More

    ಕೆಪಿಸಿಸಿಗೆ ಕಟ್ಟಬೇಕಿದ್ದ 2 ಲಕ್ಷ ರೂ. ಮದುವೆ ಖರ್ಚಿಗೆ: ವಿಕಲಾಂಗ ಯುವತಿಗೆ ನೆರವಾದ ತೇಜಸ್ವಿ ಪಟೇಲ್

    ದಾವಣಗೆರೆ : ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ತೇಜಸ್ವಿ ಪಟೇಲ್ ಕೆಪಿಸಿಸಿಗೆ ಸಲ್ಲಿಸಬೇಕಿದ್ದ 2 ಲಕ್ಷ ರೂ. ಮೊತ್ತವನ್ನು ಸೋಮವಾರ ವಾಕ್ ಮತ್ತು ಶ್ರವಣ ದೋಷವುಳ್ಳ ಯುವತಿ ಮದುವೆ ಖರ್ಚಿಗೆ ನೀಡಿದರು. ಈ ಮೂಲಕ ಅರ್ಜಿ ಪರಿಗಣಿಸುವಂತೆ ಆಗ್ರಹಿಸಿ ಕೆಪಿಸಿಸಿ ಗಮನ ಸೆಳೆದಿದ್ದಾರೆ.

    ಅಭಿಮಾನಿ ಬಳಗದ ಒತ್ತಾಸೆಯಿಂದಾಗಿ ವಿಧಾನಸಭೆ ಕಣಕ್ಕಿಳಿಯಲು ನಿರ್ಧರಿಸಿರುವ ತೇಜಸ್ವಿ ಪಟೇಲ್, ಕಟ್ಟಡ ನಿಧಿ ರೂಪವಾಗಿ ಕೆಪಿಸಿಸಿಗೆ ಹಣ ನೀಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ 2 ಲಕ್ಷ ರೂ. ಡಿಡಿಯನ್ನು ಕೆಪಿಸಿಸಿ ಬದಲು ಮದುವೆ ನಿಶ್ಚಯ ಮಾಡಿದ್ದ ಯುವತಿಯ ಬಡ ಕುಟುಂಬಕ್ಕೆ ನೀಡಿ ನೆರವಾಗಿದ್ದಾರೆ.

    ಚನ್ನಗಿರಿ ತಾಲೂಕು ಬೆಳಲಗೆರೆ ಗ್ರಾಮದ ದಿ.ಅಖಾಡದರ ರಂಗಪ್ಪ-ಯಲ್ಲಮ್ಮ ದಂಪತಿಗೆ ಇದ್ದೊಬ್ಬ ಮಗ ಮೃತಪಟ್ಟಿದ್ದಾನೆ. ಉಳಿದ ಏಳು ಮಂದಿ ಹೆಣ್ಣು ಮಕ್ಕಳಲ್ಲಿ ಐವರಿಗೆ ವಾಕ್ ಮತ್ತು ಶ್ರವಣ ದೋಷ ಸಮಸ್ಯೆ ಇದೆ. ಇವರ ಪೈಕಿ ಇಬ್ಬರದು ಮದುವೆಯಾಗಿದೆ. ಕೊನೆಯ ಮಗಳು ಕೆಂಚಮ್ಮಳ ವಿವಾಹ ನಿಗದಿಯಾಗಿತ್ತು.

    ಈ ನಡುವೆ ಜಮೀನಿನ ಸಮಸ್ಯೆ ಕುರಿತಂತೆ ತೇಜಸ್ವಿ ಪಟೇಲ್ ಬಳಿ ಬಂದಿದ್ದ ಕುಟುಂಬ, ಆರ್ಥಿಕ ನೆರವು ಸಿಕ್ಕರೆ ಮಗಳ ಮದುವೆ ಮಾಡುವುದಾಗಿ ಹೇಳಿದ್ದರು. ಆದರೆ, ಪರಿಶಿಷ್ಟಿ ಪಂಗಡದ ಈ ಕುಟುಂಬಕ್ಕೆ ಸಮಾಜ ಕಲ್ಯಾಣ ಇತರೆ ಇಲಾಖೆ ಹಣಕಾಸು ಸೌಲಭ್ಯ ಸಿಗುವ ನಿರೀಕ್ಷೆ ಸಹ ಫಲಿಸಲಿಲ್ಲ. ಕೊನೆಗೆ ತೇಜಸ್ವಿ ಪಟೇಲ್ ನೀಡಿದ ಭರವಸೆ ಈಡೇರಿಸಿದರು.

    ನ.27ರಂದು ದಾವಣಗೆರೆಯ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ತಯಾರಿ ನಡೆಸಿ ಆಮಂತ್ರಣ ಪತ್ರಿಕೆ ಸಿದ್ಧ ಮಾಡಿಕೊಂಡಿದ್ದ ಕುಟುಂಬಕ್ಕೆ, ತೇಜಸ್ವಿ ಪಟೇಲ್ 2 ಲಕ್ಷ ರೂ. ಡಿಡಿ ನೀಡಿದರು.

    ಕೆಪಿಸಿಸಿಗೆ ಇದು ಸಣ್ಣ ಮೊತ್ತ. ಆದರೆ, ಈ ಕುಟುಂಬಕ್ಕೆ ದೊಡ್ಡ ನೆರವಾಗಲಿದೆ. ಇದರೊಂದಿಗೆ ಕೆಪಿಸಿಸಿ ನನ್ನ ಅರ್ಜಿಯನ್ನು ಪರಿಗಣಿಸಬೇಕೆಂದು ಕೋರಿದ್ದೇನೆ. ಇದನ್ನು ಮಾನ್ಯ ಮಾಡುವ ವಿಶ್ವಾಸವಿದೆ. ಕೆಪಿಸಿಸಿ ಸಮ್ಮತಿಸದಿದ್ದರೆ ಪರ್ಯಾಯವಾಗಿ ಸಂಪನ್ಮೂಲ ಸಂಗ್ರಹಿಸಿ ಕುಟುಂಬಕ್ಕೆ ನೀಡಲಾಗುವುದು ಎಂದೂ ತೇಜಸ್ವಿ ಪಟೇಲ್ ಹೇಳಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts