮಣ ಸಮುದಾಯದ ವಿವಿಧ ಸಂಘಟನೆಗಳು ನೇರ ವಾಗಿ ಅಸಮಾಧಾನ ಹೊರಹಾಕಿ ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಇದರ ಜತೆಗೆ ವಿವಿಧ ಕಾರಣಗಳಿಂದಾಗಿ ರಾಮದಾಸ್ ಈ ಬಾರಿ ಟಿಕೆಟ್ ಕೈತಪ್ಪಿತು. ಈ ಬಾರಿ ರಾಮದಾಸ್‌ಗೆ ಟಿಕೆಟ್ ಕೈತಪ್ಪಿರುವುದು ಬಿಜೆಪಿ ಅಭ್ಯರ್ಥಿಯ ಮತಗಳಿಕೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿಯೂ ಇದೆ. ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಬಿಜೆಪಿಗೆ ಪ್ಲಸ್ ಆಗಲಿದೆಯೋ ಅಥವಾ ಮೈನಸ್ ಆಗಲಿದೆಯೋ ಎಂಬುದು ಕ್ಷೇತ್ರದಲ್ಲಿ ಬಹುಮುಖ್ಯ ಚರ್ಚೆಯ ವಿಷಯವಾಗಿದೆ. ಏನೇ ಆದರೂ ಸಾಂಪ್ರದಾಯಿಕ ಮತಗಳ ಆಧಾರದ ಮೇಲೆ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಇದೆ.

    ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಒಟ್ಟು 5 ಚುನಾವಣೆಗಳನ್ನು ಎದುರಿಸಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಜೆಡಿಎಸ್ ಹಾಗೂ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತಲಾ ಒಂದು ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಇದು ಅವರಿಗೆ 6ನೇ ಚುನಾವಣೆ. 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಎಚ್.ವಿ. ರಾಜೀವ್ ಸ್ಪರ್ಧೆಯಿಂದ ಬಿಜೆಪಿ ಮತಗಳ ವಿಭಜನೆಯಿಂದ ಎಂ.ಕೆ. ಸೋಮಶೇಖರ್ ಸುಲಭವಾಗಿ ಗೆಲುವು ಸಾಧಿಸಿದ್ದರು. ಆದರೆ, 2018ರಲ್ಲಿ ರಾಜಕೀಯ ಚಿತ್ರಣ ಬದಲಾಗಿ ಕೆಜೆಪಿ ಬಿಜೆಪಿಯೊಂದಿಗೆ ವಿಲೀನಗೊಂಡ ನಂತರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಈ ಬಾರಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಶಾಸಕ ಎಸ್.ಎ. ರಾಮದಾಸ್‌ಗೆ ಟಿಕೆಟ್ ಕೈತಪ್ಪಿರುವುದರ ಲಾಭವನ್ನು ಪಡೆದು ಗೆಲುವು ಸಾಧಿಸುವ ತವಕದಲ್ಲಿ ಕಾಂಗ್ರೆಸ್ ಇದೆ.

    ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದ ಸಂದರ್ಭ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿತ್ತು. ಆ ಸಂದರ್ಭ (2004ರಲ್ಲಿ) ಜೆಡಿಎಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಆದರೆ, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್ ಅವರನ್ನು ಎರಡನೇ ಬಾರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಜೆಡಿಎಸ್ ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆದು ಗೆಲುವು ಸಾಧಿಸುವ ತವಕದಲ್ಲಿದೆ. ಕಳೆದ ಬಾರಿ ಕೆ.ವಿ. ಮಲ್ಲೇಶ್ 11,607 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು.

    2018ರ ಚುನಾವಣಾ ಫಲಿತಾಂಶ

    ಗೆದ್ದವರು- ಎಸ್.ಎ. ರಾಮದಾಸ್. ಪಕ್ಷ- ಬಿಜೆಪಿ. ಪಡೆದ ಮತ- 78573. ಸೋತವರು- ಎಂ.ಕೆ. ಸೋಮಶೇಖರ್. ಪಕ್ಷ- ಕಾಂಗ್ರೆಸ್. ಗೆಲುವಿನ ಅಂತರ – 26347

    2013ರ ಚುನಾವಣಾ ಫಲಿತಾಂಶ

    ಗೆದ್ದವರು – ಎಂ.ಕೆ. ಸೋಮಶೇಖರ್. ಪಕ್ಷ – ಕಾಂಗ್ರೆಸ್. ಪಡೆದ ಮತ – 52,611. ಸೋತವರು- ಎಸ್.ಎ. ರಾಮದಾಸ್. ಪಕ್ಷ – ಬಿಜೆಪಿ. ಪಡೆದ ಮತ – 46,546 ಗೆಲುವಿನ ಅಂತರ -6,065

    ಮತದಾರರ ವಿವರ
    ಒಟ್ಟು ಮತದಾರರು 2,48,564, ಪುರುಷರು 1,21,590 ಮಹಿಳೆಯರು 1,26,947 ಇತರೆ 27

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts