More

    ಕೆಪಿಟಿ-ಮರಕಡ ಅವೈಜ್ಞಾನಿಕ ರಸ್ತೆ; ಅಪಘಾತ ಸರ್ವೇ ಸಾಮಾನ್ಯ

    ಹರೀಶ್ ಮೋಟುಕಾನ ಮಂಗಳೂರು

    ಅಲ್ಲಲ್ಲಿ ಅವೈಜ್ಞಾನಿಕ ಕ್ರಾಸಿಂಗ್‌ಗಳು, ವೃತ್ತಗಳು, ರಸ್ತೆ ವಿಭಜಕಗಳ ಮೇಲೆ ಬೆಳೆದು ನಿಂತ ಗಿಡಗಳು, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, ಫುಟ್‌ಪಾತ್‌ಗಳಲ್ಲಿ ಅಂಗಡಿಗಳು ಪರಿಣಾಮ ದಿನಂಪ್ರತಿ ಅಪಘಾತ.

    ಇದು ಕೆಪಿಟಿಯಿಂದ ಮರಕಡದ ತನಕ ವಿಮಾನ ನಿಲ್ದಾಣ ಕಾಂಕ್ರೀಟ್ ರಸ್ತೆಯ ಚಿತ್ರಣ. ವಾಹನಗಳ ದಟ್ಟಣೆ ಇರುವ ಈ ರಸ್ತೆ ಅಲ್ಲಲ್ಲಿ ಅವೈಜ್ಞಾನಿಕವಾಗಿದೆ. ಇದರಿಂದಾಗಿ ನಡೆಯುವ ಅಪಘಾತಗಳಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ತುರ್ತು ಗಮನ ವಹಿಸಿ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಫುಟ್‌ಪಾತ್‌ನಲ್ಲೇ ಮಾರಾಟ: ಕೆಪಿಟಿಯಿಂದ ಮರಕಡದ ತನಕ ಕಬ್ಬು ಜ್ಯೂಸ್, ತರಕಾರಿ, ಮೀನು, ಹಣ್ಣು, ಫಾಸ್ಟ್‌ಫುಡ್ ಮಾರಾಟಗಾರರು ಫುಟ್‌ಪಾತ್ ಅನ್ನು ಆಕ್ರಮಿಸಿಕೊಂಡಿದ್ದಾರೆ. ಅತೀ ವೇಗವಾಗಿ ಸಾಗುವ ವಾಹನಗಳು ನಿಯಂತ್ರಣ ಕಳೆದುಕೊಂಡು ಬದಿಗೆ ಸರಿದರೆ ಮಾರಾಟಗಾರರಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಅಪಾಯವಿದೆ. ಕೆಲವು ಕಡೆಗಳಲ್ಲಿ ರಸ್ತೆಗೆ ತಾಗಿಕೊಂಡೇ ಅಂಗಡಿಗಳನ್ನು ಕಟ್ಟಲಾಗಿದೆ.

    ಪಚ್ಚನಾಡಿ ಕ್ರಾಸಿಂಗ್ ಅಪಘಾತ ತಾಣ: ಬೋಂದೆಲ್ ಚರ್ಚ್ ಬಳಿ ಪಚ್ಚನಾಡಿ ಕ್ರಾಸಿಂಗ್ ಅಪಘಾತ ತಾಣವಾಗಿದೆ. ಇಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ. ಬ್ಯಾರಿಕೇಡ್ ಇಟ್ಟು ವೇಗ ನಿಯಂತ್ರಣ ಮಾಡಿದ ಬಳಿಕ ಅಪಘಾತ ಪ್ರಕರಣ ಕಡಿಮೆಯಾಗಿತ್ತು. ಪ್ರಸ್ತುತ ಆ ಬ್ಯಾರಿಕೇಡ್‌ಗಳನ್ನು ತೆಗೆಯಲಾಗಿದೆ. ಅವಶ್ಯ ಇರುವ ಅಪಾಯಕಾರಿ ಸ್ಥಳಗಳಲ್ಲಿ ಹಂಪ್ಸ್ ಅಳವಡಿಸಬೇಕು. ಅಥವಾ ಬ್ಯಾರಿಕೇಡ್ ಇಟ್ಟು ವಾಹನಗಳ ವೇಗ ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

    ಮುಗಿಯದ ಬೋಂದೆಲ್ ಸರ್ಕಲ್ ಕಾಮಗಾರಿ: ಬೋಂದೆಲ್ ಸರ್ಕಲ್ ಕಾಮಗಾರಿ ವರ್ಷದಿಂದ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ. ಈ ವೃತ್ತವೂ ಅವೈಜ್ಞಾನಿಕವಾಗಿದೆ. ಕಾವೂರು ಕಡೆಯಿಂದ ಬರುವ ವಾಹನ ಚಾಲಕರಿಗೆ ಈ ಸರ್ಕಲ್ ಗೊಂದಲ ಉಂಟು ಮಾಡುತ್ತಿದೆ. ಕಾವೂರು ಸರ್ಕಲ್ ಮತ್ತಷ್ಟು ಅಪಾಯಕಾರಿಯಾಗಿದೆ.

    ಕೆಪಿಟಿಯಿಂದ ಮರಕಡ ತನಕ ವಿಮಾನ ನಿಲ್ದಾಣ ರಸ್ತೆಯ ಲೋಪದೋಷಗಳು ಗಮನಕ್ಕೆ ಬಂದಿದೆ. ಪಾಲಿಕೆ ಅಧಿಕಾರಿಗಳು ಈಗಾಗಲೇ ಅಪಾಯಕಾರಿ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಂಚಾರ ವ್ಯವಸ್ಥೆಯಲ್ಲಿ ತುರ್ತು ಆಗಬೇಕಾದ ಕೆಲಸಗಳನ್ನು ಮಾಡಲಾಗುವುದು.
    ಪ್ರೇಮಾನಂದ ಶೆಟ್ಟಿ, ಮೇಯರ್

    ವಿಮಾನ ನಿಲ್ದಾಣ ರಸ್ತೆ ಕೆಪಿಟಿಯಿಂದ ಮರಕಡದ ತನಕ ಅವೈಜ್ಞಾನಿಕವಾಗಿದೆ. ಅಲ್ಲಲ್ಲಿ ಕ್ರಾಸಿಂಗ್ ನೀಡಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಬೋಂದೆಲ್ ಹಾಗೂ ಕಾವೂರು ವೃತ್ತಗಳು ಅಪಾಯಕಾರಿಯಾಗಿದೆ. ಪದವಿನಂಗಡಿ ಕಟ್ಟೆ ಬಳಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಬಳಿಯಲ್ಲೇ ವಾಹನಗಳು ಸಂಚರಿಸುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
    ಗೋಪಾಲಕೃಷ್ಣ ಭಟ್, ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts