More

    ಕೆಪಿಎಲ್ ಪುನರಾರಂಭಕ್ಕೆ ವೇದಿಕೆ ಸಜ್ಜು, ಜುಲೈ-ಆಗಸ್ಟ್‌ನಲ್ಲಿ ಲೀಗ್?

    ರಘುನಾಥ್ ಡಿ.ಪಿ. ಬೆಂಗಳೂರು
    ಕಳೆದ 2 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಯ ಪುನರಾರಂಭಕ್ಕೆ ವೇದಿಕೆ ಸಿದ್ಧಗೊಂಡಿದೆ. ಕೆಲ ಆಟಗಾರರು, ಸಹಾಯಕ ಸಿಬ್ಬಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದ್ದ ಕಾರಣ 2019ರ ಲೀಗ್ ರದ್ದುಗೊಂಡಿದ್ದರೆ, ಕೋವಿಡ್‌ನಿಂದಾಗಿ ಕಳೆದ ವರ್ಷ ಲೀಗ್ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯ ಕ್ರಿಕೆಟಿಗರ ಪಾಲಿಗೆ ‘ಐಪಿಎಲ್‌ಗೆ ಚಿಮ್ಮುಹಲಗೆ’ ಎನಿಸಿದ್ದ ಕೆಪಿಎಲ್‌ಗೆ ಈ ಬಾರಿ ಕಾರ್ಪೋರೇಟ್ ಟಚ್ ನೀಡಲಾಗುತ್ತಿದೆ.

    ಹಾಲಿ ಇರುವ 7 ಫ್ರಾಂಚೈಸಿಗಳ ಜತೆಗೆ ಮಾಡಿಕೊಂಡಿದ್ದ ಒಪ್ಪಂದ ಮುಕ್ತಾಯ ಕಂಡಿರುವ ಹಿನ್ನೆಲೆಯಲ್ಲಿ ಹೊಸದಾಗಿ ಫ್ರಾಂಚೈಸಿಗಳಿಗೆ ಟೆಂಡರ್ ಕರೆಯಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮುಂದಾಗಿದೆ. 2017ರಿಂದ ಐದು ವರ್ಷಗಳ ಅವಧಿಗೆ ಫ್ರಾಂಚೈಸಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹೆಚ್ಚು ಆಟಗಾರರಿಗೆ ಅವಕಾಶ ಸಿಗುವ ನಿಟ್ಟಿನಲ್ಲಿ ಈ ಬಾರಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಕೆಎಸ್‌ಸಿಎ ತೀರ್ಮಾನಿಸಿದೆ. ಎಲ್ಲ ಫ್ರಾಂಚೈಸಿಗಳಿಗೂ ಪತ್ರ ಬರೆದಿರುವ ಕೆಎಸ್‌ಸಿಎ, ಟೆಂಡರ್ ಪ್ರಕ್ರಿಯೆ ಕುರಿತಂತೆ ಮಾಹಿತಿ ರವಾನಿಸಿದೆ.

    ಜುಲೈ-ಆಗಸ್ಟ್‌ನಲ್ಲಿ ಲೀಗ್?
    ಐಪಿಎಲ್ 15ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಕೆಪಿಎಲ್ ವೇಳಾಪಟ್ಟಿಗೆ ಅಂತಿಮ ರೂಪುರೇಷೆ ಸಿದ್ಧಗೊಳ್ಳಲಿದೆ. ಜೂನ್, ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಟೂರ್ನಿ ಆಯೋಜಿಸಲು ಕೆಎಸ್‌ಸಿಎ ಆಸಕ್ತಿವಹಿಸಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ಲೀಗ್ ಆಯೋಜಿಸಲಾಗುವುದು ಎಂದು ಕೆಎಸ್‌ಸಿಎ ಮೂಲಗಳು ‘ವಿಜಯವಾಣಿಗೆ’ ಖಚಿತಪಡಿಸಿವೆ.

    ಮುಂದುವರಿಯಲು 3 ಫ್ರಾಂಚೈಸಿಗಳ ಒಲವು
    ಹಾಲಿ ಫ್ರಾಂಚೈಸಿಗಳ ಪೈಕಿ ಬೆಂಗಳೂರು ಬ್ಲಾಸ್ಟರ್ಸ್‌, ಮೈಸೂರು ವಾರಿಯರ್ಸ್‌ ಹಾಗೂ ಹುಬ್ಬಳ್ಳಿ ಟೈಗರ್ಸ್‌ ತಂಡಗಳು ಲೀಗ್‌ನಲ್ಲಿ ಮುಂದುವರಿಯಲು ಆಸಕ್ತಿ ವಹಿಸಿವೆ ಎನ್ನಲಾಗಿದೆ. ಅಲ್ಲದೆ, ಇತರ ಫ್ರಾಂಚೈಸಿಗಳು ಕೆಎಸ್‌ಸಿಎ ರೂಪಿಸಿರುವ ನೂತನ ನಿಯಮಗಳನ್ನು ಗಮನಿಸಿ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿವೆ ಎಂದು ತಿಳಿದು ಬಂದಿದೆ.

    4 ನಗರಗಳಲ್ಲಿ ಟೂರ್ನಿ
    ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗೆ ಸೀಮಿತವಾಗಿದ್ದ ಲೀಗ್ ಈ ವರ್ಷದಿಂದ ಶಿವಮೊಗ್ಗದಲ್ಲೂ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ ತೀರ್ಮಾನಿಸಿದೆ. ಹೆಚ್ಚು ತಂಡಗಳು ಲೀಗ್‌ನಲ್ಲಿ ಆಡಿದರೆ ಹೆಚ್ಚು ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

    *ಕ್ರಿಕೆಟ್ ಬೆಳೆಯಬೇಕು, ಪ್ರೋತ್ಸಾಹ ನೀಡಬೇಕು ಎಂಬುದೇ ನಮ್ಮ ಉದ್ದೇಶ. ಲೀಗ್‌ನಲ್ಲಿ ಮುಂದುವರಿಯುವ ಆಸಕ್ತಿ ನಮಗಿದೆ. ಕೆಎಸ್‌ಸಿಎ ರೂಪಿಸಿರುವ ನೂತನ ನಿಮಯಗಳನ್ನು ಗಮನಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
    | ಅರ್ಜುನ್ ರಂಗಾ, ಮೈಸೂರು ಫ್ರಾಂಚೈಸಿ

    *ಹಾಲಿ ಇರುವ ಫ್ರಾಂಚೈಸಿಗಳ ಜತೆಗಿನ 5 ವರ್ಷಗಳ ಒಪ್ಪಂದ ಮುಕ್ತಾಯಗೊಂಡಿದೆ. ಹೀಗಾಗಿ ತಂಡಗಳ ಖರೀದಿಗೆ ಹೊಸದಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಈ ಬಾರಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಲೀಗ್ ಆಯೋಜಿಸಲು ತೀರ್ಮಾನಿಸಲಾಗಿದ್ದು, ಫ್ರಾಂಚೈಸಿಗಳ ಪ್ರತಿಕ್ರಿಯೆಯನ್ನು ಗಮನಿಸಿ ತಂಡಗಳ ಸಂಖ್ಯೆಯನ್ನು ಏರಿಸಲಾಗುವುದು.
    | ವಿನಯ್ ಮೃತ್ಯುಂಜಯ, ಕೆಎಸ್‌ಸಿಎ ಖಜಾಂಚಿ ಹಾಗೂ ವಕ್ತಾರ

    ಹಾಲಿ ತಂಡಗಳು
    ಮೈಸೂರು ವಾರಿಯರ್ಸ್‌, ಬಳ್ಳಾರಿ ಟಸ್ಕರ್ಸ್‌, ಬೆಳಗಾವಿ ಪ್ಯಾಂಥರ್ಸ್‌, ಹುಬ್ಬಳ್ಳಿ ಟೈಗರ್ಸ್‌, ಶಿವಮೊಗ್ಗ ಲಯನ್ಸ್, ಬಿಜಾಪುರ ಬುಲ್ಸ್, ಬೆಂಗಳೂರು ಬ್ಲಾಸ್ಟರ್ಸ್‌.
    ಹಾಲಿ ಚಾಂಪಿಯನ್: ಹುಬ್ಬಳ್ಳಿ ಟೈಗರ್ಸ್‌

    ಕರ್ನಾಟಕ ಅಥ್ಲೆಟಿಕ್ಸ್‌ನ ನೆಚ್ಚಿನ ‘ಸ್ಟಾರ್ಟರ್ ರಾಮಣ್ಣ’ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts