More

    ಇಂದು ಪಾವ್ಲಚೆಂಕೋವಾ-ಕ್ರೆಜ್‌ಸಿಕೋವಾ ಫೈನಲ್, ಯಾರು ಗೆದ್ದರೂ ಚೊಚ್ಚಲ ಗ್ರಾಂಡ್​ ಸ್ಲಾಂ ಗರಿ

    ಪ್ಯಾರಿಸ್: ರಷ್ಯಾದ ಅನುಭವಿ ಆಟಗಾರ್ತಿ ಅನಸ್ಟೆಸಿಯಾ ಪಾವ್ಲಚೆಂಕೋವಾ ಮತ್ತು ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜ್‌ಸಿಕೋವಾ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸುವ ಹಂಬಲದೊಂದಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಶನಿವಾರ ಫೈನಲ್ ಪಂದ್ಯ ಆಡಲಿದ್ದಾರೆ. ಸತತ 6ನೇ ವರ್ಷ ಫ್ರೆಂಚ್ ಓಪನ್‌ನಲ್ಲಿ ಆಟಗಾರ್ತಿಯೊಬ್ಬರಿಗೆ ಚೊಚ್ಚಲ ಗ್ರಾಂಡ್ ಸ್ಲಾಂ ಒಲಿಯಲಿದೆ.

    29 ವರ್ಷದ ಪಾವ್ಲಚೆಂಕೋವಾ ವೃತ್ತಿಜೀವನದ 52ನೇ ಗ್ರಾಂಡ್ ಸ್ಲಾಂನಲ್ಲಿ ಚೊಚ್ಚಲ ಫೈನಲ್‌ಗೇರಿದ್ದರೆ, 25 ವರ್ಷದ ಕ್ರೆಜ್‌ಸಿಕೋವಾ ಕಳದ 5 ವರ್ಷಗಳಲ್ಲಿ ರೊಲ್ಯಾಂಡ್ ಗ್ಯಾರಸ್‌ನಲ್ಲಿ ಫೈನಲ್‌ಗೇರಿದ 4ನೇ ಶ್ರೇಯಾಂಕರಹಿತ ಆಟಗಾರ್ತಿ ಎನಿಸಿದ್ದಾರೆ.

    ವಿಶ್ವ ನಂ. 33 ಕ್ರೆಜ್‌ಸಿಕೋವಾ ಗುರುವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗ್ರೀಕ್ ಆಟಗಾರ್ತಿ ಮರಿಯಾ ಸಕ್ಕರಿ ವಿರುದ್ಧ 7-5, 4-6, 9-7ರಿಂದ ರೋಚಕ ಗೆಲುವು ಸಾಧಿಸಿದರು. 3 ಗಂಟೆ 18 ನಿಮಿಷಗಳ ಕಾಲ ಸಾಗಿದ ಕಾದಾಟದಲ್ಲಿ ಕ್ರೆಜ್‌ಸಿಕೋವಾ ಮ್ಯಾಚ್ ಪಾಯಿಂಟ್ ರಕ್ಷಿಸಿಕೊಂಡು ಗೆಲುವು ಒಲಿಸಿಕೊಂಡರು. ಫ್ರೆಂಚ್ ಓಪನ್‌ನಲ್ಲಿ 2018ರಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಕ್ರೆಜ್‌ಸಿಕೋವಾ, ಸಿಂಗಲ್ಸ್‌ನಲ್ಲಿ 4ನೇ ಸುತ್ತಿನಿಂದ ಮೇಲೇರಿದ್ದು ಇದೇ ಮೊದಲ ಬಾರಿ ಆಗಿದೆ. ಡಬಲ್ಸ್​​ನಲ್ಲಿ ಈ ಬಾರಿಯೂ ಅವರು ಫೈನಲ್​ಗೇರುವ ಮೂಲಕ ಡಬಲ್​ ಸಾಧನೆ ಮಾಡಿದ್ದಾರೆ.

    ಫ್ರೆಂಚ್​ ಓಪನ್‌ನಲ್ಲಿ 2016ರಿಂದ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿರುವ ಐವರು ಆಟಗಾರ್ತಿಯರಿಗೂ (ಗಾರ್ಬಿನ್ ಮುಗುರುಜಾ, ಜೆಲೆನಾ ಒಸ್ತಾಪೆಂಕೊ, ಸಿಮೋನಾ ಹಲೆಪ್, ಆಶ್ಲೆಗ್ ಬಾರ್ಟಿ, ಇಗಾ ಸ್ವಿಯಾಟೆಕ್) ಅದು ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವು ಆಗಿತ್ತು.

    ಪಾವ್ಲಚೆಂಕೋವಾ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ಲೊವೇನಿಯಾದ ಟಮರ ಜಿದಾನ್‌ಸೆಕ್‌ಗೆ 7-5, 6-3 ನೇರಸೆಟ್‌ಗಳಿಂದ ಸೋಲುಣಿಸಿದರು. 14 ವರ್ಷಗಳ ವೃತ್ತಿಜೀವನದ ಹಿಂದಿನ 51 ಗ್ರಾಂಡ್ ಸ್ಲಾಂಗಳಲ್ಲಿ 6 ಬಾರಿ ಕ್ವಾರ್ಟರ್​ಫೈನಲ್‌ನಲ್ಲೇ ಎಡವಿದ್ದ ಪಾವ್ಲಚೆಂಕೋವಾ ಇದೇ ಮೊದಲ ಬಾರಿಗೆ ಸೆಮಿಫೈನಲ್ ಆಡಿದರು. ಜತೆಗೆ 50ಕ್ಕೂ ಅಧಿಕ ಗ್ರಾಂಡ್ ಸ್ಲಾಂ ಆಡಿದ ಬಳಿಕ ಚೊಚ್ಚಲ ಫೈನಲ್‌ಗೇರಿದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಇಟಲಿಯ ರಾಬರ್ಟ್ ವಿನ್ಸಿ 44 ಗ್ರಾಂಡ್ ಸ್ಲಾಂ ಆಡಿದ ಬಳಿಕ ಫೈನಲ್‌ಗೇರಿದ್ದು ಹಿಂದಿನ ದಾಖಲೆ. ಮರಿಯಾ ಶರಪೋವಾ (2014) ಬಳಿಕ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಫೈನಲ್‌ಗೇರಿದ ಮೊದಲ ರಷ್ಯಾ ಆಟಗಾರ್ತಿ ಎನಿಸಿದ್ದಾರೆ.

    *ಪಂದ್ಯ ಆರಂಭ: ಸಂಜೆ 6.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1

    ಶ್ರೀಲಂಕಾ ಪ್ರವಾಸಕ್ಕೆ ಧವನ್ ನಾಯಕ, ಕರ್ನಾಟಕದ ಮೂವರಿಗೆ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts