More

    ಕೃಷಿಮೇಳ: ಸ್ಪರ್ಧೆ ಒಂದೆರಡಲ್ಲ.. ಸ್ಪರ್ಧಿಗಳಿಗೇನು ಕಮ್ಮಿ ಇಲ್ಲ…

    ವಿದೇಶಿ ಕ್ರೀಡೆಗಳ ಭರಾಟೆ ನಡುವೆ ಕಣ್ಮರೆಯಾಗುತ್ತಿರುವ ದೇಸಿ ಕ್ರೀಡೆಯ ಸೊಬಗು ಕೃಷಿ ಮೇಳದಲ್ಲಿ ಮರುಕಳಿಸಿತು. ಶನಿವಾರ ‘ಮಹಿಳಾ ಮಣಿ’ಯರಿಗಾಗಿ ವಿಶೇಷವಾಗಿ ಹಮ್ಮಿಕೊಂಡಿದ್ದ ದೇಸಿ ಕ್ರೀಡೆಗಳು ಮೇಳದ ಮೆರುಗು ಹೆಚ್ಚಿಸಿ, ಎಲ್ಲರ ಮೆಚ್ಚುಗೆ ಪಡೆಯುವುದರ ಜತೆಗೆ ಸ್ಪರ್ಧಿಗಳಲ್ಲಿ ಪುಟಿಯುತ್ತಿದ್ದ ಉತ್ಸಾಹಕ್ಕೆ ಭರಪೂರ ಪ್ರೋತ್ಸಾಹ ನೀಡಿತು.

    ಕೃಷಿಮೇಳ: ಸ್ಪರ್ಧೆ ಒಂದೆರಡಲ್ಲ.. ಸ್ಪರ್ಧಿಗಳಿಗೇನು ಕಮ್ಮಿ ಇಲ್ಲ...ರಾಗಿ ಬೀಸುವ, ಅವರೆಕಾಯಿ ಬಿಡಿಸುವ, ಬಂಡಿ ಓಡಿಸುವ, ತುಂಬಿದ ಬಿಂದಿಗೆ ಎತ್ತಿಕೊಂಡು ಓಡುವ ಸ್ಪರ್ಧೆ, ಹಗ್ಗಜಗ್ಗಾಟದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಲ್ಲಿ ಕಂಡುಬಂದ ಲವಲವಿಕೆ ನೋಡುಗರಲ್ಲೂ ಪ್ರತಿಬಿಂಬಿಸಿದ್ದು ವಿಶೇಷ. ಪ್ರತಿ ಸ್ಪರ್ಧೆಗಳಿಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಸೇರಿ ಇತರ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ದೇಸಿಕ್ರೀಡೆಯಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡರು.

    ಮಧ್ಯಾಹ್ನ 3.30ಕ್ಕೆ ಪ್ರಾರಂಭಗೊಂಡ ರಾಗಿ ಬೀಸುವ ಸ್ಪರ್ಧೆಯಲ್ಲಿ ಒಬ್ಬರನ್ನು ಮತ್ತೊಬ್ಬರು ಮೀರಿಸುವಂತೆ ಸ್ಪರ್ಧಿಗಳು ರಾಗಿ ಕಲ್ಲನ್ನು ತಿರುಗಿಸಿದರು. ಅವರೆಕಾಯಿ ಸುಲಿಯುವ ಸ್ಪರ್ಧೆಯಲ್ಲಿ ನಾ ಮುಂದು ತಾ ಮುಂದು ಎನ್ನುವಂತೆ ಮಹಿಳೆಯರು ಪೈಪೋಟಿ ನೀಡಿದರು. ಹಿರಿಯ ಮಹಿಳೆಯರೂ ಸ್ಪರ್ಧೆಯಲ್ಲಿ ಭಾಗವಹಿಸಿದರು. ನಂತರ ನಡೆದ ತುಂಬಿದ ಬಿಂದಿಗೆ ಎತ್ತಿಕೊಂಡು ಓಡುವ ಮತ್ತು ಬಂಡಿ ಓಡಿಸುವ ಸ್ಪರ್ಧೆಗಳು ರೋಮಾಂಚನದಿಂದ ಕೂಡಿದ್ದವು.

    ಬಿಂದಿಗೆ ಎತ್ತಿಕೊಂಡು ಓಡುವ ಸ್ಪರ್ಧೆ 3, ಬಂಡಿ ಓಡಿಸುವ ಸ್ಪರ್ಧೆ 4 ಸುತ್ತಿನಲ್ಲಿ ನಡೆದವು. ನಂತರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 7 ಜನರ 5 ತಂಡ ಹಗ್ಗ ಹಿಡಿದು ಎಳೆದಾಡಿದರು. ದೈನಂದಿನ ಜೀವನದ ಜಂಜಾಟಗಳ ನಡುವೆ ಖುಷಿಯ ಕ್ಷಣಗಳನ್ನು ಮರೆತಿರುವ ಮಹಿಳೆಯರಿಗೆ ಕೃಷಿ ಮೇಳದಲ್ಲಿ ಸಂತಸ ನೀಡಿತು. ದೇಸಿ ಕ್ರೀಡೆಯನ್ನು ಕಾಸರವಾಡಿ ಮಹದೇವು, ರಂಗಶೆಟ್ಟಿ, ಜಿ.ಬೋರಯ್ಯ, ಜಿ.ಸಿ.ಸುರೇಶ್, ಬಿ.ಬೋರಯ್ಯ, ಸೌಭಾಗ್ಯಮ್ಮ ನಿರ್ವಹಿಸಿದರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

    ಉಡುಗೆಯಲ್ಲಿ ಸ್ತ್ರೀ ಮಿಂಚು

    ಹಸಿರು ಸೀರೆ ತೊಟ್ಟ ಕೃಷಿ ಮಹಿಳೆಯರು, ಅನ್ನದಾತ- ನೇಗಿಲ ಯೋಗಿ ರೈತ, ಸಾಂಪ್ರದಾಯಿಕ ಸೀರೆ, ವಿಭಿನ್ನ ಉಡುಗೆ-ತೊಡುಗೆ ಧರಿಸಿದ ಕೊಡವತಿ ವೇಷಭೂಷಣ ಸ್ಪರ್ಧೆಯಲ್ಲಿ ಮಿಂಚಿದರು. ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಾದಲ್ ನಂಜುಂಡಸ್ವಾಮಿ, ಮಂಜುನಾಥ್, ಮಂಡ್ಯ ಚಂದ್ರು, ಮೋಹನ್ ತೀರ್ಪಗಾರರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts