More

    ಇಂದು ಡಿಕೆಶಿ ಪದಗ್ರಹಣ | ಮೂವರು ಕಾರ್ಯಾಧ್ಯಕ್ಷರಿಂದಲೂ ಅಧಿಕಾರ ಸ್ವೀಕಾರ

    ಬೆಂಗಳೂರು: ನವ ದೃಷ್ಟಿಕೋನ, ನವ ಚೈತನ್ಯ, ನವ ಕರ್ನಾಟಕ- ಪರಿಕಲ್ಪನೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಗುರುವಾರ (ಜು.2)ಪದಗ್ರಹಣ ಮಾಡಲಿದ್ದಾರೆ.

    ಪಕ್ಷದ ನೂತನ ಕಚೇರಿಯಲ್ಲಿ ಪ್ರಮುಖ ನಾಯಕರ ಸಮ್ಮುಖ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಜವಾಬ್ದಾರಿಯನ್ನು ಹೊಸ ತಂಡಕ್ಕೆ ಹಸ್ತಾಂತರಿಸಲಿದ್ದಾರೆ. ಇದೇ ವೇಳೆ ರಾಜ್ಯದ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದ 10 ಸಾವಿರಕ್ಕೂ ಹೆಚ್ಚು ಕಡೆ ಪರೋಕ್ಷ ಕಾರ್ಯಕ್ರಮ ನಡೆಯಲಿದೆ. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಉಪಸ್ಥಿತಿ ಇರಬೇಕೆಂಬ ಕಾರಣಕ್ಕೆ 150 ಪ್ರಮುಖರಿಗೆ ಮಾತ್ರ ಕಾರ್ಯಕ್ರಮಕ್ಕೆ ಪಾಸ್ ನೀಡಲಾಗಿದೆ.

    ಮುಖ್ಯಾಂಶ

    – 10 ಸಾವಿರ ಸ್ಥಳಗಳಲ್ಲಿ ನೇರ ಪ್ರಸಾರ

    – 1 ಕೋಟಿ ಜನರ ವೀಕ್ಷಣೆಗೆ ಲಿಂಕ್ ವ್ಯವಸ್ಥೆ

    – ಕಾರ್ಯಕರ್ತರಿಂದಲೂ ಪ್ರತಿಜ್ಞೆ ಸ್ವೀಕಾರ

    – ಮುಂಚೂಣಿ ಘಟಕಗಳ ಹಾಲಿ, ಮಾಜಿ ಅಧ್ಯಕ್ಷರು ದೀಪಬೆಳಗುವರು

    – ಎಸ್​ಎಂಕೆ ಸಹಿತ ಪಕ್ಷದ ಮಾಜಿ ಸಿಎಂಗಳು, ಅಧ್ಯಕ್ಷರ ನೆನಪು

    ಈ ಸಂಬಂಧ ಬುಧವಾರ ಪೊಲೀಸ್ ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್ ಕೆಲ ಸೂಚನೆ ನೀಡಿದ್ದಾರೆ. ಅಲ್ಲದೆ, ಆಹ್ವಾನ ಪತ್ರಿಕೆ ಕಳುಹಿಸಲಾಗಿರುವವರು ಮಾತ್ರವೇ ’ಪ್ರತಿಜ್ಞಾ ದಿನ’ ಕಾರ್ಯಕ್ರಮಕ್ಕೆ ಆಗಮಿಸಬೇಕು, ನಾನು ಆಮಂತ್ರಣ ನೀಡಿರುವವರನ್ನು ಬಿಟ್ಟು ಇನ್ಯಾರು ಇಲ್ಲಿಗೆ ಬರಬೇಡಿ. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ ಎಂದು ತಿಳಿಸಿದ್ದಾರೆ.

    ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕದ ಹೊರಗಿನಿಂದ ಏಳು ಗಣ್ಯರು ಪಾಲ್ಗೊಳ್ಳುವರು. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಾಲ್, ಕೇರಳ ಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಸೀಮಾಂಧ್ರದ ಸಾಕೆ ಸೈಲಜನಾಥ್, ಉತ್ತಮ್ ಕುಮಾರ್ ರೆಡ್ಡಿ ಉಪಸ್ಥಿತರಿರುವರು.

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಕರೆಸಲು ಪ್ರಯತ್ನ ನಡೆದಿತ್ತಾದರೂ, ಲಾಕ್​ಡೌನ್ ಹಿನ್ನೆಲೆ ಹಾಗೂ ಭದ್ರತಾ ದೃಷ್ಟಿಯಿಂದ ಸಮಸ್ಯೆಯಾಗಬಹುದೆಂದು ತೀರ್ಮಾನ ಬದಲಿಸಲಾಯಿತೆಂದು ತಿಳಿದುಬಂದಿದೆ.

    ಇದನ್ನೂ ಓದಿ ಸಗಣಿ-ಗಂಜಲ ಬಳಸಿದ್ರೆ ಕೋವಿಡ್​ ಬರಲ್ಲ!

    ಏನೆಲ್ಲ ನಡೆಯಲಿದೆ?: ಬೆಳಗ್ಗೆ 10.45ಕ್ಕೆ ಸೇವಾದಳದಿಂದ ಗೌರವ ರಕ್ಷೆ, ಸಾಮೂಹಿಕ ವಂದೇಮಾತರಂ, ಕೆ.ಸಿ.ವೇಣುಗೋಪಾಲ್ ಅವರಿಂದ ಉದ್ಘಾಟನೆ, ವಿವಿಧ ತಂಡಗಳಿಂದ ಜ್ಯೋತಿ ಪ್ರಜ್ವಲನ, ಸಂವಿಧಾನ ಪೀಠಿಕೆ ಪಠಣ, ಉದ್ಘಾಟನಾ ಭಾಷಣ, ಸಾಮೂಹಿಕ ಪ್ರತಿಜ್ಞೆ, ಅಧಿಕಾರ ಹಸ್ತಾಂತರ, ನಿಕಟಪೂರ್ವ ಅಧ್ಯಕ್ಷರ ಭಾಷಣ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಸ್.ಆರ್.ಪಾಟೀಲರಿಂದ ಶುಭಹಾರೈಕೆ, ಅಧ್ಯಕ್ಷರ ಭಾಷಣ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

    ಸಿಎಂರಿಂದ ಅನುಮತಿ: ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನುಮತಿ ನೀಡಿದ್ದು, ಪೊಲೀಸರು ಅಡ್ಡಿ ಮಾಡುವಂತಿಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಕೆಲವು ಕಡೆಗಳಲ್ಲಿ ಪೊಲೀಸರು ತೊಂದರೆ ನೀಡುತ್ತಿದ್ದಾರೆಂಬ ಕರೆಗಳು ಬಂದಿವೆ. ಈ ಸಂಬಂಧ ಗೃಹ ಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾರು ಧೃತಿಗೆಡುವ ಅಗತ್ಯವಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: 4ರಿಂದ ಕರ್ನಾಟಕ-ಕೇರಳ ಗಡಿ ಬಂದ್: ಕೇರಳ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

    ಮಿಸ್ಡ್ ಕಾಲ್ ಕೊಡಿ, ಲೈವ್ ನೋಡಿ: ಬೆಳಗ್ಗೆ 11ಗಂಟೆಗೆ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, 7800 ಸ್ಥಳಗಳಿಂದ ಝೂಮ್ ಕಾನ್ಪರೆನ್ಸ್, 100ಕ್ಕೂ ಹೆಚ್ಚು ಫೇಸ್​ಬುಕ್ ಖಾತೆಗಳಿಂದ ಲೈವ್ ಇರಲಿದೆ. ಕಾರ್ಯಕ್ರಮ ವೀಕ್ಷಿಸಲು 76763 66666ಕ್ಕೆ ಮಿಸ್ಡ್ ಕಾಲ್ ಕೊಟ್ಟು ಲೈವ್ ನೋಡಬಹುದು.

    ಡಿಕೆಶಿ ಪದಗ್ರಹಣಕ್ಕೆ ಕ್ಷಣಗಣನೆ, ಮಿಸ್ಡ್​ಕಾಲ್​ ಕೊಟ್ಟು ಕಾರ್ಯಕ್ರಮ ಕಣ್ತುಂಬಿಕೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts