More

    ಸದ್ಯಕ್ಕಿಲ್ಲ ಕರಾವಳಿಗೆ ಬ್ರಿಟನ್ ಆತಂಕ

    ಮಂಗಳೂರು: ಬ್ರಿಟನ್‌ನಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಗೆ ಮರಳಿದ್ದವರಲ್ಲಿ ಅನೇಕರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಹೊಸ ಮಾದರಿಯ ರೂಪಾಂತರಿ ಕರೊನಾ ವೈರಸ್ ಕಾಣಿಸಿಕೊಳ್ಳುವ ಭೀತಿ ಸದ್ಯಕ್ಕಿಲ್ಲ.
    ಡಿ.7ರ ನಂತರ ಬ್ರಿಟನ್‌ನಿಂದ ದ.ಕ. ಜಿಲ್ಲೆಗೆ ಒಟ್ಟು 66 ಮಂದಿ ಆಗಮಿಸಿರುವುದನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಅವರಲ್ಲಿ 47 ಮಂದಿಯ ಗಂಟಲು ದ್ರವ ಮಾದರಿಯನ್ನು ಬುಧವಾರ ಬೆಳಗ್ಗೆಯೇ ಸಂಗ್ರಹಿಸಲಾಗಿದೆ. 41 ಮಂದಿಯ ವರದಿ ಸಂಜೆ ಲಭಿಸಿದ್ದು, ನೆಗೆಟಿವ್ ಬಂದಿದೆ.

    ಉಳಿದ ಆರು ಮಂದಿಯ ವರದಿ ಇನ್ನಷ್ಟೇ ಬರಬೇಕಿದೆ. ಪರೀಕ್ಷೆಗೆ ಬಾಕಿ ಇರುವವರ ಗಂಟಲು ದ್ರವ ಮಾದರಿಯನ್ನು ಗುರುವಾರ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ತಿಳಿಸಿದರು. ಒಟ್ಟು 66 ಮಂದಿಯಲ್ಲಿ ಮೂವರು ಬ್ರಿಟನ್‌ಗೆ ಹಿಂತಿರುಗಿದ್ದಾರೆ. ಜಿಲ್ಲೆಯ ಇಬ್ಬರು ಬೆಂಗಳೂರಿನಲ್ಲಿದ್ದು, ಅಲ್ಲೇ ಅವರಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಒಬ್ಬರು ಸ್ವದೇಶಕ್ಕೆ ಬರಲು ಟಿಕೆಟ್ ಬುಕ್ ಮಾಡಿದ್ದರೂ ಪ್ರಯಾಣ ರದ್ದುಗೊಳಿಸಿದ್ದಾರೆ.

    ಬ್ರಿಟನ್‌ನಿಂದ ಬಂದವರೆಲ್ಲರೂ ಅಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ದೃಢಪಟ್ಟ ಬಳಿಕವೇ ಆಗಮಿಸಿದ್ದರು. ಇದೀಗ ಸರ್ಕಾರದ ಸೂಚನೆಯಂತೆ ಅವರೆಲ್ಲರನ್ನೂ ಮತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದಕ್ಕಾಗಿ ಆರೋಗ್ಯ ಇಲಾಖೆಯು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದು, ಕಾರ್ಯೋನ್ಮುಖವಾಗಿದೆ.

    ಮನೆಯಲ್ಲೇ ಇರುವುದು ಕಡ್ಡಾಯ: ಬ್ರಿಟನ್‌ನಿಂದ ಇತ್ತೀಚೆಗೆ ಮರಳಿದವರಿಗೆ ವರದಿ ನೆಗೆಟಿವ್ ಬಂದಿದ್ದರೂ ಅವರು ಸದ್ಯಕ್ಕೆ ಹೊರಗಡೆ ತಿರುಗಾಡುವಂತಿಲ್ಲ. 14 ದಿನಗಳ ಕಾಲ ಹೋಮ್ ಐಸೋಲೇಶನ್‌ನಲ್ಲಿ ಇರುವುದು ಕಡ್ಡಾಯವಾಗಿದೆ. ಜಿಲ್ಲೆಗೆ ಆಗಮಿಸಿದವರಲ್ಲಿ ಅನೇಕರು ಬಂದು ಈಗಾಗಲೇ 14 ದಿನ ಕಳೆದಿದೆ. ಈ ಅವಧಿ ಮುಗಿಸಿದವರಿಗೆ ಈಗ ನೆಗೆಟಿವ್ ಬಂದಿದ್ದರೆ ಕ್ವಾರಂಟೈನ್ ಆಗುವ ಅವಶ್ಯಕತೆಯಿಲ್ಲ ಎಂದು ಡಿಎಚ್‌ಒ ಬಾಯರಿ ವಿಜಯವಾಣಿಗೆ ತಿಳಿಸಿದರು.

    ವಿದೇಶದಿಂದ ಬಂದವರಿಗೆ ಪಾಸಿಟಿವ್ ಆದ್ರೆ ಜೀನ್ ಪರೀಕ್ಷೆ
    ಉಡುಪಿ: ಕರೊನಾ ರೂಪಾಂತರದ ವೈರಸ್ ಕಾಣಿಸಿಕೊಂಡಿರುವ ಬ್ರಿಟನ್‌ನಿಂದ ಜಿಲ್ಲೆಗೆ ಆಗಮಿಸಿದ್ದ 5 ಮಂದಿ, ಕೆನಡಾದಿಂದ ಬಂದಿದ್ದ ಇಬ್ಬರು, ಐರ್ಲೆಂಡ್‌ನಿಂದ ಬಂದಿದ್ದ ಒಬ್ಬರ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
    ವಿದೇಶದಿಂದ ಆಗಮಿಸುವರ ಮೇಲೆ ವೈರಸ್ ಹರಡುವುದನ್ನು ನಿಯಂತ್ರಿಸಲು ನಿಗಾ ಇರಿಸಲಾಗಿದೆ. ಡಿ.21ರಂದು ಉಡುಪಿಯ ನಾಲ್ವರು ಹಾಗೂ ಕಾರ್ಕಳದ ಮೂವರು ಸೇರಿದಂತೆ ಒಟ್ಟು 8 ಮಂದಿ ಜಿಲ್ಲೆಗೆ ಆಗಮಿಸಿದ್ದರು. ವರದಿ ನೆಗೆಟಿವ್ ಬಂದಿರುವುದರಿಂದ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸುವುದಿಲ್ಲ. 14 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುತ್ತೇವೆ. ಈ ಮಧ್ಯೆ ಯಾರಿಗಾದರೂ ರೋಗದ ಲಕ್ಷಣ ಕಾಣಿಸಿಕೊಂಡರೆ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸುತ್ತೇವೆ. ಪಾಸಿಟಿವ್ ಬಂದರೆ ಸಾಂಸ್ಥಿಕ, ಆಸ್ಪತ್ರೆ ಕ್ವಾರಂಟೈನ್‌ಗೆ ಸೂಚಿಸುತ್ತೇವೆ ಎಂದು ತಿಳಿಸಿದರು.
    ವಿದೇಶದಿಂದ ಆಗಮಿಸಿದ ಯಾವುದೇ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಲ್ಲಿ ಅವರ ಮಾದರಿಯನ್ನು ಬೆಂಗಳೂರಿನ ಎನ್‌ಐವಿಗೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು. ಅಲ್ಲಿ ಜೀನ್ ಪರೀಕ್ಷೆ ಮಾಡಿ ವೈರಸ್ ಯಾವುದು ಎಂಬುದು ಪತ್ತೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ದ.ಕ. 14, ಉಡುಪಿ 8 ಪಾಸಿಟಿವ್
    ದ.ಕ ಜಿಲ್ಲೆಯಲ್ಲಿ ಬುಧವಾರ ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. 14 ಪಾಸಿಟಿವ್ ಪ್ರಕರಣಗಳಷ್ಟೇ ದಾಖಲಾಗಿವೆ. 35 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಕೋವಿಡ್ ಸಕ್ರಿಯ ಪ್ರಕರಣಗಳು 415ಕ್ಕೆ ಇಳಿಕೆಯಾಗಿವೆ, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 32,673 ಹಾಗೂ ಡಿಸ್ಚಾರ್ಜ್ ಆದವರ ಸಂಖ್ಯೆ 31526ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ 8 ಮಂದಿಗೆ ಕೋವಿಡ್ ದೃಢಪಟ್ಟಿದೆ. 11 ಮಂದಿ ಗುಣವಾಗಿದ್ದಾರೆ. ಸದ್ಯ 75 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts