More

    ನನ್ನ ಹೋರಾಟ ಬಿಎಸ್‌ವೈ ಕುಟುಂಬ ರಾಜಕಾರಣದ ವಿರುದ್ಧ

    ಸೊರಬ: ಹಿಂದುಪರ ಹೋರಾಟಗಾರರನ್ನು ಹತ್ತಿಕ್ಕುವ ಹಾಗೂ ಹಿಂದು ಧರ್ಮದ ಪರವಾಗಿ ಧ್ವನಿ ಎತ್ತುವವರನ್ನು ತುಳಿಯುವ ಕೆಲಸ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

    ಪಟ್ಟಣದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಷ್ಟ್ರಭಕ್ತರ ಬಳಗದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನನ್ನ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ನೀಡಲಿಲ್ಲ ಎಂದು ದೂರಿದರು.
    ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧವಾಗಿ ಪಕ್ಷದಲ್ಲಿ ಕಾರ್ಯಚಟುವಟಿಕೆ ನಡೆಯುತ್ತಿದೆ. ಒಂದು ಕುಟುಂಬಕ್ಕೆ ಒಂದು ಹುದ್ದೆ ಎನ್ನುವ ಸಿದ್ಧಾಂತವನ್ನು ಗಾಳಿಗೆ ತೂರಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೇನೆ. ಪ್ರಸ್ತುತ ಪಕ್ಷದ ಯಾವುದೇ ಹುದ್ದೆಯಲ್ಲೂ ಇಲ್ಲ, ಅಧಿಕಾರದಲ್ಲಿಯೂ ಇಲ್ಲ. ಪಕ್ಷ ಸಂಘಟನೆಗಾಗಿ ಕಳೆದ ನಾಲ್ಕು ದಶಕದಿಂದ ಶ್ರಮಿಸಿದ್ದೇನೆ. ಪುತ್ರ ಕಾಂತೇಶ್‌ಗೆ ಟಿಕೆಟ್ ಕೇಳಿದ್ದೆ ಅಷ್ಟೆ. ಇದೀಗ ಪಕ್ಷದಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣದ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವ ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು.
    ಮಾನಸಿಕವಾಗಿ ಅಮಿತ್ ಷಾ ಒಪ್ಪಿಗೆ?
    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಯಲ್ಲಿ ಭೇಟಿಯಾಗಲು ಆಹ್ವಾನ ನೀಡಿದ್ದರು. ನಂತರ ಅವರ ಭೇಟಿ ಸಾಧ್ಯವಾಗಲಿಲ್ಲ. ಇದರಿಂದ ತಮ್ಮ ಸ್ಪರ್ಧೆಗೆ ಅವರು ಮಾನಸಿಕವಾಗಿ ಒಪ್ಪಿಗೆ ನೀಡಿದಂತೆ ತೋರುತ್ತಿದೆ. ಇದೇ ನನಗೆ ಲಾಭವಾಗುವ ಸಾಧ್ಯತೆ ಇದೆ. ನನ್ನ ಸ್ಪರ್ಧೆ ಏನಿದ್ದರೂ ಬಿಎಸ್‌ವೈ ಕುಟುಂಬ ರಾಜಕಾರಣದ ವಿರುದ್ಧವೇ ಹೊರತು, ಕೇಂದ್ರದ ವಿರುದ್ಧವಲ್ಲ. ಈಗಾಗಲೇ ಹಿಂದುಪರ ಹೋರಾಟದ ಧ್ವನಿಗಳಾದ ಸಿ.ಟಿ.ರವಿ, ಬಸನಗೌಡ ಯತ್ನಾಳ್, ಪ್ರತಾಪ್‌ಸಿಂಹ ಅವರನ್ನು ಬದಿಗಿರಿಸುವ ಕೆಲಸವನ್ನು ಮಾಡಲಾಗಿದೆ. ಅಂತಹ ನಾಯಕರಿಗೆ ನ್ಯಾಯ ದೊರಕಿಸಿಕೊಡಬೇಕು ಎನ್ನುವ ಬಲವಾದ ಉದ್ದೇಶ ಹೊಂದಿದ್ದೇನೆ ಎಂದರು.
    ಸಂಘಟನೆಯನ್ನು ಬಲಪಡಿಸಿಕೊಂಡು ಈ ಬಾರಿ ಗೆಲುವನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಚೇರಿಯನ್ನು ಉದ್ಘಾಟಿಸಲಾಗುತ್ತಿದೆ. ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಏ.12ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು.
    ನಾನು ಸ್ಪರ್ಧೆ ಮಾಡುವುದು ಖಚಿತವಾಗುತ್ತಿದ್ದಂತೆ ಹಿಂದುಳಿದ ವರ್ಗದ ಸಮುದಾಯವರು ಸೇರಿದಂತೆ ಎಲ್ಲ ವರ್ಗದವರು ಬೆಂಬಲ ಸೂಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದುಪರ ಸಂಘಟನೆಗಳು ನನ್ನೊಂದಿಗೆ ಇವೆ. ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ರಾಷ್ಟ್ರಭಕ್ತ ಬಳಗದ ತಾಲೂಕು ಸಂಚಾಲಕ ಕೆ.ಪ್ರಭಾಕರ ರಾಯ್ಕರ್, ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ, ಪುರಸಭೆ ಮಾಜಿ ಸದಸ್ಯ ಮಹೇಶ ಗೌಳಿ, ಬಜರಂಗದಳ ತಾಲೂಕು ಮಾಜಿ ಸಂಚಾಲಕ ಅಣ್ಣಪ್ಪ, ಆರ್ಯ ಈಡಿಗ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹೇಮಾ ರವಿ, ಪ್ರಮುಖರಾದ ಅಣ್ಣಾಜಿಗೌಡ, ಪರಮೇಶ್ವರಪ್ಪ್ಪ, ಮಂಜುನಾಥ, ಕಿರಣಕುಮಾರ, ಹರೀಶಗೌಡ, ಮನೋಜ ಗುರುವಪ್ಪ, ಜೆ.ಎಸ್ ರವಿ ಗುಡಿಗಾರ್, ಗಣಪತಿ ಬಂಕಸಾಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts