More

    ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸಿದ್ದ ಹಡಪದ ಅಪ್ಪಣ್ಣ

    ಕಡೂರು: ಶೋಷಿತ ವರ್ಗದ ಸಮಾಜವನ್ನು ತಿರಸ್ಕಾರದಿಂದ ಕಾಣುವ ದಿನಗಳಲ್ಲಿ ಮೌಢ್ಯದ ವಿರುದ್ಧ ಕ್ರಾಂತಿಕಾರಿ ಬದಲಾವಣೆ ತರಲು ಹಡಪದ ಅಪ್ಪಣನವರ ಪಾತ್ರ ಪ್ರಮುಖವಾಗಿತ್ತು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

    ತಾಪಂನಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಶ್ರೀ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದಿಂದ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣ 889ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಯಕ ಯೋಗಿಯಾಗಿದ್ದ ಹಡಪದ ಅಪ್ಪಣ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅವರ ಪತ್ನಿಯೂ ವಚನಕಾರರಾಗಿ ಸಮಾಜದಲ್ಲಿ ಆಮುಲಾಗ್ರ ಬದಲಾವಣೆಗೆ ಕೈಜೋಡಿಸಿದ್ದರು. ಪ್ರತಿಭೆ ಯಾವುದೇ ಜಾತಿಗೆ ಸೀಮಿತವಲ್ಲ, ಸಂಸ್ಕಾರ ಮುಖ್ಯವಾಗಲಿದೆ. ಜಾತಿ ಮುಖ್ಯವಲ್ಲ ಎಂದು ಹೇಳಿದರು.
    ಸಣ್ಣ ಸಣ್ಣ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಆಶಯದಿಂದ ರಾಜ್ಯ ಸರ್ಕಾರ ಶರಣರ ಜಯಂತಿ ಆಚರಣೆ ಜಾರಿಗೆ ತಂದಿದೆ ಎಂದು ತಿಳಿಸಿದರು.
    ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ತುಳಿತಕ್ಕೆ ಒಳಗಾದ ಸಣ್ಣ ಸಣ್ಣ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ಹಲವಾರು ಶರಣರಿಗೆ ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನಮಾನ ದೊರಕಿಸಿಕೊಡಲಾಗಿತ್ತು. ಹಡಪದ ಅಪ್ಪಣನವರು ಸಮಾನತೆಗಾಗಿ ಹೋರಾಡಿದ ಮಹಾನ್ ಶರಣ. ಪ್ರತಿಯೊಬ್ಬರೂ ಸೌಹಾರ್ದದಿಂದ ಬದುಕು ನಡೆಸುವಂತಾಗಬೇಕೆಂಬುದು ಶರಣರ ಮುಖ್ಯ ಆಶಯವಾಗಿತ್ತು. ಸವಿತಾ ಸಮಾಜ ಒಗ್ಗಟ್ಟಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಸವಿತಾ ಸಮಾಜದ ಭವನಕ್ಕೆ ಪುರಸಭೆಯಿಂದ ನಿವೇಶ ದೊರಕಿಸಿಕೊಡಲಾಗಿದೆ ಎಂದು ತಿಳಿಸಿದರು.
    ಸಾಹಿತಿ ಡಾ. ಎಂ.ಒ.ಮಮತೇಶ್ ಮಾತನಾಡಿ, ಅಪ್ಪಣ್ಣ ಅವರು ಬಸವಪ್ರಿಯ ಕೂಡಲ ಚೆನ್ನಬಸವ ಎಂಬ ಅಂಕಿತವನ್ನಿಟ್ಟುಕೊಂಡಿದ್ದರು. ಅಲ್ಲಮಪ್ರಭುವನ್ನು ಜನಮಾನಸಕ್ಕೆ ಪರಿಚಯಿಸುವ ಮೂಲಕ ವಚನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಅವರ ವಚನಗಳಲ್ಲಿ ಪಾರಮಾರ್ಥಿಕ ಸಾಧನೆಯನ್ನು ಹೆಚ್ಚು ಪ್ರಸ್ತಾಪಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು. ಅನುಭವ ಮಂಟಪದ ಪ್ರಮುಖನಾಗಿದ್ದ ಹಡಪದ ಅಪ್ಪಣ್ಣನ ಜಾತ್ಯಾತೀತ ನೆಲೆಗಟ್ಟಿನ ಸಿದ್ಧಾಂತ ಮತ್ತು ಕಾಯಕ ನಿಷ್ಠೆ ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದರು.
    ತಹಸೀಲ್ದಾರ್ ಕವಿರಾಜ್, ಇಒ ಸಿ.ಆರ್.ಪ್ರವೀಣ್, ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್, ಹಡಪದ ಅಪ್ಪಣ ಕ್ಷೌರಿಕ ಸಮಾಜದ ಅಧ್ಯಕ್ಷ ಮಲ್ಲೇಶಪ್ಪ, ಸವಿತಾ ಸಮಾಜದ ಅಧ್ಯಕ್ಷ ಪರಮೇಶ್, ಮುಖ್ಯಾಧಿಕಾರಿ ರುದ್ರೇಶ್, ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಲಾಖೆ ಎಚ್.ಡಿ.ರೇವಣ್ಣ, ಕಾರ್ಮಿಕ ನಿರೀಕ್ಷಕಿ ಶಶಿಕಲಾ, ಸಮಾಜದ ರಾಕೇಶ್, ಓಂಕಾರಪ್ಪ, ಗಂಗಾಧರಪ್ಪ, ಬಸವರಾಜು, ಆನಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts