More

    ಕೋವಿಡ್ ಆಸ್ಪತ್ರೆಯಿಂದ ಜನರಿಗೆ ಅನುಕೂಲ

    ಚಿಕ್ಕೋಡಿ: ಚಿಕ್ಕೋಡಿಯಲ್ಲಿ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಸುಸಜ್ಜಿತ ಅತ್ಯಾಧುನಿಕ ಸೌಕರ್ಯವುಳ್ಳ ಕೋವಿಡ್ ವಾರ್ಡ್ ಪ್ರಾರಂಭಿಸಿದ್ದು, ಚಿಕ್ಕೋಡಿ ತಾಲೂಕಿನ ಜನರಿಗೆ ವರದಾನವಾಗಲಿದೆ ಎಂದು ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮೀಜಿ ಹೇಳಿದ್ದಾರೆ.

    ಪಟ್ಟಣದ ಬಸವ ಸರ್ಕಲ್ ಬಳಿ ಇರುವ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತೆಯಲ್ಲಿ ಮಂಗಳವಾರ ಕೋವಿಡ್ ವಾರ್ಡ್ ಉದ್ಘಾಟಿಸಿ ಮಾತನಾಡಿ, ಡಾ. ಪ್ರಭಾಕರ ಕೋರೆ ಅವರ ಮುತುವರ್ಜಿ ಹಾಗೂ ಸಾಮಾಜಿಕ ಕಾಳಜಿಯಿಂದ ವಾರ್ಡ್ ನಿರ್ಮಿಸಿರುವುದರಿಂದ ಕೋವಿಡ್ ಸೋಂಕಿತರಿಗೆ ಅನೂಕೂಲವಾಗಲಿದೆ ಎಂದರು.

    ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಮಾತನಾಡಿ, ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಭಾಗದ ಜನತೆಗೆ ಉಪಯೋಗವಾಗುವಂತೆ ಕೋವಿಡ್ ಘಟಕ ಆರಂಭಿಸಿದ್ದೇವೆ. 60 ಹಾಸಿಗೆಗಳ ಪೈಕಿ 15 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದರು.

    ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ಮಾತನಾಡಿ, ಕೋವಿಡ್ ವಾರ್ಡ್‌ನಲ್ಲಿ ಸೋಂಕಿತರಿಗೆ ಉಸಿರಾಟದ ತೊಂದರೆ ಆಗದ ಹಾಗೆ ಹೈ ಪ್ರೋ ಆಕ್ಸಿಜನ್, ವೆಂಟಿಲೇಟರ್ ಜತೆಗೆ ಉನ್ನತ ಮಟ್ಟದ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

    ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಧೀರಜ್ ಶಿವರಾಮ ಪೋಳ್ ಮಾತನಾಡಿ, ಕೋವಿಡ್ ಸೋಂಕಿತರು ಗಾಬರಿ ಪಡುವ ಅವಶ್ಯಕತೆ ಇಲ್ಲ. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖರಾಗಲೂ ಸಾಧ್ಯ ಎಂದು ತಿಳಿಸಿದರು.

    ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ ಭಾತೆ ಮಾತನಾಡಿದರು. ಅಜಯ ಕವಟಗಿಮಠ, ಪುರಸಭೆ ಸದಸ್ಯ ಸಂಜಯ ಕವಟಗಿಮಠ, ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಶಾಂತ ಪೂಜಾರಿ, ಡಾ. ಶಂಕರ ತೋರಸೆ, ಡಾ. ಪರಮಾನಂದ ಹೊಸಪೇಟಿ ಡಾ. ಪ್ರಭಾವತಿ ಮುಗಳಕೋಡ, ಡಾ.ಸೌಮ್ಯಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಗುಡ್ನವರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts